ಕನ್ನಡ ವಾರ್ತೆಗಳು

ಬಡಕುಟುಂಬಕ್ಕೆ ಹಿಂದೂಜಾಗರಣ ವೇದಿಕೆಯ ‘ಆಸರೆ’; ಸುಂದರ ಸೂರು ನಿರ್ಮಿಸಿಕೊಟ್ಟ ಮಾರ್ಕೋಡು ಹಿಂಜಾವೇ ಕಾರ್ಯಕರ್ತರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಆ ಇಳಿವಯಸ್ಸಿನ ತಾಯಿ ಹೆಸರು ಗಿರಿಜಾ ಆಚಾರ್ತಿ. ಓರ್ವ ಮಗ ಸೊಸೆ ಹಾಗೂ ಇಬ್ಬರು ಮಕ್ಕಳ ಜೊತೆ ಕಡುಬಡತನದಲ್ಲಿ ಜೀವನಸಾಗಿಸುತ್ತಿದ್ದ ಕುಟುಂಬವಿದು. ಗಿರಿಜಾ ಅವರ ಪುತ್ರನಿಗೆ ಸೈಕಲ್ ರಿಪೇರಿ ಮಾಡುವ ಕಾಯಕ. ಅವರು ತಂದ ಪುಡಿಗಾಸೇ ಇವರ ನಿತ್ಯ ಜೀವನಕ್ಕೆ ಆಧಾರ. ಆದರೇ ಅದೆಷ್ಟೋ ವರ್ಷಗಳ ಹಿಂದೆ ಕಟ್ಟಿದ್ದ ಮನೆಯೂ ಶಿಥಿಲಗೊಂಡು ಇಂದೋ ನಾಳೆಯೋ ಅನ್ನುವ ಹಾಗಾಗಿತ್ತು. ಬೀಳಲು ದಿನ-ಕ್ಷಣವೆಣಿಸುತ್ತಿದ್ದ ಮನೆಯಲ್ಲಿ ಇವರ ವಾಸವಿತ್ತು. ವರ್ಷಗಳ ಇವರ ಕಷ್ಟಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಮುಂದೆಬರಲಿಲ್ಲ. ಇವರ ಸಂಕಷ್ಟಕ್ಕೊಂದು ಪರಿಹಾರ ಕಂಡುಕೊಟ್ಟಿದ್ದು ಈ ಭಾಗದ ಹಿಂದೂ ಸಂಘಟನೆ.

Koteshwara_News Home_Hinjave (9)

ಸೂರು ನಿರ್ಮಿಸಿಕೊಟ್ಟ ಹುಡುಗರು..!
ಮನೆಕಟ್ಟಿ ನೋಡು..ಮದುವೆ ಮಾಡಿ ನೋಡು ಎಂಬ ನಾಣ್ಣುಡಿ ನಮ್ಮಲ್ಲಿದೆ. ಇದೇನು ಸುಲಭದ ಕೆಲಸವೂ ಅಲ್ಲ. ಯವ ಪುಣ್ಯದ ಕೆಲಸ ಯಾರ ಪಾಲಿಗೋ ಬಲ್ಲವರ್‍ಯಾರು ಎಂಬ ಹಾಗೆಯೇ ಅದೊಂದು ದಿನ ಗಿರಿಜಾ ಆಚಾರ್ತಿ ಅವರ ಕಷ್ಟ ಜೀವನ ಮುಗಿದು ಸಂತಸದ ಕ್ಷಣಗಳು ಬರುವುದಕ್ಕೆ ಸಮಯ ಒದಗಿಯೇ ಬಂದಿತ್ತು. ಕೋಟೇಶ್ವರ ಆಸುಪಾಸಿನ ದೇವಸ್ಥಾನವೊಂದರ ವಂತಿಗೆ ಸಂಗ್ರಹಕ್ಕಾಗಿ ಮಾರ್ಕೋಡು ಹಿಂದೂಜಾಗರಣ ವೇದಿಕೆ ಕಾರ್ಯಕರ್ತರು ಈ ಭಾಗಕ್ಕೆ ಬಂದಿದ್ದರು. ಅದಗಲೇ ಜಿಲ್ಲಾಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆ ಮುಗಿದಿದ್ದ ಕಾಲವಷ್ಟೇ. ಗಿರಿಜ ಆಚಾರ್ತಿ ಅವರು ತಮ್ಮ ಮನೆಗೆ ಬಂದ ಯುವಕರನ್ನು ನೋಡಿ ರಾಜಕೀಯದವರು ಅಂದುಕೊಂಡ್ರೋ ಏನೋ….ತನ್ನ ಕಷ್ಟದ ಬಗ್ಗೆ ಹೇಳಿಕೊಂಡರು, ಸರಕಾರದಿಂದ ಏನು ಸಿಗದ ಬಗ್ಗೆಯೂ ನೋವು ತೋಡಿಕೊಂಡರು. ಅದಾಗಲೇ ಹಿಂಜಾವೇ ಕಾರ್ಯಕರ್ತರ ಮನಸ್ಸಲ್ಲಿ ಸಣ್ಣ ಆಲೋಚನೆಯೊಂದು ಮಿಂಚಿ ಮರೆಯಾಗಿತ್ತು. ಏನೇ ಆಗಲಿ ಈ ‘ತಾಯಿ’ಗೆ ಸೂರು ಕಲ್ಪಿಸಿಕೊಟ್ಟೇ ಸಿದ್ಧ ಎಂದು ಹಠಕ್ಕೆ ಬಿದ್ದರು.

Koteshwara_News Home_Hinjave (3) Koteshwara_News Home_Hinjave (2)

(ಹಳೆ ಮನೆ)

 Koteshwara_News Home_Hinjave (4) Koteshwara_News Home_Hinjave (1)

20160329_111411

Koteshwara_News Home_Hinjave (5) Koteshwara_News Home_Hinjave (10)

38 ದಿನದಲ್ಲಿ ನಿರ್ಮಾಣವಾದ ಮನೆ…
ಮಾರ್ಕೋಡು ಹಿಂದೂಜಾಗರಣ ವೇದಿಕೆ ಘಟಕ ಆರಂಭಗೊಂಡು 15 ವರ್ಷಗಳಾಗಿದೆ. ಅದರ ಸವಿ ನೆನಪಿಗೆ ಜನೋಪಯೋಗಿ ಕೆಲಸವೊಂದು ಆಗಬೇಕೆನ್ನುವ ಹಂಬಲ ಇವರಲ್ಲಿ ಮೊದಲಿಂದಲೂ ಇತ್ತು. ಆದರೇ ಇಷ್ಟು ಉತ್ತಮ ಕಾರ್ಯ ಆಗುತ್ತದೆಯಂಬ ಸಣ್ಣ ಆಲೋಚನೆಯೂ ಇರಲಿಲ್ಲ. ಗಿರೀಜಾ ಅವರಿಗೆ ಮನೆ ನಿರ್ಮಾಣದ ಭರವಸೆಯನ್ನಿತ್ತ ಬಳಿಕ ಈ ಬಗ್ಗೆ ಹೆಚ್ಚು ವಿಳಂಭವೇ ಮಾಡಲಿಲ್ಲ, ಅಂದಿನಿಂದಲೇ ಆರಂಭವಾಯಿತು ಮನೆ ನಿರ್ಮಾಣದ ಫ್ಲ್ಯಾನ್. ಮಾರನೇ ದಿನಕ್ಕೆ ಒಂದು ಸ್ಕೆಚ್ ಕೂಡ ಸಿದ್ದಪಡಿಸಲಾಯಿತು. ಹಿಂಜಾವೇ ಕಾರ್ಯಕರ್ತರು ಕೋಟೇಶ್ವರ ಆಸುಪಾಸಿನ ದಾನಿಗಳನ್ನು ಸಂಪರ್ಕಿಸಿ ಅವರ ಬಳಿ ವಿಚಾರ ತಿಳಿಸಿ ಅವಶ್ಯಕತೆಯ ಬಗ್ಗೆಯೂ ಮನವಿಯಿತ್ತರು. ಇವರು ಅಂದುಕೊಂಡಿದ್ದಕ್ಕಿಂತ ಜಾಸ್ಥಿಯೇ ಬೆಂಬಲ ಸಿಕ್ಕಿತ್ತು. ಕೆಲವರು ಧನಸಹಾಯ ಮಾಡಿದರೇ ಇನ್ನು ಕೆಲವರು ವಸ್ತು ರೂಪದಲ್ಲಿ ತಮ್ಮ ಕೈಯಲ್ಲಾದ ಸಹಕಾರವನ್ನಿತ್ತರು. ರಾತ್ರಿ ಹಗಲು ಎನ್ನದೇ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದ ಫಲವೇ ‘ಆಸರೆ’. ಇನ್ನು ಪ್ರಮುಖ ವಿಚಾರವೆಂದರೇ ಎಲ್ಲಿಯೂ ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪವಾಗಿಲ್ಲ. ರಾಜಕೀಯ ರಹಿತವಾದ ‘ಆಸರೆ’ ಇದು.

