ಕನ್ನಡ ವಾರ್ತೆಗಳು

ಅಬ್ಬಕ್ಕ ಪ್ರಶಸ್ತಿಗೆ ಬಿ.ಎಂ. ರೋಹಿಣಿ ,ಅಬ್ಬಕ್ಕ ಪುರಸ್ಕಾರಕ್ಕೆ ಹರಿಣಿ ಹಾಗೂ ಲಲಿತಾ ಜಯರಾಂ ಆಯ್ಕೆ

Pinterest LinkedIn Tumblr

abakka_awrd_photo

ಮಂಗಳೂರು,ಏ.20 : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಜಂಟಿಯಾಗಿ ನೀಡುವ `ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಈ ಬಾರಿ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಮತ್ತು `ರಾಣಿ ಅಬ್ಬಕ್ಕ ಪುರಸ್ಕಾರ’ಕ್ಕೆ ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿ ಹರಿಣಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಂ ಆಯ್ಕೆಯಾಗಿದ್ದಾರೆ.

ಡಾ. ಅಮೃತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ, ಕೊಂಕಣಿ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಹಾಗೂ ವಿದ್ವಾಂಸರಾದ ಪ್ರೊ. ಎ.ವಿ. ನಾವಡ, ಡಾ. ವಾಮನ ನಂದಾವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಂದ್ರಹಾಸ ರೈ ಬಿ., ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಉಪಾಧ್ಯಕ್ಷ ಸದಾನಂದ ಬಂಗೇರ ಇವರನ್ನೊಳಗೊಂಡ ಆಯ್ಕೆ ಮಂಡಳಿ ಸಭೆಯಲ್ಲಿ 2015-16 ನೇ ಸಾಲಿಗೆ ಇವರ ಹೆಸರುಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸುವ ಸಲುವಾಗಿ ಈ ವರ್ಷದಿಂದ `ರಾಣಿ ಅಬ್ಬಕ್ಕ ಪುರಸ್ಕಾರ’ವನ್ನು ಇಬ್ಬರಿಗೆ ನೀಡಲು ಸಮಿತಿ ನಿರ್ಧರಿಸಿದೆ.

ಬಿ.ಎಂ. ರೋಹಿಣಿ

ಕಾಸರಗೋಡು ತಾಲೂಕು ಬಂಗ್ರಮಂಜೇಶ್ವರದಲ್ಲಿ ಕೆ. ಕೊಗ್ಗಪ್ಪ ಮತ್ತು ಬಿ.ಎಂ. ದೇವಕಿ ದಂಪತಿಗೆ ಎಪ್ರಿಲ್ 6,1944ರಲ್ಲಿ ಜನಿಸಿದ ಬಿ.ಎಂ. ರೋಹಿಣಿ ಶಿಕ್ಷಕ ತರಬೇತಿಯ ಜೊತೆಗೆ ಹಿಂದಿ ಪ್ರವೀಣ ಮತ್ತು ಕನ್ನಡ ಎಂ.ಎ. ಪದವಿಗಳನ್ನು ಪೂರೈಸಿ ಸುಮಾರು 38 ವರ್ಷಗಳಷ್ಟು ದೀರ್ಘ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಅವರು ಮಂಗಳೂರಿನ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ 27 ವರ್ಷ ಶಿಕ್ಷಕಿಯಾಗಿದ್ದು 2002 ರಲ್ಲಿ ಮೂಲ್ಕಿ ಮೆಡಲಿನ್ ಶಾಲೆಯಿಂದ ನಿವೃತ್ತಿ ಹೊಂದಿದ್ದಾರೆ.

ಅಧ್ಯಾಪನದೊಂದಿಗೆ ಸದಾ ಅಧ್ಯಯನ, ಸಂಶೋಧನೆ ಮತ್ತು ಬರವಣಿಗೆಗಳಲ್ಲಿ ನಿರತರಾಗಿರುವ ರೋಹಿಣಿ ಮಹಿಳಾಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವವರು. ಸಾಹಿತ್ಯ ಸಮ್ಮೇಳನ, ಗೋಷ್ಠಿ, ಕಮ್ಮಟಗಳಲ್ಲಿ ಪ್ರಬಂಧ-ಉಪನ್ಯಾಸಗಳ ಮೂಲಕ ಗಮನ ಸೆಳೆದಿದ್ದಾರೆ. ಸ್ತ್ರೀ ಸಂವೇದನೆ, ಸ್ತ್ರೀಶಿಕ್ಷಣ-ಸಂಸ್ಕೃತಿ, ಸ್ತ್ರೀ-ಭಿನ್ನಮುಖಗಳು, ಸಾಮಾಜಿಕ ತಲ್ಲಣಗಳು, ಆರಾಧನಾ ರಂಗದಲ್ಲಿ ಸ್ತ್ರೀ – ಇವು ಅವರ ಪ್ರಕಟಿತ ಲೇಖನ ಸಂಕಲನಗಳು.

