ಮಂಗಳೂರು,ಫೆ.26: ದೇಶದ ಸ್ವಾತಂತ್ರ್ಯಕ್ಕಾಗಿ ಎಳ್ಳಷ್ಟೂ ಕೆಲಸ ಮಾಡದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಸಂಘಟನೆಗಳು ದೇಶದ ಜನತೆಗೆ ದೇಶಪ್ರೇಮದ ಬೋಧನೆ ನೀಡುತ್ತಿರುವುದು ಕೇವಲ ವ್ಯಂಗ್ಯವಾಗಿದೆ ಎಂಬುದಾಗಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಕಾರ್‍ಯದರ್ಶಿ ವಸಂತ ಆಚಾರಿ ಹೇಳಿದರು.
ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಇತ್ತೀಚೆಗೆ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಂಧನ ಮತ್ತು ದಮನದ ವಿರುದ್ಧ ನಡೆಸಿದ ಜಂಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಮೂವತ್ತು ವರ್ಷಗಳಿಗೂ ಮೀರಿ ಆರೆಸ್ಸೆಸ್ಸಿನ ಸ್ವಯಂಸೇವಕರಾಗಿದ್ದವರು. ಅವರು ಪ್ರಧಾನಿಯಾದ ಮೇಲೆ, ಬಿಜೆಪಿ ಪಕ್ಷದ ಕೇಂದ್ರದ ಆಡಳಿತದಲ್ಲಿ ದೇಶದ ಬಹುತ್ವದ ಪರಿಕಲ್ಪನೆಯನ್ನು ಬುಡಮೇಲು ಮಾಡಿ ಏಕದೇಶ, ಏಕಧರ್ಮ, ಏಕಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಅದನ್ನು ಒಪ್ಪದವರು ಸಂಘ ಪರಿವಾರದ ದೃಷ್ಟಿಯಲ್ಲಿ ದೇಶದ್ರೋಹಿಗಳಾಗಿದ್ದಾರೆ. ಮಹಾತ್ಮ ಗಾಂಧಿಯನ್ನು ಕೊಂದ ಸಿದ್ಧಾಂತದ ಪ್ರತಿಪಾದಕರು ಇವತ್ತು ರಾಷ್ಟ್ರಕ್ಕೆ ನೀತಿ ಪಾಠ ಹೇಳುತ್ತಿದ್ದಾರೆ ಎಂದವರು ಟೀಕಿಸಿದರು.
1991 ರಲ್ಲಿ ಆರಂಭವಾದ ಉದಾರೀಕರಣದ ಸಂದರ್ಭದಲ್ಲಿ ಕಾಂಗ್ರೆಸ್ ಆಳ್ವಿಕೆ ವೇಳೆ ಸಂಘ ಪರಿವಾರದ ‘ಸ್ವದೇಶೀ ಜಾಗರಣ ಮಂಚ್’ ಉದಾರೀಕರಣವನ್ನು ತೀವ್ರವಾಗಿ ಟೀಕೆಗೊಳಪಡಿಸಿತ್ತು. ಆದರೆ ಇದೀಗ ಎನ್‌ಡಿಎ ಆಳ್ವಿಕೆಯಲ್ಲಿ ದೇಶದ ನೆಲ, ಜಲ, ಸಂಪತ್ತನ್ನು ಉದಾರವಾಗಿ ವಿದೇಶೀ ಸಂಸ್ಥೆಗಳಿಗೆ ಅಗ್ಗದ ದರದಲ್ಲಿ ನೀಡುತ್ತಿದ್ದರೂ, ಸ್ವದೇಶೀ ಜಾಗರಣ ಮಂಚ್‌ವು ಮೌನವಾಗಿದೆ. ಆರೆಸ್ಸೆಸ್ ನಿಜವಾಗಿ ಒಂದು ರಾಷ್ಟ್ರೀಯ ಸರ್ವನಾಶ ಸಂಘವಾಗಿದೆ. ರಾಷ್ಟ್ರೀಯ ಸಮಗ್ರತೆಯನ್ನು ಅದು ನಾಶ ಮಾಡುತ್ತಿದೆ.
ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವನ್ನು ನಿರ್ಮಿಸಲಾಗಿದೆ. ದೇಶದ ಹಲವು ಬುದ್ಧಿ ಜೀವಿ, ಸಾಹಿತಿ, ವಿಜ್ಞಾನಿಗಳು ಇದನ್ನು ವಿರೋಧಿಸಿ ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸಾತಿ ಮಾಡುತ್ತಿದ್ದಾರೆ. ಆದಾಗ್ಯೂ ಸಂಘ ಪರಿವಾರವು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಮೂಲಕ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಜವಹರಲಾಲ್ ನೆಹರೂ, ವಿ.ವಿ.ಗಳಲ್ಲಿ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಚಟುವಟಿಕೆಗಳ ಮೇಲೆ ದಾಳಿ ಮಾಡುತ್ತಿದೆ.
