ಮಂಗಳೂರು,ಎ.27 : ಶ್ರೀ ಮಂಗಳಾದೇವಿ ಕ್ರಿಯೇಷನ್ಸ್, ಕುಡ್ಲ ಇವರ ಚೊಚ್ಚಲ ತುಳು ಚಿತ್ರ “ಬೊಳ್ಳಿಲು” ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್ 29ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್, ಕದ್ರಿ ತಿಳಿಸಿದ್ದಾರೆ.
ಚಿತ್ರದ ಬಿಡುಗಡೆ ಸಮಾರಂಭದ ಕುರಿತು ನಗರದ ಮಲ್ಲಿಕಟ್ಟೆಯ `ಸುಮ ಸದನ’ದಲ್ಲಿ ಎಪ್ರಿಲ್ 26 ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರವು ಹೊಸ ಹಾಗೂ ಪ್ರಬುದ್ಧ ಕಲಾವಿದರನ್ನು ಹೊಂದಿದ್ದು, ಉತ್ತಮ ಕಥೆ ಹಾಗೂ ಮನೋರಂಜನೆಯನ್ನು ಹೊಸ ಶೈಲಿಯಲ್ಲಿ ಚಿತ್ರ ಪ್ರೇಮಿಗಳಿಗೆ ನೀಡಿದ್ದೇವೆ ಎಂದು ಹೇಳಿದರು.
ತುಳು ಚಿತ್ರಗಳು ಎಷ್ಟೇ ಬಂದರೂ ಪ್ರೇಕ್ಷಕರಿಗೆ ಮನರಂಜನೆ ಕಡಿಮೆಯಾಗುವುದಿಲ್ಲ.“ಬೊಳ್ಳಿಲು” ಕಾದಂಬರಿಯನ್ನು ಆಧಾರಿಸಿ ಮಾಡಿದ ಚಿತ್ರವಾದುದರಿಂದ ಇಲ್ಲಿ ವಿಶೇಷ ಕಥೆಯೊಂದಿಗೆ ಚೆನ್ನಾಗಿ ಮೂಡಿಬಂದಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಿತ್ರ ಹೆರಾಜೆ ಹೇಳಿದರು.
ಚಿತ್ರದ ಕಲಾವಿದ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ವಿಶ್ವನಾಥ್ ಪಂಡಿತ್ ಮಾತನಾಡಿ ತುಳುವಿನಲ್ಲಿ ಎಷ್ಟೇ ಚಿತ್ರಗಳು ಬಂದರೂ ಹೊಸತನವೆಂಬುದು ಇದ್ದೇ ಇರುತ್ತದೆ. .“ಬೊಳ್ಳಿಲು” ವಿಶೇಷ ರೀತಿಯಲ್ಲಿ ಮೂಡಿ ಬಂದಿದ್ದು ಹೊಸತನದೊಂದಿಗೆ ಹೊಸ ಕಲಾವಿದರ ಪ್ರಯತ್ನವನ್ನು ತುಳುವರು ಪ್ರೋತ್ಸಾಹಿಸ ಬೇಕೆಂದು ವಿನಂತಿಸಿದರು.
ನಾಯಕ ನಟ ಶ್ರವಣ್ ಕುಮಾರ್ ಹಾಗೂ ನಟಿ ಸೌಜನ್ಯ ಹಗ್ಡೆ ಮಾತನಾಡಿ ತುಳು ಸಿನಿಮಾ ರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ತುಳು ಚಿತ್ರ ಪ್ರೇಮಿಗಳ ಪ್ರೋತ್ಸಹವೇ ಕಾರಣ, ನಮ್ಮ ಚಿತ್ರಕ್ಕೂ ನೀವು ಆರ್ಶೀವದಿಸಿ ಎಂದು ಕೇಳಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಲಯನ್ ಸದಾಶಿವ ಹೆಗ್ಡೆ, ಶಶಿಕಲಾ ರಾಜಶೇಖರ್, ಶಕೀಲಾ ಶರತ್ ಮೊದಲಾದವರು ಉಪಸ್ಥಿತರಿದ್ದರು.
ಕಾದಂಬರಿ ಆಧಾರಿತ ವಿಭಿನ್ನ ಪ್ರೇಮಕಥೆಯ ತುಳು ಚಿತ್ರ “ಬೊಳ್ಳಿಲು” ಬಗ್ಗೆ
ಶರತ್‌ಚಂದ್ರ ಕುಮಾರ್ ಕದ್ರಿ ನಿರ್ದೇಶನದಲ್ಲಿ ಶ್ರೀ ಮಂಗಳಾದೇವಿ ಕ್ರಿಯೇಷನ್ಸ್, ಕುಡ್ಲ ಇವರ ಚೊಚ್ಚಲ ತುಳು ಚಿತ್ರ “ಬೊಳ್ಳಿಲು” ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಡುಗಡೆಗೆ ಸಿದ್ದಗೊಂಡಿದೆ.
