ಕನ್ನಡ ವಾರ್ತೆಗಳು

ದುಷ್ಕರ್ಮಿಗಳಿಂದ ಪತ್ರಕರ್ತನ ಮೇಲೆ ಹಲ್ಲೆ : ದ.ಕ.ಜಿಲ್ಲಾ ಪತ್ರಕರ್ತರ ಸಂಘ ಖಂಡನೆ

Pinterest LinkedIn Tumblr

Puttur_Assif_attach

ಮಂಗಳೂರು: ನಗರದ ಸಂಜೆ ಪತ್ರಿಕೆಯೊಂದರ ಬೆಳ್ತಂಗಡಿ ವರದಿಗಾರ ಆಸೀಫ್ ಸರಳೀಕಟ್ಟೆ ಅವರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವುದನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುವ ಮತ್ತು ಅವರ ಕರ್ತವ್ಯಕ್ಕೆ ಧಕ್ಕೆ ತರುವಂತಹ ಕೆಲಸಗಳು ನಡೆಯುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ. ಇದನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಮಾಧ್ಯಮದವರು ಭಯ ಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡುವಂತೆ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಒತ್ತಾಯಿಸಲಾಗುವುದು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸೀಫ್ ಸರಳೀಕಟ್ಟೆ ಕರ್ತವ್ಯ ಮುಗಿಸಿ ಮನೆ ಕಡೆಗೆ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಅವರ ಸ್ಕೂಟರನ್ನು ತಡೆದು ಮಾರಾಣಾಂತಿಕವಾಗಿ ಹಲ್ಲೆಗೈದು ಕೊಲೆ ಬೆದರಿಕೆ ಒಡ್ಡಿದ್ದಾರೆ. ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪತ್ರಕರ್ತರ ಸಂಘವು ಆಗ್ರಹಿಸಿದೆ.

ಘಟನೆಯ ವಿವರ :

ಆಸಿಫ್ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಪಡ್ಡಯಿಸುರ್ಯ ಆದಂ ಎಂಬುವರ ಪುತ್ರ ಅಜೀಜ್ ಹಾಗೂ ಈತನ ತಂಡದ ಸದಸ್ಯರು ಅವರ ಸ್ಕೂಟರ್‌ನ್ನು ಅಡ್ಡಗಟ್ಟಿ ಎಳೆದಾಡಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಕೊಲೆ ನಡೆಸುವ ಬೆದರಿಕೆಯೊಡ್ಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ಆಸಿಫ್ ಅವರನ್ನು ಅವಾಚ್ಯವಾಗಿ ನಿಂದಿಸಿ ಪತ್ರಿಕೆಯಲ್ಲಿ ಭಾರಿ ವರದಿ ಮಾಡುತ್ತೀಯಾ, ಇನ್ನು ಮುಂದೆ ಹಾಗೆ ಮಾಡಬಾರದೆಂದು’ ಅವಾಜ್‌ ಹಾಕಿ ಈ ಕೃತ್ಯ ಎಸಗಿದ್ದಾರೆ ಎಂದು ಆಸಿಫ್ ಆರೋಪಿಸಿದ್ದಾರೆ.

ಅಜೀಜ್ ಜೊತೆ ಇಮ್ರಾನ್, ನವಾಝ್ ಸೇರಿ ಇನ್ನು ಅನೇಕರು ಇದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಆಸಿಫ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದು, ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಅಜೀಜ್ ಖತರ್ನಾಕ್ ರೌಡಿಯಾಗಿ ಮೆರೆಯುತ್ತಿದ್ದು, ಈತನ ಮೇಲೆ ಇದಕ್ಕೂ ಮುನ್ನ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ತಮ್ಮನೂ ಸಹ ಹುಡುಗಿಯರನ್ನು ಚುಡಾಯಿಸುವ ವಿಚಾರದಲ್ಲಿ ಜೈಲಿಗೆ ಹೋಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಲ್ಲದೆ ತನ್ನ ಕೃತ್ಯವನ್ನು ಮುಂದುವರಿಸಿದ್ದಾನೆಂದು ಆರೋಪಿಸಲಾಗಿದೆ.

ಅಜೀಜ್ ತಂಡದ ಸದಸ್ಯರು ಪಿಎಫ್‍ಐ ಕಾರ್ಯಕರ್ತರಾಗಿದ್ದು, ಸಂಘಟನೆಯ ಹೆಸರಲ್ಲಿ ಅನೇಕ ಅಡ್ಡದಂಧೆಗಳನ್ನು ನಡೆಸುತ್ತಿದ್ದಾರೆ. ಪಿಎಫ್‍ಐ ಮುಖಂಡರು ಈತನನ್ನು ಹೇಗೆ ಸಂಘಟನೆಗೆ ಸೇರಿಸಿಕೊಂಡಿದ್ದಾರೆಂಬ ಪ್ರಶ್ನೆಯೂ ಇದೀಗ ಕಾಡತೊಡಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಗ್ಯಾಂಗ್‍ನ ಸದಸ್ಯರು ಗಾಂಜಾ ವ್ಯಸನಿಗಳಾಗಿದ್ದಾರೆ. ಹುಡಗಿಯರನ್ನು ಚುಡಾಯಿಸುವುದು, ಶಾಲಾ ಮಕ್ಕಳನ್ನು ಹೆದರಿಸುವುದು, ಹೆಣ್ಣುಮಕ್ಕಳನ್ನು ಬೆಂಬತ್ತಿ ಬರುವುದು, ಬೈಕ್ ಕಾರ್‌ನಲ್ಲಿ ಹೊರಟು ದರೋಡೆ ನಡೆಸುವುದು ಇತ್ಯಾದಿ ಐನಾತಿ ಕೆಲಸದಲ್ಲಿ ಇವರು ತೊಡಗಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಆಸಿಫ್ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Write A Comment