ಕರ್ತವ್ಯ ಮತ್ತು ಗರಿಕೆಯ ಕುಡಿಗಳು ಕಥಾಸಂಕಲನಗಳು. ಅವಿವಾಹಿತ ಮಹಿಳೆಯರ ಸಮಾಜೋ-ಸಾಂಸ್ಕೃತಿಕ ಅಧ್ಯಯನ, ದ.ಕ. ಜಿಲ್ಲೆಯ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದ.ಕ. ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ ಇತ್ಯಾದಿ ಇತರ ಲೇಖಕಿಯರೊಂದಿಗೆ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳು. ಅಲ್ಲದೆ ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ, ಶ್ರೀಮತಿ ಲಲಿತಾ ಆರ್. ರೈ, ಹಿರಿಯರ ಜೀವನ ಕಥನಗಳು ಎಂಬ ವ್ಯಕ್ತಿಚಿತ್ರಗಳನ್ನು ಅವರು ಬರೆದಿದ್ದಾರೆ. ಅಧ್ಯಾಪಿಕೆಯ ಅಧ್ವಾನಗಳು ಎಂಬ ಸ್ವಾನುಭವ ಕೃತಿಯನ್ನು 2007ರಲ್ಲಿ ಪ್ರಕಟಿಸಿದ್ದಾರೆ.

`ಸ್ತ್ರೀ ಸಂವೇದನೆ’ಗೆ ಕನ್ನಡ ಸಾಹಿತ್ಯ ಧತ್ತಿನಿಧಿ ಪ್ರಶಸ್ತಿ (1995), `ಸ್ತ್ರೀ ಶಿಕ್ಷಣ ಸಂಸ್ಕೃತಿ’ಗೆ ಶ್ರೇಷ್ಠ ಕೃತಿ ಪ್ರಶಸ್ತಿ (2002), ಮೌಲ್ಯ ಪ್ರಕಾಶನದಿಂದ `ಮೌಲ್ಯ ಗೌರವ ಪ್ರಶಸ್ತಿ’ (2006) ಹಾಗೂ ಕಾಂತಾವರ ಸಾಹಿತ್ಯ ಪ್ರಶಸ್ತಿ (2015)ಗಳು ಇವರಿಗೆ ಲಭಿಸಿವೆ. ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಗಳಿಸಿರುವ ಬಿ.ಎಂ. ರೋಹಿಣಿ ಪ್ರಸ್ತುತ ದ.ಕ. ಜಿಲ್ಲೆಯ ಬಿಲ್ಲವರ ಪ್ರತಿಷ್ಠಿತ ಮನೆತನಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಹರಿಣಿ :
ಅರುವತ್ತರ ದಶಕದಿಂದಲೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಭಾವಪೂರ್ಣ ಅಭಿನಯದಿಂದ ಕನ್ನಡಿಗರ ಅಭಿಮಾನಕ್ಕೆ ಪಾತ್ರರಾದ ಶ್ರೇಷ್ಠ ಅಭಿನೇತ್ರಿ ಶ್ರೀಮತಿ ಹರಿಣಿ. `ಜಗನ್ಮೋಹಿನಿ’ ಚಲನಚಿತ್ರದ ಮೂಲಕ ಬೆಳ್ಳಿ ಪರದೆಗೆ ಅಡಿಯಿಟ್ಟ ಅವರು ಡಾ. ರಾಜ್‌ಕುಮಾರ್‌ರಂತಹ ಪ್ರಸಿದ್ಧರೊಂದಿಗೆ ಅಭಿನಯಿಸಿ ಅಗ್ರಪಂಕ್ತಿಯ ನಾಯಕನಟಿಯೆನಿಸಿ ಕೊಂಡಿದ್ದರು.

