
ಮಂಗಳೂರು/ಸುರತ್ಕಲ್,ಏ.01 : ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ ರಗಳೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಟೋಲ್ಗೇಟ್ ಸಿಬ್ಬಂದಿ ಗೂಂಡಾಗಿರಿ ಮತ್ತೆ ಮುಂದುವರಿದಿದ್ದು, ಇಂದು ಮುಂಜಾನೆ ಖಾಸಗಿ ಬಸ್ ಸಿಬ್ಬಂದಿ ಮೇಲೆ ರಾಜಾರೋಷವಾಗಿ ಹಲ್ಲೆ ನಡೆದಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಬಸ್ ಸಿಬ್ಬಂದಿ ಹಠಾತ್ ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಮಂಗಳೂರು-ಉಡುಪಿ, ಕಟೀಲು ಕಡೆ ಸಂಚರಿಸುವ ಬಸ್ಗಳ ಸಂಚಾರವನ್ನು ತಡೆಹಿಡಿಯಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಘಟನೆಯ ವಿವರ: ಮುಂಜಾನೆ 9ಗಂಟೆಯ ಸುಮಾರಿಗೆ ಮಂಗಳೂರು-ಕಾರ್ಕಳ ಮಧ್ಯೆ ಸಂಚರಿಸುವ ‘ಮರೋಳಿ’ ಬಸ್ಸಿನ ಚಾಲಕ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಬಸ್ಸನ್ನು ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಟೋಲ್ಗೇಟ್ ಸಿಬ್ಬಂದಿ ಬಸ್ಸನ್ನು ತಡೆದಿದ್ದಾರೆ. ಬಸ್ ಕಂಡಕ್ಟರ್ ‘ನಾವು ಪಾಸ್ ಪಡೆದಿದ್ದೇವೆ, ಬಸ್ಸನ್ನು ಹೋಗಲು ಬಿಡಿ’ ಎಂದು ಹೇಳಿದರೂ ಕೇಳದ ಸಿಬ್ಬಂದಿಯೊಬ್ಬ ‘ಟೋಲ್ ಹಣ ಜಾಸ್ತಿ ಮಾಡಲಾಗಿದೆ, ಹಣ ಕೊಡಿ’ ಎಂದು ತಗಾದೆ ತೆಗೆದಿದ್ದಾನೆ.
ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಸಿಬ್ಬಂದಿ ಬಸ್ ಕಂಡಕ್ಟರ್ನನ್ನು ಹೊರಕ್ಕೆಳೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಸ್ ಚಾಲಕ ಬಸ್ಸನ್ನು ರಸ್ತೆ ಮಧ್ಯೆ ಅಡ್ಡವಾಗಿ ಇರಿಸಿದ್ದು ಟೋಲ್ಗೇಟ್ ಸಿಬ್ಬಂದಿ ಕಂಡಕ್ಟರ್ನನ್ನು ಥಳಿಸಿದ್ದಾರೆ. ಅಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ವಾಹನಗಳ ಚಾಲಕರು ಘಟನಾಸ್ಥಳದಲ್ಲಿ ಸೇರಿದ್ದು ಟೋಲ್ಗೇಟ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ ಅಲ್ಲಿದ್ದ ಸಿಬ್ಬಂದಿ ಆತನನ್ನು ಅಲ್ಲೇ ಇದ್ದ ಕಂಟೈನರ್ ರೂಂನಲ್ಲಿ ಕೂರಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿತು.

ಬಸ್ ಚಾಲಕರು, ಸಾರ್ವಜನಿಕರು ಒಟ್ಟಾಗಿ ಟೋಲ್ಗೇಟ್ ಸಿಬ್ಬಂದಿಯ ಗೂಂಡಾಗಿರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಬಸ್ ಚಾಲಕ, ಕಂಡಕ್ಟರ್ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಬೇರೆ ಬಸ್ ಹತ್ತಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಇದರಿಂದ ಸುಮಾರು ಅರ್ಧ ತಾಸು ರಸ್ತೆ ತಡೆ ಉಂಟಾಗಿದ್ದು, ವಾಹನಗಳು ಸುರತ್ಕಲ್ ತನಕ ಸಾಲುಗಟ್ಟಿ ನಿಂತಿತ್ತು. ಉಡುಪಿ ಕಡೆಯಿಂದ ಬರುವ ಬಸ್ ಚಾಲಕರು ಹಠಾತ್ ಸಂಚಾರವನ್ನು ಸ್ಥಗಿತಗೊಳಿಸಿದ ಪರಿಣಾಮ ಬಸ್ ಪ್ರಯಾಣಿಕರು ಪರದಾಡುವಂತಾಯಿತು.
ಕೊನೆಗೂ ಬಂದ ಪೊಲೀಸರು: ಘಟನೆ ನಡೆದು ಅರ್ಧ ತಾಸಿನ ಬಳಿಕ ಸ್ಥಳಕ್ಕಾಗಮಿಸಿದ ಸುರತ್ಕಲ್ ಠಾಣಾ ಪೊಲೀಸರು ರಸ್ತೆಯಲ್ಲಿ ನಿಂತಿದ್ದ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಶ್ರಮಿಸಿದರು. ಹಲ್ಲೆ ನಡೆಸಿದ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಬಸ್ ಸಂಚಾರ ಮತ್ತೆ ಆರಂಭವಾಯಿತು. ಆನಂತರ ಮತ್ತೆ ಟೋಲ್ಗೇಟ್ನಲ್ಲಿ ಸಿಬ್ಬಂದಿ ಗೂಂಡಾಗಿರಿ ಪ್ರದರ್ಶಿಸಿದ ಕಾರಣ ಬಸ್ ಮಾಲಕರ ಸಂಘ, ಸಿಬ್ಬಂದಿ ಬಸ್ ಸಂಚಾರವನ್ನು ಮೊಟಕುಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದ ಬಸ್ಗಳನ್ನು ಕಿನ್ನಿಗೋಳಿ, ಹಳೆಯಂಗಡಿ, ಮುಕ್ಕ, ಸುರತ್ಕಲ್ ಬಳಿ ನಿಲ್ಲಿಸಿ ಸಿಬ್ಬಂದಿ ಪ್ರತಿಭಟನೆಗೆ ಇಳಿದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮಾತ್ರವಲ್ಲದೆ ಕೆಲಸದ ನಿಮಿತ್ತ ಮನೆಯಿಂದ ಹೊರಬಂದವರು ಬಸ್ ಬಂದ್ನಿಂದ ಸಮಸ್ಯೆ ಎದುರಿಸುವಂತಾಗಿದೆ.
ಪೊಲೀಸರ ಸಹಕಾರ : ಎನ್ಐಟಿಕೆ ಟೋಲ್ಗೇಟ್ನಲ್ಲಿ ಸಿಬ್ಬಂದಿಯ ಗೂಂಡಾಗಿರಿ, ವಾಹನ ಚಾಲಕರ ಮೇಲೆ ಹಲ್ಲೆ ಇದೇನೂ ಮೊದಲಲ್ಲ. ಈ ಹಿಂದೆಯೂ ಇಲ್ಲಿ ಸಾಕಷ್ಟು ಬಾರಿ ಇಂಥ ಘಟನೆಗಳು ನಡೆದಿವೆ. ಆಗೆಲ್ಲ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರೂ ಮತ್ತೆ ಮಾಮೂಲಿಯೆಂಬಂತೆ ಇಲ್ಲಿ ಗೂಂಡಾಗಿರಿ ಮುಂದುವರಿದಿದೆ.
ಸುರತ್ಕಲ್ ಠಾಣೆಯ ಅಧಿಕಾರಿವರ್ಗ, ಸಿಬ್ಬಂದಿ ಟೋಲ್ಗೇಟ್ನಲ್ಲಿ ಏನೇ ಆದರೂ ಸ್ಥಳಕ್ಕೆ ತಕ್ಷಣ ಹಾಜರಾಗುವುದಿಲ್ಲ. ಟೋಲ್ಗೇಟ್ ಸಿಬ್ಬಂದಿಯ ಕುಕೃತ್ಯಗಳಿಗೆ ತೆರೆಮರೆಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿಬರುತ್ತಲೇ ಇದೆ. ತಿಂಗಳ ಹಿಂದೆ ಇಲ್ಲಿ ಬಸ್ ಸಿಬ್ಬಂದಿ ಮೇಲೆ ಟೋಲ್ಗೇಟ್ ಗೂಂಡಾಗಳು ಹಲ್ಲೆ ನಡೆಸಿದ ಘಟನೆ ನಡೆದಿತ್ತು, ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಸ್ ಸಿಬ್ಬಂದಿಯನ್ನೇ ಠಾಣೆಗೆ ಕರೆದೊಯ್ದು ಥಳಿಸಿದ್ದರು. ಇಂಥ ಘಟನೆಗಳು ಪ್ರತೀಬಾರಿ ನಡೆಯುತ್ತಿರುವ ಕಾರಣ ಪೊಲೀಸ್ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕಾದ ತುರ್ತು ಅಗತ್ಯವಿದೆ ಅನ್ನೋದು ನಾಗರಿಕರ ಮಾತುಗಳು.