
ಮಂಗಳೂರು,ಮಾ.26 : ಮಂಗಳೂರಿನ ಕುಳೂರು ಸಮೀಪದ ತಣ್ಣೀರುಬಾವಿಯ ಟ್ರೀ ಪಾರ್ಕ್ (ಸಸ್ಯೋದ್ಯಾನ) ಶನಿವಾರ ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಕೆ. ಅಭಯಚಂದ್ರ ಜೈನ್, ಐವನ್ ಡಿ ಸೋಜಾ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್ ಹಾಗೂ ಇತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಿದರು.

ಟ್ರೀ ಪಾರ್ಕ್ ನ ವಿಶೇಷತೆ:
ಫಲ್ಗುಣಿ ನದಿ ಮತ್ತು ಅರಬಿ ಸಮುದ್ರದ ತಟದಲ್ಲಿ 15 ಹೆಕ್ಟೇರ್ ಪ್ರದೇಶದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗಿದ್ದು. ಇದರಲ್ಲಿ ನದಿ ತೀರದ 9 ಹೆಕ್ಟೇರ್ ಪ್ರದೇಶದಲ್ಲಿ ಹೊನ್ನೆ ಮರದ ನೆಡುತೋಪು ಇದೆ. ಉಳಿದ 6 ಹೆಕ್ಟೇರ್ನಲ್ಲಿ ಪಶ್ಚಿಮ ಘಟ್ಟದ 50ರಷ್ಟು ವಿವಿಧ ಜಾತಿಯ ಅಪೂರ್ವ ಗಿಡ, ಮರ, ಬಳ್ಳಿಗಳನ್ನು ನೆಡಲಾಗಿದೆ. 16 ಔಷಧೀಯ ಗಿಡಗಳ ಉದ್ಯಾನವೂ ಇದೆ. ಪಾರ್ಕ್ನ ಸುತ್ತಲೂ 31 ಲಕ್ಷ ರೂ. ವೆಚ್ಚದಲ್ಲಿ ಬೇಲಿಯನ್ನು ಹಾಕಿ ಭದ್ರ ಪಡಿಸಲಾಗಿದೆ. ಟ್ರೀ ಪಾರ್ಕ್ನಲ್ಲಿ ಫುಟ್ಪಾತ್, ವಿಶ್ರಾಂತಿ ಪಡೆಯಲು ಬೆಂಚುಗಳಿವೆ. ಮರ, ಗಿಡ, ಬಳ್ಳಿಗಳ ಮಾಹಿತಿ ಹಾಗೂ ಅವುಗಳನ್ನು ಸಂರಕ್ಷಿಸುವ ಆವಶ್ಯಕತೆಯನ್ನು ವಿವರಿಸುವ ಫಲಕಗಳು, ಜೀವ ವೈವಿಧ್ಯ, ಜೀವ ಸಂಕುಲ ಮತ್ತು ವನ್ಯಜೀವಿಗಳ ಬಗ್ಗೆ ತಿಳುವಳಿಕೆ ನೀಡಲು ಪ್ರತ್ಯೇಕ ಕೌಂಟರ್ ಇದೆ. ಸಂಸ್ಕೃತಿಯನ್ನು ಮೇಳೈಸಲು ವ್ಯವಸ್ಥೆ ಇದೆ. ವಿಶೇಷವಾಗಿ ಯಕ್ಷಗಾನ, ಕಂಬಳ, ಭೂತಕೋಲ, ಗಿರಿಜನರ ಜೀವನ ಕ್ರಮದ ಚಿತ್ರಣವನ್ನು ಇಲ್ಲಿ ನೀಡಲಾಗುತ್ತದೆ.ಮಕ್ಕಳ ಆಟದ ಮೈದಾನ ನಿರ್ಮಾಣ, ಶಾಲಾ ವಿದ್ಯಾರ್ಥಿಗಳಿಗೆ ನೇಚರ್ ಕ್ಯಾಂಪ್ (ಪ್ರಕೃತಿ ಶಿಬಿರ) ನಡೆಸಲು ವ್ಯವಸ್ಥೆ, ಬೀಚ್ ವಾಲಿಬಾಲ್ ಅಂಗಣ ರಚಿಸಲಾಗುವುದು.