ತುಳು ಚಳುವಳಿಯ ಮುಂಚೂಣಿಯಲ್ಲಿದ್ದ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ ಅವರ ಮಗಳಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಿಸಿದ ಹರಿಣಿ ತಮ್ಮ ಅಸಾಧಾರಣ ಪ್ರತಿಭೆಯಿಂದ ಸಿನಿಮಾ ನಟಿಯಾಗಿ ಸುಮಾರು ಮೂವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜಗನ್ಮೋಹಿನಿ, ಮಂಗಳಗೌರಿ, ಕನ್ಯಾದಾನ, ಧರ್ಮವಿಜಯ, ಆಶಾಸುಂದರಿ, ರತ್ನಮಂಜರಿ, ನಂದಾದೀಪ, ಮಂಗಳ ಮುಹೂರ್ತ, ನಾಂದಿ, ಸರ್ವಜ್ಞಮೂರ್ತಿ, ಸುಬ್ಬಾಶಾಸ್ತ್ರಿ, ಸತಿ ಸುಕನ್ಯ ಮುಂತಾದ ಚಿತ್ರಗಳ ಅವರ ಮನೋಹರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ-ಸನ್ಮಾನಗಳು ಲಭಿಸಿವೆ.

ಯಶಸ್ಸಿನ ತುತ್ತತುದಿಯಲ್ಲಿರುವಾಗಲೇ ನಿವೃತ್ತಿ ಹೊಂದಿರುವುದು ಅವರ ಹೆಚ್ಚುಗಾರಿಕೆ. ಡಾ. ರಾಜ್ ಪ್ರಶಸ್ತಿಯನ್ನು ಬಗಲಿಗೇರಿಸಿಕೊಂಡ ಹಾಸ್ಯನಟ ವಾದಿರಾಜ್ ಹರಿಣಿಯವರ ಸಹೋದರ. ವಾದಿರಾಜ್ ಮತ್ತು ಜವಾಹರ್ ಸೋದರರೊಂದಿಗೆ ಅವರು ನಿರ್ಮಿಸಿದ `ನಾಂದಿ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಹಾಗೂ `ನಮ್ಮ ಮಕ್ಕಳು’ ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ.

ಇಸ್ರೋದ ವಿಜ್ಞಾನಿ ಡಾ. ಬಿ.ಎಸ್. ರಾವ್ ಅವರನ್ನು ವಿವಾಹವಾದ ಹರಿಣಿ ಪತಿಯೊಂದಿಗೆ ವಿಶ್ವ ಪರ್ಯಟನೆ ಮಾಡಿದ್ದಾರೆ. 2009 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಅವರು ಇಂದಿಗೂ ಕನ್ನಡಿಗರ ಮನೆಮಾತಾಗಿರುವ ಮಹಾನ್ ಕಲಾವಿದೆ.

ಲಲಿತಾ ಜಯರಾಂ ಇರಾ:
ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಮಡ್ಯಾರಿನ ದಿ. ತಿಮ್ಮಪ್ಪ ದಾಸ್ ಮತ್ತು ಗಿರಿಜಾ ದಂಪತಿಯ ಪುತ್ರಿಯಾಗಿರುವ ಲಲಿತಾ ಎಳವೆಯಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಸೋಮೇಶ್ವರ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅತ್ಯುತ್ತಮ ಕ್ರೀಡಾಪಟುವೆನಿಸಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು. ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿ ಭಾರತೀಯ ಜೀವವಿಮಾ ನಿಗಮದಲ್ಲಿ ಉದ್ಯೋಗ ಪಡೆದಿರುವ ಲಲಿತಾ ಜಯರಾಂ ಆ ಬಳಿಕ ಮಾಡಿದ ಕ್ರೀಡಾ ಸಾಧನೆ ಗಮನಾರ್ಹವಾದುದು.

