ಕನ್ನಡ ವಾರ್ತೆಗಳು

ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಸರಣಿ ಅಪಘಾತ 12 ಬಲಿ

Pinterest LinkedIn Tumblr

acdent_tumkur_phic

ಚಳ್ಳಕೆರೆ/ತುಮಕೂರು,ಏ.30: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಇಂದು ಸಂಭವಿಸಿದ ಸರಣಿ ಅಪಘಾತದಲ್ಲಿ ಒಟ್ಟು 12 ಮಂದಿ ಬಲಿಯಾಗಿದ್ದಾರೆ.
ಚಳ್ಳಕೆರೆ ತಾಲೂಕು ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯ ಹೆಗ್ಗೆರೆ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಚಾಲಕ ಹಾಗೂ 8 ಮಂದಿ ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿ, ಕ್ರೂಸರ್ ಮತ್ತು ಖಾಸಗಿ ಬಸ್‌ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೃತಪಟ್ಟವರನ್ನು ಬಳ್ಳಾರಿಯ ಡಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿನಿಯರಾದ ಶೃತಿ(೨೦), ಶಾಂತಿ(21), ಕಾವ್ಯ(20), ಸುಧಾ(20), ಹರ್ಷಿತಾ(20), ಜಯಶ್ರೀ(21), ಸವಿತಾ(20), ಭಾರತಿ(21) ಹಾಗೂ ಕ್ರೂಸರ್ ಚಾಲಕ ಚಂದ್ರೇಗೌಡ(25) ಎಂದು ಗುರುತಿಸಲಾಗಿದೆ.

8 ಮಂದಿ ವಿದ್ಯಾರ್ಥಿನಿಯರು ನಿನ್ನೆ ಬೆಳಗ್ಗೆ ಬೆಂಗಳೂರಿನ ಪರಿಪೂರ್ಣ ಇನ್ಫೋಟಿಕ್ ಸೆಂಟರ್ ಎಂಬ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಕೆಲಸದ ಆಯ್ಕೆಗೆ ಸಂದರ್ಶನಕ್ಕೆ ಹಾಜರಾಗಿದ್ದರು. ಸಂದರ್ಶನ ಮುಗಿಸಿ ರಾತ್ರಿ ಬಳ್ಳಾರಿಗೆ ವಾಪಸ್ ಹಿಂದಿರುಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 150 ಎ ಮಾರ್ಗದ ಸಾಣಿಕೆರೆ ಸಮೀಪದ ಹೆಗ್ಗೆರೆ ಗೇಟ್ ಬಳಿ ದೇವದುರ್ಗದಿಂದ ಬಳ್ಳಾರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕ್ರೂಸರ್ ವಾಹನ ಡಿಕ್ಕಿಯಾಗಿದೆ.

ಕ್ರೂಸರ್ ಹಿಂದೆಯೇ ಬರುತ್ತಿದ್ದ ಖಾಸಗಿ ಬಸ್ ಸಹ ಕ್ರೂಸರ್‌ನ ಹಿಂಬದಿಗೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ನಡುವೆ ಸಿಲುಕಿಕೊಂಡ ಕ್ರೂಸರ್ ಸಂಪೂರ್ಣ ಜಖಂಗೊಂಡು ಚಾಲಕ ಸೇರಿದಂತೆ ಹಿಂಭಾಗದಲ್ಲಿ ಕುಳಿತಿದ್ದ 8 ಮಂದಿ ವಿದ್ಯಾರ್ಥಿನಿಯರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಉಳಿದಂತೆ 7ಮಂದಿ ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ಅವರನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್, ಎಎಸ್‌ಪಿ ಪರಶುರಾಮಪ್ಪ, ಡಿವೈಎಸ್‌ಪಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: 3 ಸಾವು:
ತುಮಕೂರಿನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಟೆಂಪೋಟ್ರಾವಲರ್ ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಅಕ್ಕ-ತಂಗಿ ಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ನಾಗೇಶ್(30) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Write A Comment