ಕನ್ನಡ ವಾರ್ತೆಗಳು

ಫೆ.27 :ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘದಿಂದ ಪ್ರೇರಣಾ ಸಮಾವೇಶ.

Pinterest LinkedIn Tumblr

prerana_vishw_konkani

ಮಂಗಳೂರು,ಫೆ.24: ವಿಶ್ವ ಕೊಂಕಣಿ ಕೇಂದ್ರದಿಂದ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘವು ಸ್ಥಳೀಯ ವಿದ್ಯಾರ್ಥಿಗಳ ಹಾಗೂ ಯುವಜನರ ಪ್ರಯೋಜನಕ್ಕಾಗಿ ಪ್ರೇರಣಾ ಎಂಬ ಒಂದು ದಿನದ ಸಮಾವೇಶವನ್ನು ಫೆಬ್ರುವರಿ 27 ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಭವನದಲ್ಲಿ ಆಯೋಜಿಸಿದೆ.

ವಿಶ್ವ ಕೊಂಕಣಿ ಕೇಂದ್ರದ ವಿಶನ್ ಟಿ.ವಿ.ಎಮ್ ಕಾರ್ಯಕ್ರಮದ ಅಂಗವಾಗಿರುವ ಈ ಸಮಾವೇಶವನ್ನು ಮುಖ್ಯ ಅತಿಥಿ ಶ್ರೀ ಸಂದೀಪ್ ಬಾಂಬೊಲ್ಕರ್ ಮತ್ತು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈಯವರ ಉಪಸ್ಥಿತಿಯಲ್ಲಿ ಚಿಂತಕ, ಪದ್ಮಶ್ರೀ ಪುರಸ್ಕೃತ ಶ್ರೀ ಟಿ.ವಿ.ಮೋಹನದಾಸ ಪೈಯವರು ಉದ್ಘಾಟಿಸಲಿರುವರು. ಹಾಗೂ ವಿ.ಎ.ಎ. ಇದರ ಅಧ್ಯಕ್ಷೆ ಕು. ಲೆನಿಟಾ ಜೆನಿಫರ್ ಮೆನೆಜಸ್ ರವರು ಸ್ವಾಗತ ಭಾಷಣ ಮಾಡಲಿರುವರು.

ಒಂದು ವಾರ್ಷಿಕ ಸಮಾವೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ೨೦೧೫ರಲ್ಲಿ ಪ್ರಾರಂಭಿಸಲಾದ ಪ್ರೇರಣಾದ 2016ರ ಆವೃತ್ತಿಯಲ್ಲಿ ವಿವಿಧರಂಗಗಳಲ್ಲಿ ಸಾಧನೆಯನ್ನು ಮಾಡಿರುವ ಆರು ಜನ ಸಾಧಕರು ತಮ್ಮ ಸಾಧನೆಯ ಹಾದಿಯಲ್ಲಿನ ಅನುಭವಗಳನ್ನು ವಿದ್ಯಾರ್ಥಿ ಹಾಗೂ ಯುವಜನರೊಂದಿಗೆ ಹಂಚಿಕೊಳ್ಳಲಿರುವರು.

ಉಜಾಲಾ ಖ್ಯಾತಿಯ ಜ್ಯೋತಿ ಲೆಬೊರೆಟರೀಸ್ ಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕ ಶ್ರೀ ಉಲ್ಲಾಸ್ ಕಾಮತ್, ಶೇರು ಮಾರುಕಟ್ಟೆ ತಜ್ಞ ಶ್ರೀ ಅಂಬರೀಶ್ ಬಾಳಿಗಾ, ಯು.ಎಸ್.ಟಿ ಗ್ಲೋಬಲ್ ಸಂಸ್ಥೆಯ ನಿರ್ದೇಶಕ ಉಮೇಶ ಕಾಮತ್, ಸಿ.ಎನ್.ಬಿ.ಸಿ. ಟಿವಿ೧೮ರ ಶ್ರೀಮತಿ ರೀಮಾ ತೆಂಡುಲ್ಕರ್, ಸೋನಿ ಎಂಟರ್‌ಟೈನಮೆಂಟ್ ಟೆಲಿವಿಶನ್‌ನ ಮುಖ್ಯ ಕ್ರಿಯೇಟಿವ್ ನಿರ್ದೇಶಕ ಶ್ರೀ ಅಜಯ್ ಭಾಲ್ವನ್ಕರ್ ಮತ್ತು ಶ್ರೀ ಟಿ.ವಿ. ಮೋಹನದಾಸ ಪೈಯವರು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಉದ್ದೇಶಿಸಿ ಮಾತನಾಡಲಿರುವರು.

ಪ್ರೇರಣಾದ ಪ್ರಯೋಜನವನ್ನು ಎಲ್ಲಾ ಸ್ಥಳೀಯ ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ವಿದ್ಯಾರ್ಥಿಗಳೂ ಭಾಗವಹಿಸಲು ಅನುವು ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಉಚಿತ ಪ್ರವೇಶ ಪತ್ರಗಳಿಗಾಗಿ ಆಯೋಜಕರನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಹಾಗೂ ವಿಶ್ವ ಕೊಂಕಣಿ ಕೇಂದ್ರವು ಆಯೋಜಿಸುತ್ತಿದೆ.

ತಾವು ಪಡೆದುದನ್ನು ಸಮಾಜಕ್ಕೆ ಮತ್ತೆ ನೀಡುವ ಆಶಯದಿಂದ ಪ್ರೇರೇಪಿತವಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿ.ಕೆ.ಎಸ್.ಎಸ್.ಎಫ಼್. ಅಲ್ಯುಮ್ನಿ ಅಸೋಸಿಯೇಶನ್‌ನ ಸದಸ್ಯರು ಇಂದು ವಿಶ್ವದಾದ್ಯಂತ ಅನೇಕ ಕಾರ್ಪೋರೇಟ್ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಂಕಣಿ ಭಾಷಿಕ ಸಮುದಾಯವು ಈ ಪ್ರಾಂತ್ಯದ ಸರ್ವತೋನ್ಮುಖ ಅಭಿವೃದ್ಧಿಗೆ ಕಳೆದ ಶತಮಾನದಲ್ಲಿ ವಹಿಸಿದ ಪಾತ್ರದ ಪರಂಪರೆಯನ್ನು ಮುಂದುವರೆಸುತ್ತಾ, ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಈ ಪ್ರಾಂತ್ಯದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ನಾವಿನ್ಯಶೀಲತೆಯನ್ನು ಪ್ರೇರೇಪಿಸುವ ಸಲುವಾಗಿ ಒಂದು ವೇದಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರೇರಣಾ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.

ಪ್ರೇರಣಾದಲ್ಲಿ ಮಾತನಾಡಲಿರುವ ಸಾಧಕರ ಕಿರುಪರಿಚಯ:
1. ಶ್ರೀ ಉಲ್ಲಾಸ್ ಕಾಮತ್, ಜಂಟಿ ಆಡಳಿತ ನಿರ್ದೇಶಕರು, ಜ್ಯೋತಿ ಲೆಬೊರೆಟರೀಸ್: ಓರ್ವ ಪರಿಣತ ಕಂಪನಿ ಸೆಕ್ರೆಟರಿ ಮತ್ತು ಲೆಕ್ಕ ಪರಿಶೋಧಕರಾಗಿರುವ ಶ್ರೀ ಉಲ್ಲಾಸ ಕಾಮತ್‌ರವರು ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ನಿಂದ ಕಾನೂನು ಪದವಿಯನ್ನೂ ಗ್ಲೋಬಲ್ ಮೆನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿರುವರು. ವ್ಹಾರ್ಟನ್ ಬಿಸಿನೆಸ್ ಸ್ಕೂಲ್ ಮತ್ತು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ನಲ್ಲಿ ಮೆನೆಜ್‌ಮೆಂಟ್ ನಲ್ಲಿ ಉನ್ನತ ವ್ಯಾಸಂಗವನ್ನು ಗೈದಿರುತ್ತಾರೆ. ಜ್ಯೋತಿ ಲೆಬೊರೆಟರೀಸ್ ಇವರ ನಾಯಕತ್ವದಲ್ಲಿ ವೈವಿಧ್ಯಮಯ ಉತ್ಪನ್ನಗಳ ಎಫ಼್. ಎಂ.ಸಿ.ಜಿ ಕಂಪನಿಯಾಗಿ ಬೆಳೆದು ನಿಂತಿದೆ. ಹೆಂಕೆಲ್ ಇಂಡಿಯಾ ಸಂಸ್ಥೆಯನ್ನು ಜ್ಯೋತಿ ಲೆಬೊರೆಟರೀಸ್ ಬಳಗಕ್ಕೆ ಸೇರಿಸುವಲ್ಲಿ ಇವರ ಪಾತ್ರ ದೊಡ್ಡದು. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ ಅಕೌಂಟಂಟ್ ಪ್ರವರ್ತಿಸುವ ಸಿ.ಎ. ಉದ್ಯಮ ಸಾಧಕ ಪ್ರಶಸ್ತಿಯು ದೊರೆತಿದೆ.

