ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಕ.ಸಾ.ಪಕ್ಕೆ 5ನೇ ಅವಧಿಗೆ‌ ಅಧ್ಯಕ್ಷರಾಗಿ ಕಲ್ಕೂರ‌ ಅವಿರೋಧ‌ ಆಯ್ಕೆ

Pinterest LinkedIn Tumblr

pradeep_kumar_kalkura_1

ಮಂಗಳೂರು,ಫೆ.29: ಶ್ರೀ ಎಸ್. ಪ್ರದೀಪಕುಮಾರ ಕಲ್ಕೂರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ‌ ಅಧ್ಯಕ್ಷರಾಗಿ ‌ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಅವರಿಗೆ ಮಂಗಳೂರು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ‌ ಆರ್.ಡಿ. ಶಿವಶಂಕರಪ್ಪ ಅವರು ಧೃಢಪತ್ರವನ್ನು ರವಿವಾರ ಪ್ರದಾನ ಮಾಡಿದರು. ಇದು ‌ಅವರ ಸತತ 5ನೇ ಅವಧಿಯ‌ ಅಧಿಕಾರಾವಧಿಯಾಗಿರುತ್ತದೆ.

pradeep_kumar_kalkura_2

ಕಲ್ಕೂರ‌ ಅವರ ಸಾಧನೆ:
ಈ ಹಿಂದೆ ಕಯ್ಯಾರ ಕಿಂಞಣ್ಣ ರೈ‌ಅವರ‌ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಜರಗಿದ ಅಖಿಲಭಾರತ ಸಾಹಿತ್ಯ ಸಮ್ಮೇಳನ, ಬಳಿಕ ಮೂಡಬಿದಿರೆಯಲ್ಲಿ ಡಾ| ಮೋಹನ ಆಳ್ವರ ಮುಂದಾಳತ್ವದಲ್ಲಿ ಜರಗಿದ ಅ.ಭಾ. ಸಾಹಿತ್ಯ ಸಮ್ಮೇಳನಗಳ ಅನುಭವದ ಹಿನ್ನಲೆಯಲ್ಲಿ ಕಳೆದ ನಾಲ್ಕೂ ಅವಧಿಗಳಲ್ಲಿ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ತಿನ ಸೇವೆಯನ್ನು ಹೋಬಳಿ, ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವ್ಯಾಪಕವಾಗುವಂತೆ ಮಾಡಿರುವರು.

ಗೃಹ ಸಾಹಿತ್ಯ ಹರಿದಾಸ ಸಾಹಿತ್ಯ, ಆಹೋರಾತ್ರಿ ಸಾಹಿತ್ಯ ಸಮ್ಮೇಳನ, ಕಲಾ ಸಾಹಿತ್ಯ, ವಚನ ಸಾಹಿತ್ಯ ಹೀಗೆ ಹತ್ತು ಹಲವಾರು ಸಾಹಿತ್ಯ ಪರವಾದ ಚಟುವಟಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ. ಬಹು ಭಾಷಾ ಕವಿಗೊಷ್ಠಿ, ಗಮಕ ಸಾಹಿತ್ಯ, ಪುಸ್ತಕ ಪ್ರಕಾಶನ, ಯಕ್ಷಗಾನ ಸಾಹಿತ್ಯ ವಿಭಾಗಗಳಲ್ಲೂ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯಾರಾಧನೆ ಗೈದಿದ್ದಾರೆ.

ಕನ್ನಡ‌ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು, ನಗರದ ನೆಹರೂ ಮೈದಾನದಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಸಾಕಾರಗೊಳಿಸಿರುವರು. ರೈಲ್ವೆ ವಿಭಾಗ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇತರ ಭಾಷಾ ಸಿಬಂದಿಗಳಿಗೆ ಕನ್ನಡ ಭಾಷಾಕಲಿಕೆಯನ್ನು ವ್ಯವಸ್ಥೆಗೊಳಿಸಿರುವುದಲ್ಲದೆ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ.

ಕಲ್ಕೂರ ಪ್ರತಿಷ್ಠಾನದ ಮೂಲಕ ರಾಷ್ಟ್ರೀಯ ಮಕ್ಕಳ ಹಬ್ಬವಾದ ಶ್ರೀಕೃಷ್ಣ ವೇಷ ಸ್ಪರ್ಧೆಯ‌ ಆಯೋಜನೆ ಗೈಯ್ಯುವ ಮೂಲಕ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಪ್ರಯತ್ನವೂ‌ ಇವರದ್ದಾಗಿದೆ. ಭಾರತ ಸೇವಾದಳದಲ್ಲೂ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸಿರುವರು.

ಶ್ರೀ ಕ್ಷೇತ್ರಕದ್ರಿಯ ಆಡಳಿತ ಮಂಡಲಿ, ತುಳುನಾಡು ಎಜುಕೇಶನ್‌ ಟ್ರಸ್ಟ್, ಶಾರದಾ ವಿದ್ಯಾಲಯ, ಉಡುಪಿ ಪೇಜಾವರ ಪರ್ಯಾಯದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರಗಿದ ನಡಾವಳಿ ಉತ್ಸವದ ಜವಾಬ್ದಾರಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದಲ್ಲದೆ ಇನ್ನೂ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಗುರತಿಸಿಕೊಂಡಿರುವರು.

Write A Comment