ಭಾರತದಲ್ಲಿ ಮೊದಲ ಬಾರಿಗೆ 1997-98ರಲ್ಲಿ ಮಹಿಳೆಯರಿಗಾಗಿ ಹ್ಯಾಮರ್ ಎಸೆತವನ್ನು ಪರಿಚಯಿಸಿದಾಗ, ಅದರಲ್ಲಿ ಕಠಿಣ ತರಬೇತಿ ಹಾಗೂ ನಿರಂತರ ಅಭ್ಯಾಸದ ಮೂಲಕ ಲಲಿತಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಗಳಿಸಿದರು. 2004ರಲ್ಲಿ ಬ್ಯಾಂಕಾಕ್‌ನಲ್ಲಿ ಜರಗಿದ ಮಾಸ್ಟರ್‍ಸ್ ಏಷ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಫ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಹ್ಯಾಮರ್‌ತ್ರೋದಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ, 2006 ರಲ್ಲಿ ಬೆಂಗಳೂರು,2008 ರಲ್ಲಿ ಶಾಂಘೈ, 2010ರಲ್ಲಿ ಮಲೇಶಿಯಾದಲ್ಲಿ ಪಡೆದ ಮಾಸ್ಟರ್‍ಸ್ ಕ್ರೀಡಾಕೂಟಗಳಲ್ಲಿ ಸತತ ಚಿನ್ನದ ಪದಕಗಳನ್ನು ಪಡೆದು `ಕರಾವಳಿಯ ಚಿನ್ನದ ಮಹಿಳೆ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸ್ಪೇನ್ (2005), ಇಟೆಲಿ (2007), ಫಿನ್‌ಲ್ಯಾಂಡ್ (2009) ಹಾಗೂ ಅಮೇರಿಕಾದ ಕ್ಯಾಲಿಫೋರ್ನಿಯಾ (2011)ಗಳಲ್ಲಿ ಜರಗಿದ ವಿಶ್ವ ಮಟ್ಟದ ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಫ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಸಾಧನೆಗೈದ ಹಿರಿಮೆ ಅವರದು. ಬ್ರೆಜಿಲ್‌ನಲ್ಲಿ ಜರಗಿದ ವರ್ಲ್ಡ್ ಚಾಂಪಿಯನ್‌ಶಿಫ್ (2013)ನಲ್ಲಿ 7ನೇ ಸ್ಥಾನ, ಜಪಾನಿನ ಟೋಕಿಯೋದಲ್ಲಿ ನಡೆದ 18ನೇ ಮಾಸ್ಟರ್ಸ್ ಏಷ್ಯಾಡ್ (2014)ರಲ್ಲಿ ಚಿನ್ನದ ಪದಕ, ಫ್ರಾನ್ಸ್‌ನಲ್ಲಿ ಜರಗಿದ ವಿಶ್ವ ಮಟ್ಟದ ವರ್ಲ್ಡ್ ಚಾಂಪಿಯನ್ ಶಿಫ್‌ನಲ್ಲಿ ಅತ್ಯುತ್ತಮ ನಿರ್ವಹಣೆ ಇತ್ಯಾದಿ ಅವರ ಕ್ರೀಡಾಸಾಧನೆಯ ಮೈಲಿಗಲ್ಲುಗಳು.

ರಾಜ್ಯೋತ್ಸವ ಅಭಿನಂದನಾ ಪುರಸ್ಕಾರ (2005), ಸುವರ್ಣ ಕರ್ನಾಟಕ ಕರಾವಳಿ ಕನ್ನಡಿಗ ಪ್ರಶಸ್ತಿ (2006), ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2007), ಸಾಧನಾ ಪ್ರಶಸ್ತಿ (2008), ಸಾಧಕ ಪುರಸ್ಕಾರ (2014) ಇತ್ಯಾದಿ ಅವರ ಕ್ರೀಡಾಕ್ಷೇತ್ರದ ಯಶಸ್ಸಿಗೆ ಸಂದ ಗೌರವಗಳು. ಬಂಟ್ವಾಳ ತಾಲೂಕು ಇರಾ ಗ್ರಾಮದ ಜಯರಾಮ ಪೂಜಾರಿಯವರನ್ನು ವಿವಾಹವಾಗಿರುವ ಲಲಿತಾ ಜಯರಾಂ ಕಾರ್ತಿಕ್ ಮತ್ತು ಸಾತ್ವಿಕ್ ಎಂಬಿಬ್ಬರು ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

`ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಹಾಗೂ `ರಾಣಿ ಅಬ್ಬಕ್ಕ ಪುರಸ್ಕಾರ’ಗಳು ತಲಾ ರೂ. 20,000 ನಗದು ಮತ್ತು ಗೌರವ ಫಲಕಗಳನ್ನು ಹೊಂದಿವೆ. ಮೇ 7 ಮತ್ತು 8, 2016ರಂದು ತೊಕ್ಕೊಟ್ಟುವಿನಲ್ಲಿ ಜರಗುವ `ವೀರ ರಾಣಿ ಅಬ್ಬಕ್ಕ ಉತ್ಸವ – 2016 ‘ರ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಉತ್ಸವಕ್ಕೆ ಪೂರ್ವಭಾವಿಯಾಗಿ ಮೇ 1ರಂದು ಭಾನುವಾರ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ `ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ – 2016′ ರಾಜ್ಯ ಮಟ್ಟದ ಮಹಿಳೆಯರ ಭಾರ ಎತ್ತುವ ಸ್ಪರ್ಧೆ ಹಾಗೂ `ರಾಣಿ ಅಬ್ಬಕ್ಕ ಕಲಾ ವೈಭವ’ ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ‘ಅಬ್ಬಕ್ಕ ಕ್ರೀಡೋತ್ಸವ’ ಕೂಡಾ ಜರಗಲಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment