ಕುಂದಾಪುರ: ಜನರೊಂದಿಗೆ ಉತ್ತಮವಾಗಿ ವ್ಯವಹರಿಸಿ ಅವರೊಂದಿಗೆ ಸಂಪರ್ಕದಲ್ಲಿರಿ. ಇಲ್ಲವಾದರೇ ಕೇವಲ ಮೆಸ್ಕಾಂ ಇಲಾಖೆ ಮತ್ತು ವಿದ್ಯುತ್ ತಂತಿ ಜೊತೆ ಮಾತ್ರವೇ ಸಂಪರ್ಕವಿರುವುದೇ ಹೊರತು ಜನರ ಸಂಪರ್ಕವವೇ ಇರುವುದಿಲ್ಲ. ಈ ಬಗ್ಗೆ ಸೂಕ್ತ ಗಮನ ನೀಡಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಂತೆಯೇ ಪಕ್ಕದಲ್ಲಿಯೇ ಇದ್ದ ವಿಧಾನಪರಿಷತ್ ಸದಸ್ಯ ಹೈಕಾಡಿ ಪ್ರತಾಪಚಂದ್ರ ಶೆಟ್ಟಿ ‘ಪರೀಕ್ಷೆ ಸಂದರ್ಭವಾದ ಈ ಸಮಯದಲ್ಲಿ ವಿದ್ಯುತ್ ನಿಲುಗಡೆಯಾಗುತ್ತಿದ್ದು ಈ ಸಮಸ್ಯೆ ಬಗ್ಗೆ ಇಲಾಖೆಗೆ ಕರೆ ಮಾಡುವ ಜನಸಾಮಾನ್ಯರೊಂದನೆ ಉತ್ತಮ ರೀತಿಯಲ್ಲಿ ಮಾತನಾಡಿ ಉತ್ತರಿಸಿ. ಅದನ್ನು ಬಿಟ್ಟು ಉಡಾಫೆ ಉತ್ತರ ಕೊಡುವುದು, ಸಚಿವರಿಗೆ ಕೇಳಿ ಎಂದು ಬೇಜವಬ್ದಾರಿ ಹೇಳಿಕೆ ನೀಡಿದರೇ ಜಾಗ್ರತೆ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಶನಿವಾರ ಕುಂದಾಪುರದಲ್ಲಿ ಸಚಿವರ ನೇತ್ರತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಹೈಲೆಟ್ಸ್ ಇದು.



ವಿದ್ಯುತ್ ಸಮಸ್ಯೆ ಬಗ್ಗೆ ಇಲಾಖೆಯ ದೂರವಾಣಿಗೆ ಕರೆ ಮಾಡಿದಾಗ ಆ ಕಡೆಯಿಂದ ಉಡಾಫೆ ಉತ್ತರಗಳು ಬರುತ್ತಿದೆ ಎಂದು ನೆರೆದ ಸಾರ್ವಜನಿಕರು ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರ ಎದುರು ಆರೋಪ ಮಾಡಿದ್ದು ಇದಕ್ಕೆ ಇಬ್ಬರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಇಲ್ಲಾ ಸಾರ್… ಹೀಗೆ ಆಗಿಲ್ಲ. ಅಂತಹ ಯಾವುದೇ ದೂರುಗಳಿದ್ದರೇ ಸಾರ್ವಜನಿಕರು ನೀಡಲಿ..ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.

‘ತುಘಲಕ್ ದರ್ಬಾರ್ ಮಾಡಬೇಡಿ’: ತಹಶಿಲ್ದಾರರಿಗೆ ಎಂ.ಎಲ್.ಸಿ. ತರಾಟೆ
ಕುಮ್ಕಿ ಭೂಮಿಯನ್ನು ಹೊಂದಿರುವವರಿಗೆ ಹಕ್ಕುಪತ್ರವನ್ನು ಒದಗಿಸಲು ಇದ್ದ ಎಲ್ಲಾ ಸಮಸ್ಯೆ ಹಾಗೂ ತೊಡಕುಗಳು ಪರಿಹಾರವಾಗಿದ್ದು ತಾಲ್ಊಕಿನಲ್ಲಿ 1600 ಹಕ್ಕುಪತ್ರ ಸಿಗದ ಜನರಿದ್ದಾರೆ. ಇದೊಂದು ಜಟಿಲ ಸಮಸ್ಯೆಯಾಗಿದ್ದರೂ ಕೂಡ ಈ ಸಮ್ಇತಿ ಉಪಾಧ್ಯಕ್ಷರಾಗಿರುವ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ತಹಶಿಲ್ದಾರ್ ನೀಡಿದ ಸಮಜಾಯಿಷಿ ಬಗ್ಗೆ ಅಸಾಮಧಾನ ವ್ಯಕ್ತಪಡಿಸಿದ ಎಂ.ಎಲ್.ಸಿ.ಅವರು ಕೆಲ ಕಾಲ ತಹಶಿಲ್ದರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲದೇ ‘ಇಲ್ಲಿ ತುಘಲಕ್ ದರ್ಬಾರ್ ಮಾಡಬಾರದು’. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ವ್ಯಾಪ್ತಿ ಇರುತ್ತೆ. ಆ ವ್ಯಾಪ್ತಿಯಲ್ಲಿ ಅವರ ಕಡತಗಳನ್ನು ಸಮಿತಿ ಮುಂದೆ ಇಡಬೇಕಾಗಿದ್ದು, ಆ ಕಡತಗಳಲ್ಲಿ ಲೋಪದೋಷಗಳಿದ್ದರೇ ಮಾತ್ರ ರಿಜೆಕ್ಟ್ ಮಾಡಬೇಕು. ಆದರೇ ಕಡತಗಳನ್ನು ಸಮಿತಿ ಮುಂದೆಯೇ ಇಡದೇ ಇರುವುದು ಯಾಕೇ ಎಂದು ಪ್ರಶ್ನಿಸಿದರು.

ಪ್ರತಿತಿಂಗಳಿಗೊಮ್ಮೆ ಜನತಾದರ್ಶನ: ಸೊರಕೆ
ಪ್ರತಿತಿಂಗಳಿಗೊಮ್ಮೆ ಜನತಾದರ್ಶನ ಮಾಡಲು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸಕಾರ್ಯಗಳು ನಡೆಯುತ್ತಿದೆ. ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕೆಲಸ ಮಾಡುವ ಉದ್ದೇಶಕ್ಕಾಗಿ ಪ್ರತಿ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಜನರ ಅಹವಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ತಿಂಗಳ ಕೊನೆಯ ಶನಿವಾರ ಕುಂದಾಪುರದಲ್ಲು ಈ ಕಾರ್ಯ ನಡೆಯಲಿದೆ. ವಿವಿಧ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಆಯಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಅವರ ಹಂತದಲ್ಲಿ ಪರಿಹಾರ ತಂದುಕೊಳ್ಳುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಸಚಿವರ ಮುಂದೆ ಹಲವರ ಅಹವಾಲು
ಪ್ರಮುಖವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ರೀತಿಯ ಜಿಜ್ನಾಸೆಗಳು ಅಹವಾಲುಗಳು ಕೇಳಿ ಬಂದವು. ಕುಮ್ಕಿ ವಿಚಾರ, ಡೀಮ್ಡ್ ಪಾರೆಸ್ಟ್, ಅಕ್ರಮ ಸಕ್ರಮ, ಹಕ್ಕುಪತ್ರ ವಿಚಾರ ಸೇರಿದಂತೆ ಹಲವು ವಿಚಾರಗಳು, ಕುಡಿಯುವ ನೀರು, ಸಂಪರ್ಕ ರಸ್ತೆ ಸಮಸ್ಯೆ, ತಾಲೂಕು ಪಂಚಾಯತಿಗೆ ಸಂಬಂಧಿಸಿದ ಸಮಸ್ಯೆಗಳು, ಮೆಸ್ಕಾಂ ಸಂಬಂದಪಟ್ಟ ವಿಚಾರಗಳ ಬಗ್ಗೆ ಹಲವಾರು ಜನರು ಆಗಮಿಸಿ ಸಚಿವರ ಗಮನಕ್ಕೆ ತಂದರು. ಆಯಾಯ ಸಮಸ್ಯೆಗಳ ಬಗ್ಗೆ ತಾಲ್ಲೂಕು, ಜಿಲ್ಲೆ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಅಥವಾ ಅಗತ್ಯ ಬಿದ್ದರೇ ಸರಕಾರ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಸಚಿವರು ಈ ಸಂದರ್ಭ ತಿಳಿಸಿದರು.
ಎಪ್ರಿಲ್ 6ಕ್ಕೆ ಸಿ.ಎಂ. ಕುಂದಾಪುರಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ.6 ರಂದು ಕುಂದಾಪುರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ಕೋಟೇಶ್ವರ ಯುವ ಮೆರೀಡಿಯನ್ ಹಾಲ್ ಹೆಲಿ ಪ್ಯಾಡಿಗೆ ಬರುವ ಅವರು ಬಳಿಕ ಕುಂದಾಪುರದಲ್ಲಿ ನಡೆಯುವ ಮೈಸೂರು ವಿಭಾಗೀಯ ಮಟ್ಟದ ಸರಕಾರಿ ನೌಕರರ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಇದಾದ ನಂತರ ಮರವಂತೆ ಬಂದರಿಗೆ ಭೇಟಿ, ಗಂಗೊಳ್ಳಿ ಬಂದರು ಕಾಮಗಾರಿಗೆ ಶಿಲನ್ಯಾಸ ಮಾಡಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ವಿವಿಧ ಸವಲತ್ತು ವಿತರಿಸಲಿದ್ದಾರೆ. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸುವ ಬಗ್ಗೆಯೂ ಮಾತುಕತೆ ನಡೆಸುತ್ತೇವೆ ಮತ್ತು ಜಿಲ್ಲೆ ಸಮಸ್ಯೆ ಬಗ್ಗೆ ಮಾತನಾಡಲು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ದು ಉಡುಪಿ ಅಥವಾ ಕುಂದಾಪುರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಎಸಿಬಿ
ಭ್ರಷ್ಟಾಚಾರ ನಿಗ್ರಹ ದಳ ರಚನೆ ವಿಚಾರಕ್ಕೆ ಪ್ರತಿಕ್ರಿಸಿದ ಸೊರಕೆ, ಲೋಕಾಯುಕ್ತದ ಹಲ್ಲು ಕೀಳುತ್ತಿದ್ದಾರೆಬ ಆರೋಪವಿದ್ದು ಲೋಕಾಯುಕ್ತಕ್ಕೆ ಈ ಹಿಂದೆ ಹಲ್ಲು ಇರಲೇ ಇಲ್ಲ. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಯಾವ ಉದ್ದೇಶವು ಸರಕಾರದ್ದಲ್ಲ. ಈಗಾಗಲೇ ಗುಜರಾತ್ ಹಾಗೂ ಕೇರಳ ಸೇರಿ ವಿವಿದ ರಾಜ್ಯಗಳಲ್ಲಿ ಎಸಿಬಿ ರಚನೆಯಾಗಿದ್ದು, ಹೈಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲೂ ಎಸಿಬಿ ರಚನೆಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷ ಹೆರಿಯಣ್ಣ ಬಿ., ತಹಶಿಲ್ದಾರ್ ಗಾಯತ್ರಿ ನಾಯಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಮಾಜಿ ತಾ.ಪಂ ಸದಸ್ಯ ರಾಜೂ ಪೂಜಾರಿ, ಪಕ್ಷದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.