ಕನ್ನಡ ವಾರ್ತೆಗಳು

ಅಪಘಾತಕ್ಕೊಳಗಾದವರನ್ನು ರಕ್ಷಿಸಿದವರಿಗೆ “ಜೀವ ರಕ್ಷಕ ಅವಾರ್ಡ್‌’ – ಫೋಟೊ,ವಿಡಿಯೋ ತೆಗೆದವರಿಗೆ ಜೈಲ್ ವಾರ್ಡ್

Pinterest LinkedIn Tumblr

Ut_kadar_pressmeet_2

ಮಂಗಳೂರು: ಅಪಘಾತ ನಡೆದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯತ್ಮಿಸುವುದನ್ನು ಬಿಟ್ಟು ಅಪಘಾತದಲ್ಲಿ ಗಾಯಗೊಂಡವರ ಫೋಟೊ ಅಥವಾ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್‌ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಅಪಘಾತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದವರಿಗೆ “ಜೀವ ರಕ್ಷಕ ಅವಾರ್ಡ್‌’ ನೀಡಲು ಚಿಂತನೆ ನಡೆಸಲಾಗಿದೆ. ಆಸ್ಪತ್ರೆಗೆ ದಾಖಲಿಸುವ ಬದಲು ಫೋಟೊ ಅಥವಾ ವಿಡಿಯೋ ಮಾಡಿಕೊಳ್ಳುವ ಕುರಿತು ಸಾಕ್ಷಿ ಸಮೇತ ಮಾಹಿತಿ ದೊರಕಿದಲ್ಲಿ ಅಂತಹವರ ವಿರುದ್ಧ ಆರೋಗ್ಯ ಇಲಾಖೆ ವತಿಯಿಂದ “ಸುವೋ- ಮೋಟೊ’ ಪ್ರಕರಣ ದಾಖಲಿಸಿಕೊಳ್ಳುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಅಪಘಾತಕ್ಕೊಳಗಾದ ವ್ಯಕ್ತಿಗೆ ಆಸ್ಪತ್ರೆಗಳಲ್ಲಿ ಕೂಡಲೇ ಚಿಕಿತ್ಸೆ ಒದಗಿಸುವುದನ್ನು ಯಾವುದೇ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ವ್ಯಕ್ತಿಯ ಗುರುತು ಪರಿಚಯವಿಲ್ಲದಿದ್ದರೂ ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆಯಲ್ಲಿ ಸೂಚಿಸಲಾಗಿರುವ ಸಂಖ್ಯೆಗೆ ಕರೆ ಮಾಡಿ ಗಂಡು ಅಥವಾ ಹೆಣ್ಣು ಎಂದು ತಿಳಿಸಿದರೆ ಸಾಕು ಕೂಡಲೇ ಐಡಿ ದೊರೆಯುತ್ತದೆ. ಈ ಮೂಲಕ ಚಿಕಿತ್ಸೆ ಸುಲಭವಾಗಿ ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಪಘಾತದ ತೀವ್ರತೆ ಹಾಗೂ ಚಿಕಿತ್ಸೆಯ ಅಗತ್ಯದ ಅನುಸಾರವಾಗಿ ಯೋಜನೆಯಲ್ಲಿ ಮೆಡಿಕಲ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳು ಮತ್ತು ಇವುಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳು ಸೇರಿ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು 25 ಸಾವಿರ ರೂ., 15 ಸಾವಿರ ರೂ. ಹಾಗೂ 5 ಸಾವಿರ ರೂ. ಎಂದು ನಿಗದಿ ಪಡಿಸಲಾಗಿದೆ.

ಈ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಎಲ್ಲರೂ ಕೈ ಜೋಡಿಸಲು ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಶಾಸಕರು ಅವರವರ ಕ್ಷೇತ್ರದಲ್ಲಿ ಬರುವ ಎಲ್ಲ ಆಸ್ಪತ್ರೆಗಳ ಅಧಿಕಾರಿಗಳನ್ನು ಕರೆದು ಯೋಜನೆ ಅನುಷ್ಠಾನಗೊಳಿಸಲು ಸಭೆ ಕರೆದು ತಿಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಅಪಘಾತ ಸಂಭವಿಸಿದಾಗ ಜನರು ಫೋಟೋ, ವಿಡಿಯೋ ತೆಗೆದುಕೊಂಡು ಸಮಯ ವ್ಯರ್ಥ ಮಾಡದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.

Write A Comment