2. ಶ್ರೀ ಅಂಬರೀಶ್ ಬಾಳಿಗಾ, ಶೇರು ಮಾರುಕಟ್ಟೆ ತಜ್ಞ ಹಾಗೂ ಪರಿಣತ: ತಮ್ಮ ೨೫ ವರ್ಷ ವಯಸ್ಸಿನಲ್ಲೇ ಶೇರುಮಾರುಕಟ್ಟೆಯತ್ತ ಆಕರ್ಷಿತರಾದ ಅಂಬರೀಶ ಬಾಳಿಗಾರವರು ೯೦ರ ದಶಕದಲ್ಲಿ ಕೋಟಕ್ ಮಹಿಂದ್ರಾ ಫಿನಾನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತದನಂತರದ ವರ್ಷಗಳಲ್ಲಿ ಕೋಟಕ್, ಕಾರ್ವಿ ಮತ್ತು ವೆ೨ವೆಲ್ತ್ ಮುಂತಾದ ಸಂಸ್ಥೆಗಳಲ್ಲಿ ಪೋರ್ಟ್ ಫೋಲಿಯೋ ಮೆನೆಜ್‌ಮೆಂಟ್ ತಂಡಗಳನ್ನು ಸ್ಥಾಪಿಸುವಲ್ಲಿ ನಿರ್ಣಾಯಕರಾದರು. ಶೇರುಮಾರುಕಟ್ಟೆಯ ವಿಶಿಷ್ಟ ಒಳನೋಟ, ಸಂಪದ್ ನಿರ್ವಹಣೆ, ಕಾರ್ಪೋರೆಟ್ ಅಡ್ವಾಯಿಸರಿ, ರಿಟೇಲ್ ಫಿನಾನ್ಸ್ ಮತ್ತು ಶೇರು ನಿರ್ವಹಣೆಯಲ್ಲಿ ಅಂಬರಿಶ್ ಬಾಳಿಗಾರವರು ಹೆಸರುವಾಸಿ. ಬ್ಯುಸಿನೆಸ್ ಚ್ಯಾನಲ್‌ಗಳಲ್ಲಿ ಸದಾ ಕಂಡುಬರುವ ಇವರು ಒಬ್ಬ ಹಲವು ಕಾರ್ಪೋರೇಟ್ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಸಲಹಾಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

3. ಶ್ರೀ ಉಮೇಶ ಕಾಮತ್, ಮಾನವ ಸಂಪನ್ಮೂಲ ನಿರ್ದೇಶಕರು, ಯು.ಎಸ್.ಟಿ. ಗ್ಲೋಬಲ್: ೯೦ರ ದಶಕದಲ್ಲಿ ಸಾರ್ವಜನಿಕ ಕ್ಷೇತ್ರದ ಬೃಹತ್ ಸಂಸ್ಥೆಯಾದ ಸ್ಟೀಲ್ ಅಥಾರಿಟೀಸ್ ಇಂಡಿಯಾ ಲಿಮಿಟೆಡ್‌ನ ಕಂಪ್ಯೂಟರಿಕರಣದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಉಮೇಶ ಕಾಮತ್ ಇವರು ಭಿಲಾಯ್ ಸ್ಟೀಲ್ ವರ್ಕ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸಸ್‌ನಲ್ಲಿ ನಿಯುಕ್ತಿಯಾದರು. ಮತ್ತೆ ಕಾರ್ಪೋರೇಟ್ ಜಗತ್ತಿಗೆ ಮರಳಿ ೧೯೯೫ರಲ್ಲಿ ಆಲ್ ಇಂಡಿಯಾ ಮೆನೆಜ್‌ಮೆಂಟ್ ಅಸೋಸಿಯೇಶನ್ ಕೊಡಮಾಡುವ ಅತ್ಯುತ್ತಮ ಯುವ ಪ್ರಬಂಧಕ ಪ್ರಶಸ್ತಿಯನ್ನು ಗಳಿಸಿದರು. ಆ ಬಳಿಕ ಲಂಡನ್‌ನಲ್ಲಿ ಎಂಬಿ‌ಎ ಪದವಿಯನ್ನು ಪಡೆದು ಮಾನವಸಂಪನ್ಮೂಲ ಕ್ಷೇತ್ರದಲ್ಲಿ ರಿಲಾಯನ್ಸ್, ಕ್ಯಾಬೋಟ್ ಕೊರ್ಪ್, ಅಲಾಯನ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದರು. ಪ್ರಸಕ್ತ ೧೫೦೦೦ ಉದ್ಯೋಗಿಗಳನ್ನು ಹೊಂದಿರುವ ಬಿಲಿಯನ್ ಡಾಲರ್ ಸಾಫ್ಟವೇರ್ ಸಂಸ್ಥೆಯಾಗಿರುವ ಯು.ಎಸ್.ಟಿ.ಗ್ಲೋಬಲ್ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