ಸುಂದರ ‘ಆಸರೆ’…
ಆಧುನಿಕ ರೀತಿಯಲ್ಲಿ ನೋಡಲು ಸುಂದರವಾಗಿಯೂ, ಸುಮಾರು ಎರಡೂವರೆ ಲಕ್ಷ ವೆಚ್ಚದಲ್ಲಿ ಈ ಮನೆ ನಿರ್ಮಾಣಗೊಂಡಿದೆ. 2 ಕೋಣೆ, 1 ಹಾಲ್, 1 ಕಿಚನ್, ಸ್ಪೆಶಲ್ ಕಿಚನ್, ಹಾಗೂ ಹೊರಗಡೆ ಶೌಚಲಯ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ವಿಟ್ಟರ್‌ಪ್ಯಾಡ್, ಅಗತ್ಯ ಸ್ಥಳಗಳಲ್ಲಿ ಟೈಲ್ಸ್, ಸಂಪೂರ್ಣ ಮನೆಗೆ ಗುಣಪಟ್ಟದ ಪೈಂಟಿಂಗ್ ಮಾಡಲಾಗಿದೆ. ಪ್ರತಿ ಕೋಣೆಗಳಿಗೆ ಬಾಗಿಲು, ಮರದ ಕಿಟಕಿ-ಬಾಗಿಲು ವ್ವವಸ್ಥೆಯಿದೆ. ಸುಂದರ ಮನೆಗೆ ‘ಆಸರೆ’ ಎನ್ನುವ ಹೆಸರಿಡಲಾಗಿದೆ.

ಮಂಗಳವಾರ ಮನೆ ಹಸ್ತಾಂತರ
ಸೋಮವಾರ ರಾತ್ರಿ ಗ್ರಹಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಮಂಗಳವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ವಸಂತೋತ್ಸವ, ಭಾರತಮತೆ ಪೂಜೆ ನಡೆಸಲಾಯಿತು. ಬಳಿಕ ಭಾರತಮಾತೆ ಫೋಟೋ ಸಮೇತ ಮನೆಯ ಕೀಲಿಕೈ ಇಟ್ಟು ಅದನ್ನು ಮನೆ ಯಜಮಾನರಿಗೆ ಹಸ್ತಾಂತರಿಸುವ ಕಾರ್ಯವನ್ನು ಹಿಂ.ಜಾ.ವೇ. ಕ್ಷೇತ್ರೀಯ ಸಂಚಾಲಕ ಜಗದೀಶ್ ಕಾರಂತ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಸುಬ್ರಮಣ್ಯ ಹೊಳ್ಳ ನೆರವೇರಿಸಿ ಶುಭಹಾರೈಸಿದರು. ಕೋಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕುಮಾರ್ ಐತಾಳ್ ಅವರು ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದರು.

Koteshwara_News Home_Hinjave (8)

ಎಲ್ಲರೂ ಸುರಕ್ಷಿತರಾಗಬೇಕೆಂಬುದು ಹಿಂಜಾವೇ ಉದ್ದೇಶ….
ಈ ಸಂದರ್ಭ ಮಾತನಾಡಿದ ಜಗದೀಶ್ ಕಾರಂತ್ ಅವರು, ಹಿಂಜಾವೇ ಮಾರ್ಕೋಡು ಘಟಕದ ಕಾರ್ಯಕರ್ತರು ಒಂದು ಹೊಸ ಮೇಲ್ಪಂಕ್ತಿಯನ್ನು ಸಮಾಜಕ್ಕೆ ಹಾಕಿಕೊಟ್ಟೀದ್ದಾರೆ. ಹಿಂದೂ ಸಮಾಜದ ಸಂರಕ್ಷಣೆ ಹಿಂದೂಜಾಗರಣ ವೇದಿಕೆಯ ಪ್ರಮುಖ ಕೆಲಸವಾಗಿದ್ದು ಈ ನಡುವೇ ಮನೆ ನಿರ್ಮಾಣದ ಕೆಲಸ ನಿಜಕ್ಕೂ ಮಾದರಿಯಾಗಿದೆ. ಹತ್ತಾರು ಮನೆಗಳು ಸೇರಿದರೇ ಅದೊಂದು ಊರು ಅಥವಾ ಸಮಾಜ. ಸಮಾಜ ರಕ್ಷಿತವಾಗಿರಬೇಕಾದರೇ ಮನೆಗಳು ಗಟ್ಟಿಯಾಗಿರಬೇಕು. ಸಮಾಜ ಅಥವಾ ಮನೆಗಳು ಗಟ್ಟಿಯಾಗಿರಬೇಕಾದರೇ ಮನೆ-ಮನಗಳು ಪರಸ್ಪರ ಅನ್ಯೋನ್ಯವಾಗಿರಬೇಕು. ಹಲವು ಮನೆಗಳು ಶ್ರೀಮಂತವಾಗಿದ್ದು ಇನ್ನು ಕೆಲ ಮನೆಗಳು ಅಸುರಕ್ಷಿತವಾಗಿದೆಯೆಂದರೇ ಅದು ಸಾಮರಸ್ಯದ ಲಕ್ಷಣವಲ್ಲ. ಈ ಗ್ರಾಮದಲ್ಲಿ ಎಲ್ಲರೂ ಸುರಕ್ಷಿತವಾಗಿ ಒಗ್ಗೂಡಿ ಬದುಕಬೇಕೆಂಬ ಹಂಬಲ ಮಾರ್ಕೋಡು ಹಿಂದೂಜಾರಣ ವೇದಿಕೆ ಕಾರ್ಯಕರ್ತರದ್ದು ಎಂಬ ಹೆಮ್ಮೆ ನಮ್ಮದು. ಸಮಾಜದ ಭಾಗವಾಗಿ ನಾವು ಮಾಡಿದ್ದು ಒಂದು ಆರಂಭ ಮಾತ್ರ. ಇದಕ್ಕೆ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ ಶ್ರಮ ಹಾಗೂ ದಾನ ರೂಪದ ಸಹಕಾರವಿದೆ. ಇದನ್ನು ಜೋಡಿಸುವ ಕಾರ್ಯವನ್ನು ನಮ್ಮ ಹಿಂಜಾವೇ ಘಟಕ ಮಾಡಿದೆ.

ಈ ಸಂದರ್ಭದಲ್ಲಿ ಹಿಂದೂಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ, ಮಾರ್ಕೋಡು ಸಂಚಾಲಕ ನಾಗೇಶ್ ಮಾರ್ಕೋಡು, ಕೋಟೇಶ್ವರ ವಲಯ ಸಂಚಾಲಕ ಕಿರಣ್, ಮನೆಯ ಫ್ಲ್ಯಾನಿಂಗ್ ಇಂಜಿನಿಯರ್ ರಮೇಶ್ ಆಚಾರ್ಯ, ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಸಂಘಪರಿವಾರದ ಮುಖಂಡರು ಉಪಸ್ಥಿತರಿದ್ದರು. ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ, ಉಪಾಧ್ಯಕ್ಷ ಉದಯ ನಾಯ್ಕ್, ಸದಸ್ಯರಾದ ಕೃಷ್ಣ ಗೊಲ್ಲ, ಶಾಂತ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು.

Write A Comment