ಕನ್ನಡ ವಾರ್ತೆಗಳು

ಪರ್ಯಾಯ ರಾಜ ಪಟ್ಟಾಭಿಷೇಕ : ಮಂಗಳೂರು ಪುರಪ್ರವೇಶಿಸಿದ `ನವನಾಥ್ ಝುಂಡಿ’ – ಅದ್ದೂರಿ ಸ್ವಾಗತ

Pinterest LinkedIn Tumblr

kadri_jogi_swmiji_1

ಮಂಗಳೂರು, ಫೆ. 26 : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ `ನವನಾಥ್ ಝುಂಡಿ’ ಶುಕ್ರವಾರ ಬೆಳಿಗ್ಗೆ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸುವ ಝಂಡಿ ಕೊಟ್ಟಾರದಿಂದ ಪುರಪ್ರವೇಶವಾಯಿತು.

ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಜೆ.ಆರ್ .ಲೋಬೋ, ಮ.ನ.ಪಾ ಸದಸ್ಯರು ಹಾಗೂ ಜೋಗಿ ಸಮಾಜ ಬಾಂಧವರು ಎಲ್ಲರೂ ನೂತನ ಸ್ವಾಮೀಜಿಯನ್ನು ಬರಮಾಡಿಕೊಂಡರು.
ಕೊಂಬು ಕಹಳೆ, ನಾಸಿಕ್ ಬ್ಯಾಂಡ್, ಕಲ್ಲಡ್ಕ ಗೊಂಬೆಗಳನ್ನೊಳಗೊಂಡ ಝುಂಡಿ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ, ಲೇಡಿಹಿಲ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಹಂಪನಕಟ್ಟ, ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನಕ್ಕಾಗಿ ಕದಳೀ ಮಠ ತಲುಪಿದೆ. ಝುಂಡಿಯಲ್ಲಿ ಸಾಗಿ ಬಂದ ಯೋಗಿಗಳಿಗೆ ಅಲ್ಲಲ್ಲಿ ಸಾರ್ವಜನಿಕರು ಪಾದೆಪೂಜೆ ನೆರವೇರಿಸಿ ಹೂ ಹಾರ, ಹಣ್ಣು ಹಂಪಲು ಸಮರ್ಪಿಸಿ ಆರ್ಶೀವಾದ ಪಡೆದುಕೊಂಡರು.

kadri_jogi_swmiji_2 kadri_jogi_swmiji_3 kadri_jogi_swmiji_4 kadri_jogi_swmiji_5 kadri_jogi_swmiji_6 kadri_jogi_swmiji_7 kadri_jogi_swmiji_8 kadri_jogi_swmiji_9 kadri_jogi_swmiji_10 kadri_jogi_swmiji_11 kadri_jogi_swmiji_12 kadri_jogi_swmiji_13 kadri_jogi_swmiji_14 kadri_jogi_swmiji_15 kadri_jogi_swmiji_16 kadri_jogi_swmiji_17 kadri_jogi_swmiji_18 kadri_jogi_swmiji_19 kadri_jogi_swmiji_20 kadri_jogi_swmiji_21

ಈ ಝುಂಡಿಯಲ್ಲಿ 2 ವೈದ್ಯ, 3 ಇಂಜಿನಿಯರ್, 19 ಸ್ನಾತಕೋತ್ತರ ಪದವೀದರ ಸನ್ಯಾಸಿಗಳಿದ್ದಾರೆ, ಅಲ್ಲದೆ ಹಠಯೋಗಿಗಳು ಸೇರಿದಂತೆ ಸುಮಾರು500ಕ್ಕೂ ಅಧಿಕ ಸಾಧುಗಳು ಝಂಡಿಯಲ್ಲಿದ್ದಾರೆ. ಯೋಗಿ ರಾಜೇಂದ್ರನಾಥ್ ಕಳೆದ 15 ವರ್ಷಗಳಿಂದ ನಿಂತುಕೊಂಡೇ ಹಠಯೋಗ ನಿರತರಾಗಿದ್ದ್ದಾರೆ.

ಕೊಟ್ಟಾರದಲ್ಲಿ ವಿಠಲ್‌ದಾಸ್ ತಂತ್ರಿ, ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯದರ್ಶಿ ಸತೀಶ್ ಮಾಲೆಮಾರ್, ಸಲಹೆಗಾರ ಡಾ. ಕೇಶವನಾಥ್, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ. ದಿವಾಕರ, ವಿಶ್ವ ಹಿಂದು ಪರಿಷತ್ ಬಜರಂಗದಳದ ಮುಂದಾಳುಗಳಾದ ಪ್ರೊ. ಎಂ. ಬಿ. ಪುರಾಣಿಕ್, ಜಗದೀಶ್ ಶೇಣವ, ಶರಣ್ ಪಂಪ್‌ವೆಲ್, ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಸ್. ಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್, ಪಾಲಿಕೆ ಸದಸ್ಯ ಡಿ. ಕೆ. ಅಶೋಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಝುಂಡಿಯನ್ನು ಸ್ವಾಗತಿಸಿದರು.

 

ಇಂದಿನಿಂದ ಮಾ.7ರ ವರೆಗೆ ದಿನ ನಿತ್ಯ ಸಂಜೆ ಕದಳೀ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಸಂಜೆ 3.30ಕ್ಕೆ ಮಂಗಳಾದೇವಿ ದೇವಸ್ಥಾನದಿಂದ ಹೊರಡುವ “ಹೊರೆ ಕಾಣಿಕೆ” ಯಾತ್ರೆ ಕಂಕನಾಡಿ, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ ಮಾರ್ಗವಾಗಿ ಕದಳಿ ಮಠಕ್ಕೆ ತಲುಪಲಿದೆ.

ಮಾ. 7ರಂದು ಮೇಷ ಲಗ್ನ ಸುಮುಹೂರ್ತದಲ್ಲಿ ಯೋಗಿ ನಿರ್ಮಲ್‌ನಾಥ್‌ಜೀಗೆ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.

ಕದ್ರಿ ದೇವಸ್ಥಾನದ ಸಂಬಂಧ..
ಕದಳಿ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿಗಳಿಗೆ ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದ್ರಿ ರಥೋತ್ಸವದ ದಿನ ಪೀಠಾಧಿಪತಿಗಳು ಬ್ರಹ್ಮರಥದ ಎದುರಿನಲ್ಲಿ ಕುದುರೆಯನ್ನೇರಿ ರಥದ ಮುಂದೆ ಚಲಿಸುವ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿದೆ. ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರೆ ಪ್ರಾರಂಭದ ಮುನ್ನ ದಿನ ಕದಳೀ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಫಲ, ಪುಷ್ಪ, ಸೀರೆ, ಅರ್ಪಿಸಿ ಕದ್ರಿ ದೇವಸ್ಥಾನದ ಜಾತ್ರೆ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ. ನವನಾಥ ಝುಂಡಿಯು ಮಂಗಳೂರು ನಗರದಲ್ಲಿ ಸಾಗುವ ದಾರಿ ನಡುವೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ಹಾಗೂ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಅತಿಥ್ಯ ಸ್ವೀಕರಿಸಿ ಸ್ವಲ್ಪಹೊತ್ತು ವಿಶ್ರಮಿಸುತ್ತದೆ. ಇದು ನಾಥಪಂಥಕ್ಕೂ ಈ ಎರಡು ಕ್ಷೇತ್ರಗಳಿಗೂ ಇರುವ ಸಂಬಂಧವನ್ನು ತೋರಿಸುತ್ತದೆ. ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ವೀರವೆಂಕಟೇಶ ದೇವರ ಮೂರ್ತಿ 1804 ನೇ ಇಸವಿಯಲ್ಲಿ ನಾಥ ಸನ್ಯಾಸಿಯೊಬ್ಬರು ನೀಡಿರುವುದಕ್ಕೆ ಪುರಾವೆ ಲಭ್ಯವಿದೆ.

28ರಂದು ಧಾರ್ಮಿಕ ಸಭೆ..
ಫೆ. 28ರಂದು ಸಂಜೆ ಕದಳೀ ಮಠದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ ಯೋಗಿ ಮಹಾಸಭಾ ಹರಿದ್ವಾರ ಇದರ ಅಧ್ಯಕ್ಷ ಯೋಗಿ ಶ್ರೀ ಮಹಂತ್ ಆದಿತ್ಯನಾಥ್‌ಜೀ ಆಶೀರ್ವಚನ ನೀಡಲಿದ್ದಾರೆ ಎಂದು ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್ ತಿಳಿಸಿದ್ದಾರೆ.

Write A Comment