ಚಿತ್ರವು ವಿಭಿನ್ನ ರೀತಿಯ ಪ್ರೇಮಕಥೆಯನ್ನು ಒಳಗೊಂಡಿದೆ, ಶಶಿಕಲಾ ರಾಜಶೇಖರ್ ಅವರ `ದುರಂತ ಪ್ರೀತಿ’ ಎಂಬ ಕಾದಂಬರಿಯನ್ನು ಆಧಾರಿಸಿ ಚಿತ್ರದ ಕ್ಲೈಮಾಕ್ಸ್ ಸಿದ್ದಗೊಳಿಸಲಾಗಿದೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಶರತ್‌ಚಂದ್ರ ಕುಮಾರ್ ಕದ್ರಿ ಅವರದು. ಕಿರುತೆರೆ ನಟ ಸುರೇಶ್ ರೈ ಚಿತ್ರದ ಪ್ರಧಾನ ಪಾತ್ರದಲ್ಲಿದ್ದಾರೆ.
ಮಿತ್ರ ಹೆರಾಜೆ, ಶಕೀಲಾ ಶರತ್ ಹಾಗೂ ಸಾಲ್ಯಾನ್ ಬ್ರದರ್ಸ್, ಶಶಿಕಲಾ ರಾಜಶೇಖರ್ ಚಿತ್ರದ ನಿರ್ಮಾಪಕರು. ಸಂತೋಷ್ ಹೆರಾಜೆ ಸಹ ನಿರ್ಮಾಪಕರು.ಚಿತ್ರದಲ್ಲಿ ಐದು ಹಾಡುಗಳಿವೆ. ಜಿಮ್ಮಿ ಜಿಪ್ ಅಟೋ ಯಂತ್ರವನ್ನು ಹಾಡುಗಳ ಹಾಗೂ ಸನ್ನಿವೇಶಗಳ ಚಿತ್ರೀಕರಣಕ್ಕೆ ಬಳಸಲಾಗಿದೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಜಿತಿನ್ ಶ್ಯಾಂ ಚಿತ್ರಕ್ಕೆ ಸಂಗಿತ ನೀಡಿದ್ದಾರೆ. ಸಾಹಿತ್ಯ ಶರತ್‌ಚಂದ್ರ ಕುಮಾರ್ ಕದ್ರಿ ಯವರದು. ಬಾಲಿವುಡ್ ಗಾಯಕರಾದ ವಿನೋದ್ ರಾಠೋಡ್, ಡಾ. ನಿತಿನ್ ಆಚಾರ್ಯ, ಸೊನಾಲಿ, ಸುದೀಕ್ಷಿಣ ದೀಕ್ಷಿತ್, ಸಮೀರ್ ಥಾತೆ ಇವರುಗಳ ಕಂಠಸಿರಿಯಲ್ಲಿ ಹಾಡುಗಳು ಸುಮಧುರವಾಗಿ ಮೂಡಿ ಬಂದಿವೆ.
ಜಿತಿನ್ ಶ್ಯಾಂ ಮೊದಲಬಾರಿ ತುಳುವಲ್ಲಿ ಸಂಗೀತ ನಿರ್ದೇಶನ ಮಾಡಿದ್ದು, ಅವರು ಬಾಲಿವುಡ್‌ನಲ್ಲಿ ಸುಮಾರು 6000ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನೀಡಿದ್ದಾರೆ.
ಕೋಸ್ಟಲ್‌ವುಡ್ ಭೀಷ್ಮ ದಿವಂಗತ ಕೆ.ಯನ್ ಟೇಲರ್ ಅವರು ಚಿತ್ರಕ್ಕೆ ಮಾರ್ಗದರ್ಶಕರಾಗಿದ್ದು. ಚಿತ್ರದ ಗೌರವ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರು. ಈ ಚಿತ್ರದ ಸನ್ನಿವೇಶಗಳಿಗೆ ಅವರ ಸ್ಪೂರ್ತಿಯೂ ಇದೆ.
