ಕನ್ನಡ ವಾರ್ತೆಗಳು

ಪಿಲಿಕುಲ : ತಡೆಗೋಡೆ ನಿರ್ಮಾಣಕ್ಕೆ ವಿರೋಧ – ಗ್ರಾಮಸ್ಥರ ಹಾಗೂ ಪೊಲೀಸರ ನಡುವೆ ಘರ್ಷಣೆ

Pinterest LinkedIn Tumblr

Pilikula_Citizen_Fight_1

ಮಂಗಳೂರು,ಫೆ.26 : ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡುವ ವಿಚಾರದಲ್ಲಿ ಗುರುವಾರ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದು,ಕಾಮಗಾರಿ ವಿರೋಧಿಸಿ 300ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪಿಲಿಕುಳ ಡಾ| ಶಿವರಾಮ ಕಾರಂತ ನಿಸರ್ಗಧಾಮದ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿಜ್ಞಾನ ಪಾರ್ಕ್‌ಗೆ ಹೊಂದಿಕೊಂಡಿರುವ ರಸ್ತೆಗೆ ತಡೆಗೋಡೆ ನಿರ್ಮಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಕಾಮಗಾರಿ ಆರಂಭಗೊಂಡಾಗ ಪರಿಸರದ ಸುಮಾರು 300ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಕಾಮಗಾರಿ ವಿರೋಧಿಸಿ, ಪ್ರತಿಭಟನೆ ಆರಂಭಿಸಿದರು.

ಸ್ಥಳದಲ್ಲಿದ್ದ ಪೊಲೀಸರು ಗ್ರಾಮಸ್ಥರನ್ನು ಮನವೊಲಿಸುವ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಎದುರುಪದವು ಪ್ರದೇಶದಲ್ಲಿ ಸುಮಾರು ಒಂದು ಸಾವಿರದಷ್ಟು ಮನೆಗಳಿವೆ. ಅಲ್ಲಿಗೆ ಹೋಗಲು ಈ ರಸ್ತೆ ಹತ್ತಿರದ್ದಾಗಿದೆ. ಈ ರಸ್ತೆ ಮುಚ್ಚಿದರೆ ಸುತ್ತುಬಳಸಿ ಸಾಗಬೇಕಾಗಿದ್ದು, ಗ್ರಾಮಸ್ಥರು ಸಮಸ್ಯೆಗಳನ್ನೆ ಎದುರಿಸ ಬೇಕಾಗುತ್ತದೆ. ಆದುದರಿಂದ, ಈ ರಸ್ತೆ ಮುಚ್ಚುವುದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆ ಲೆಕ್ಕಿಸದೆ ಪೊಲೀಸ್‌ ಭದ್ರತೆಯೊಂದಿಗೆ ಕಾಮಗಾರಿ ಮುಂದುವರಿಸಿದಾಗ ಗ್ರಾಮಸ್ಥರು ತಡೆಯೊಡ್ಡಲು ಮುಂದಾದರು. ಈ ಸಂದರ್ಭ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಮಗಾರಿ ಸ್ತಗಿತಕ್ಕೆ ಸೂಚನೆ : ಪರಿಸ್ಥಿತಿ ಶಾಂತ

ಮೂಡುಶೆಡ್ಡೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ಅವರು ಸ್ಥಳಕ್ಕಾಗಮಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಗ್ರಾಮಸ್ಥರು ಅವರಲ್ಲೂ ತಡೆಗೋಡೆ ನಿರ್ಮಿಸುವುದಕ್ಕೆ ತಮ್ಮ ವಿರೋಧವಿದೆ ಎಂದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವರು ಕೂಡಲೇ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದೆ.

Write A Comment