4. ರೀಮಾ ತೆಂಡುಲ್ಕರ್, ಸಂಶೊಧನಾ ತಜ್ಞೆ, ಸಿ‌ಎನ್‌ಬಿಸಿ ಟಿವಿ ೧೮: ಆರ್ಥಿಕರಂಗದ ಪ್ರಮುಖ ಚ್ಯಾನೆಲ್ ಆಗಿರುವ ಸಿ‌ಎನ್‌ಬಿಸಿ ಟಿವಿ೧೮ರ ಶೇರುಮಾರುಕಟ್ಟೆ ಕೇಂದ್ರಿತ “ಮಾರ್ಕೆಟ್ ಅಂಡ್ ಮಾಕ್ರೊಸ್” ಮುಂತಾದ ಕಾರ್ಯಕ್ರಮಗಳನ್ನು ಸಂಯೋಜಿಸುವ ರೀಮಾ ತೆಂಡುಲ್ಕರ್ ಐಟಿ ಮತ್ತು ಟೆಲಿಕಾಮ್ ವಿಭಾಗಗಳ ಓರ್ವ ಪರಿಣತ ಸಂಶೊಧನಾ ತಜ್ಞೆಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ರೀಮಾ ಗ್ಲೋಬಲ್ ಅಸೋಸಿಯೇಶನ್ ಆಫ಼್ ರಿಸ್ಕ್ ಪ್ರೊಫೆಶನಲ್ಸ್ (ಜಿ‌ಎ‌ಆರ್‌ಪಿ) ನ ಫಿನಾನ್ಸಿಯಲ್ ರಿಸ್ಕ್ ಮ್ಯಾನೆಜ್‌ಮೆಂಟ್, ಚಾರ್ಟರ್ಡ್ ಫಿನಾನ್ಸಿಯಲ್ ಅನಾಲಿಸ್ಟ್ (ಸಿ‌ಎಫ಼್‌ಎ) ವ್ಯಾಸಾಂಗವನ್ನು ಮಾಡಿದ್ದಾರೆ. ಸಿ‌ಎನ್‌ಬಿಸಿ ಟಿವಿ೧೮ ಪೂರ್ವದಲ್ಲಿ ಈಡಲ್‌ವೈಸ್ ಕ್ಯಾಪಿಟಲ್ ಸಂಸ್ಥೆಯ ಅಸೆಟ್ ಮ್ಯಾನೆಜ್‌ಮೆಂಟ್ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ.

5. ಶ್ರೀ ಅಜಯ್ ಭಾಲ್ವನ್‌ಕರ್, ಚೀಫ್ ಕ್ರಿಯೇಟಿವ್ ಡಿರೆಕ್ಟರ್, ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಶನ್: ಪತ್ರಿಕೋದ್ಯಮದಲ್ಲಿ ಪೂರ್ವ ಪರಿಣತಿಯ ಬಳಿಕ 1994 ರಲ್ಲಿ ಝೀ ಸಂಸ್ಥೆಯ ಡ್ರೀಮ್ ಮರ್ಚೆಂಟ್ಸ್ ನ ಸಹಾಯಕ ನಿರ್ದೇಶಕರಾಗಿ ಸೇರಿದ ಅಜಯ್ ಭಾಲ್ವನ್‌ಕರ್ ರವರು ಬಳಿಕ ಝೀ ಟಿವಿಯ ಪ್ರೊಗ್ರಾಮಿಂಗ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಪ್ರಸಕ್ತ ಝಿಂಗ್ ಎಂದು ಕರೆಯುಲ್ಪಡುತ್ತಿರುವ ಮ್ಯುಸಿಕ್ ಎಶಿಯಾ ಚ್ಯಾನಲ್‌ನ್ನು ