
ಮಂಗಳೂರು,ಮಾ.11 : ರಂಗ ಕಲಾವಿದನ ಬದುಕಿನ ಕಥೆಯನ್ನು ಬಿಂಬಿಸುವ ಬಹುನಿರೀಕ್ಷಿತ `ರಂಗೋಳು’ ಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ ಕಂಡಿದೆ. ಸುನೀತಾ ಕ್ರಿಯೇಷನ್ಸ್, ಬೆಂಗಳೂರು ಲಾಂಛನದಡಿಯಲ್ಲಿ ಮೂಡಿಬಂದಿರುವ ಚಿತ್ರವನ್ನು ಎ.ವಿ.ಜಯರಾಜ್ ನಿರ್ದೇಶಿಸಿದ್ದು ಕನ್ನಡ, ತುಳು ರಂಗಭೂಮಿಯ ಖ್ಯಾತ ಕಲಾವಿದರ ತಂಡ ಚಿತ್ರದಲ್ಲಿದೆ.
ನಗರದ ಸುಚಿತ್ರ ಥಿಯೇಟರಿನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ ಸದಾನಂದ ಸುವರ್ಣ ಅವರು ಚಿತ್ರವನ್ನು ಬಿಡುಗಡೆಗೊಳಿಸಿ ಮಾತಾಡಿದರು. `ರಂಗೋಳು ಚಿತ್ರ ರಂಗಭೂಮಿಯ ಕಲಾವಿದರು ಬದುಕಿನಲ್ಲಿ ಅನುಭವಿಸುವ ವ್ಯಥೆಯನ್ನು ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದು, ಇದರಲ್ಲಿ ಬರುವ ಪ್ರತೀ ಪಾತ್ರ ಕೂಡಾ ಓರ್ವ ಕಲಾವಿದನಿಗೆ ಆಪ್ತವಾದುದು. ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಿ’ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸಾಹಿತಿ, ನಟ ಡಾ.ನಾ.ದಾಮೋದರ ಶೆಟ್ಟಿ ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಿರ್ದೆಶಕ ಎ.ವಿ.ಜಯರಾಜ್, ಕಲಾವಿದರಾದ ಚೇತನ್ ರೈ ಮಾಣಿ, ದಿನೇಶ್ ಅತ್ತಾವರ, ಮಾನಸಿ ಸುಧೀರ್, ಮನೋಜ್ ಪುತ್ತೂರು, ಛಾಯಾಗ್ರಾಹಕ ಮಹಾಬಲೇಶ್ವರ ಹೊಳ್ಳ, ಕಲಾ ನಿರ್ದೇಶಕ ದೇವಿಪ್ರಸಾದ್, ರೋಹಿಣಿ ಜಗರಾಂ, ಮಹೇಶ್‌ಮೂರ್ತಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು. ಚಿತ್ರದ ಸಹನಿರ್ದೇಶಕ ಜಗನ್ ಪವಾರ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರವನ್ನು ಮಂಗಳೂರು, ಮೂಲ್ಕಿ ಹಾಗೂ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಮಾಸ್ಟರ್ ಮಯೂರ್, ಪ್ರಕಾಶ್ ಬಾರೆ, ಅರವಿಂದ್ ಬೋಳಾರ್, ಜೀವನ್ ಉಳ್ಳಾಲ್, ಖ್ಯಾತ ನಟಿ ಪದ್ಮಜಾ ರಾವ್ ನಟಿಸಿದ್ದಾರೆ. ಸುಬ್ರಹ್ಮಣ್ಯ ಹೊಳ್ಳ ಸಂಕಲನಕಾರರಾಗಿ ಚಿತ್ರಕ್ಕೆ ದುಡಿದಿದ್ದು, ಹಿರಿಯ ಸಂಗೀತ ನಿರ್ದೇಶಕ ಟಿ.ಜಿ.ಗೋಪಾಲಕೃಷ್ಣ ಅವರು ಸಂಗೀತ ನೀಡಿದ್ದಾರೆ. ರಂಗೋಳು ಚಿತ್ರ ಮಂಗಳೂರಿನ ಸುಚಿತ್ರ ಸೇರಿದಂತೆ ಬಿಗ್ ಸಿನೆಮಾಸ್, ಸಿನೆಪೊಲಿಸ್, ಪಿವಿಆರ್, ನಕ್ಷತ್ರ ಬಿ.ಸಿ.ರೋಡ್, ಮಣಿಪಾಲದ ಐನಾಕ್ಸ್, ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ.