ಕುಂದಾಪುರ: ಪ್ರವಾಸಕ್ಕೆಂದು ಹೋದ ಎಂಜಿಎಂ ಕಾಲೇಜು ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ಬೈಂದೂರಿನ ಕೋಸಳ್ಳಿ ಪಾಲ್ಸ್ ನಲ್ಲಿ ನಡೆದಿದೆ.
ಉಡುಪಿಯ ಎಂಜಿಎಂ ಕಾಲೇಜಿನ ಬಿ.ಸಿ.ಎ. ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಪ್ರಸಾದ್ ಅಮೀನ್ (22) ಎಂಬಾತನೇ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದ ವಿದ್ಯಾರ್ಥಿ.

ಭಾನುವಾರ ಬೆಳಿಗ್ಗೆ ಎಂ.ಜಿ.ಎಂ. ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ತಂಡವು ಎರಡು ಬಸ್ ಗಳಲ್ಲಿ ಪ್ರವಾಸ ಹೊರಟಿದ್ದರು. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಕೋಸಳ್ಳಿ ಪಾಲ್ಸ್ ನೋಡಲೆಂದು ಬಂದಿದ್ದ ವಿದ್ಯಾರ್ಥಿಗಳಲ್ಲಿ ಪ್ರಸಾದ ಅಮೀನ್ ಕೂಡ ಇದ್ದರು.
ಪ್ರಸಾದ್ ಅಮೀನ್ ಸ್ನೇಹಿತರೊಂದಿಗೆ ಪಾಲ್ಸ್ ನೋಡುತ್ತಿದ್ದಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬೈಂದೂರು ಪೋಲಿಸರು ಆಗಮಿಸಿ ಹುಡುಕಾಟ ನಡೆಸಿದ್ದು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