ಮಂಗಳೂರು ಹಾಗೂ ಸುತ್ತಮುತ್ತಲು ೩೧ ದಿನಗಳ ಚಿತ್ರೀಕರಣ ನಡೆದಿದೆ. ಮೊದಲ ಬಾರಿಗೆ ಶ್ರವಣ್ ಕುಮಾರ್ ಕದ್ರಿ ನಾಯಕ ನಟ ಹಾಗೂ ಪ್ರತಿಕ್ಷಾ ಪೂಜಾರಿ ನಾಯಕಿಯಾಗಿ ಹೊಸ ಪರಿಚಯ. ಪಿತಾಂಬರ ಹೆರಾಜೇ, ಸೌಜನ್ಯ ಹೆಗ್ಡೆ, ಕ್ಯಾಲಿ ಡಿ.ಯಸ್, ವಿಶ್ವನಾಥ್ ಪಂಡಿತ್, ದಯಾನಂದ ಕುಲಾಲ್, ದೀಪಕ್ ರೈ ಪಣಾಜೆ, ಪ್ರಕಾಶ್ ತೂಮಿನಾಡು, ನಿತಿನ್ ಹೆರಾಜೆ, ಸೋಮನಾಥ್ ಶೆಟ್ಟಿ, ಸೌಮ್ಯ ಸಾಲಿಯಾನ್, ರೂಪ ವರ್ಕಾಡಿ, ರಂಗನಾಥ್, ಜಯಂತ್ ಕೊಂಚಾಡಿ, ಯಕ್ಷಿತ, ಸ್ವಸ್ತಿಕ, ಭಾರತೀ ಮಹಾಬಲ, ಚಿನ್ನು ಕೊಟ್ಟಾರಿ, ಮನೋಜ್ ಹೆರಾಜೆ, ಡಾ. ಅನಿಲ್ ಹೆರಾಜೆ, ಡಾ. ನಿತಿನ್ ಆಚಾರ್ಯ, ರಾಕೇಶ್, ವಿದ್ಯಾ ರಾಕೇಶ್ ಮೊದಲಾದ ಪ್ರಬುದ್ಧ ಕಲಾವಿದರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಕೆಮರಾ ರಾಜ್ಯ ಪ್ರಶಸ್ತಿ ವಿಜೇತ ವೇಣುಕುಮಾರ್, ಕೊರಿಯೋಗ್ರಾಪಿ ನಾಟ್ಯ ಸಾಮ್ರಾಟ್ ರಾಜೇಶ್ ಬ್ರಹ್ಮಾವರ್, ಸಹ ನಿರ್ದೇಶನ ಹಾಗೂ ಸಾಹಸ ರಂಜಿತ್ ಸುವರ್ಣ ಕೂಳೂರು, ಸಹಾಯಕ ನಿರ್ದೇಶನ ಜಗದೀಶ್, ಗುರುದತ್ ಪೈ, ಕಲೆ ರಂಗನಾಥ್, ಸಂಕಲನ ಪ್ರಶಸ್ತಿ ವಿಜೇತ ಸುಜಿತ್ ನಾಯಕ್, ಸ್ಟುಡಿಯೋ ಆರ್.ಆರ್ ರೆಕಾರ್ಡಿಂಗ್ ಥಿಯೇಟರ್ ಬೆಂಗಳೂರು, ನಿರ್ಮಾಣ ನಿರ್ವಹಣೆ ಸತೀಶ್ ಬ್ರಹ್ಮಾವರ್, ಸಂಪೂರ್ಣ ಸಲಹೆ ಸಹಕಾರ ಜಿ.ಕೆ ಪುರುಷೋತ್ತಮ್.“ಬೊಳ್ಳಿಲು”ಸೆನ್ಸಾರ್ ಮಂಡಳಿಯಿಂದ ಉತ್ತಮ ಚಿತ್ರವೆಂದು ಪ್ರಶಂಶೆಗೆ ಪಾತ್ರವಾಗಿದ್ದು, `ಯು’ ಸರ್ಟಿಫಿಕೇಟ್ ಸಿಕ್ಕಿದೆ.
ಮೊದಲ ಹಂತದಲ್ಲಿ ಚಿತ್ರವು ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಬಿಡುಗಡೆಗೊಳ್ಳಲಿದ್ದು, ದಿನಾಂಕ 28.04.2016ರಂದು ಸಂಜೆ 5ಗಂಟೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ಚಿತ್ರದ ಬಿಡುಗಡೆ ಸಮಾರಂಭ ನಡೆಯಲಿದೆ. ದಿನಾಂಕ 29.04-2016 ಶುಕ್ರವಾರ ಮಂಗಳೂರಿನ ಸುಚಿತ್ರಾ ಸಿನೆಮಾ ಮಂದಿರದಲ್ಲಿ ಸಾಂಕೇತಿಕ ಬಿಡುಗಡೆಯೊಂದಿಗೆ ಚಿತ್ರ ಪ್ರದರ್ಶನ ಆರಂಭಿಸಲಿದೆ.