ಪ್ರಗತಿಪರ, ದಲಿತ ವಿದ್ಯಾರ್ಥಿಗಳು ಕ್ರಿಯಾಶೀಲರಾಗುತ್ತಿರುವ ಸಂದರ್ಭದಲ್ಲಿ ಅವರ ಮೇಲೆ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಹೈದರಾಬಾದಿನ ಪ್ರತಿಭಾವಂತ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡುವಂತಾಯಿತು. ಅಫ್ಝಲ್‌ಗುರು ಮರಣದಂಡನೆಯ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಡವಾದಿ ಚಿಂತನೆಯ ಕನ್ನಯ್ಯ ಕುಮಾರ್ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಲಾಗಿದೆ. ಇದನ್ನು ವಿರೋಧಿಸಿದ ಸಭೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಮತ್ತು ಸೀತಾರಾಮ ಯೆಚೂರಿಯವರನ್ನು ದೇಶದ್ರೋಹಿಗಳೆಂದು ಸಂಘ ಪರಿವಾರದವರು ಕರೆದಿದ್ದಾರೆ. ಈ ಹಿನ್ನೆಲೆ ಹಿಂದುತ್ವದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಬಲವಾದ ಹೋರಾಟಕ್ಕೆ ಸಜ್ಜಾಗಬೇಕೆಂದು ವಸಂತ ಆಚಾರಿ ಕರೆ ನೀಡಿದರು.
ಎಲ್ಲಿ ಪ್ರಗತಿಪರ ಹಾಗೂ ದಲಿತ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದಾರೋ, ಅಲ್ಲಿ ಅವರನ್ನು ದಮನಿಸಲು, ಕೇಂದ್ರ ಸರಕಾರ ಕಾರ್‍ಯತತ್ಪರವಾಗಿದೆ ಎಂಬುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ಸುರೇಶ್ ಕುಮಾರ್ ಹೇಳಿದರು. ಕನ್ನಯ್ಯ ಕುಮಾರ್ ಮೇಲೆ ಹೊರಿಸಿದ ದೇಶದ್ರೋಹದ ಆರೋಪ ಸುಳ್ಳೆಂದು ಇವತ್ತು ಮಾಧ್ಯಮಗಳಿಂದ ಸ್ಪಷ್ಟವಾಗಿದೆ. ಎಬಿವಿಪಿಯು, ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಸ್ಥಾನ ಗಳಿಸಲು ಸತತವಾಗಿ ವಿಫಲವಾಗುತ್ತಿದ್ದು, ಎನ್‌ಡಿಎ ಸರಕಾರದ ಅವಧಿಯಲ್ಲೂ ಸ್ಥಾನ ಗಳಿಸಲು ಸಾಧ್ಯವಾಗದ ಹತಾಶೆಯಿಂದ ವಿಕೃತ ದಾಳಿಗಳನ್ನು ಆರಂಭಿಸಿದೆ. ಜೆಎನ್‌ಯು ಅನೇಕ ಪ್ರಗತಿಪರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದಶಕಗಳಿಂದಲೂ ಸೃಷ್ಟಿಸುತ್ತಿರುವ ವಿದ್ಯಾಲಯವಾಗಿದೆ. ಅಲ್ಲಿನ ಅಧ್ಯಾಪಕರು, ವಿದ್ಯಾರ್ಥಿಗಳ ಚಟುವಟಿಕೆಗಳು ಸಂಘ ಪರಿವಾರಕ್ಕೆ ಕಣ್ಣು ಕುಕ್ಕುತ್ತಿವೆ. ಅದಕ್ಕಾಗಿ ಜೆಎನ್‌ಯು ವಿ.ವಿ.ಯನ್ನೇ ದೇಶದ್ರೋಹದ ತಾಣವೆಂದು ಸಂಘ ಪರಿವಾರದವರು ನಿರೂಪಿಸುತ್ತಿದ್ದಾರೆ. ರೋಹಿತ್ ವೇಮುಲನ ಆತ್ಮಹತ್ಯೆಯ ಹಿಂದೆಯೂ ಇಂಥ ಕಿರುಕುಳವನ್ನು ಕಾಣಬಹುದು. ದೇಶಪ್ರೇಮದ ಪರಂಪರೆಯಿರುವ ಎಡಪಕ್ಷಗಳು ಸಂಘ ಪರಿವಾರದ ಛಿದ್ರಕಾರೀ ಅವಾಂತರಗಳನ್ನು ದೃಢಸಂಕಲ್ಪದಿಂದ ಎದುರಿಸಬೇಕಾಗಿದೆ ಎಂದು ಸುರೇಶ್ ಕುಮಾರ್ ಕರೆ ನೀಡಿದರು.
ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಸೆಕ್ರೆಟೇರಿಯಲ್ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಸಿಪಿಐ ಪಕ್ಷದ ತಿಮ್ಮಪ್ಪ ಧನ್ಯವಾದ ಸಲ್ಲಿಸಿದರು. ಸಿಪಿಐ(ಎಂ) ಮುಖಂಡರಾದ ಯಾದವ ಶೆಟ್ಟಿ, ಸುನೀಲ್‌ಕುಮಾರ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್ ಸಿಪಿಐಯ ಶಿವಪ್ಪ, ಪ್ರಭಾಕರ ರಾವ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
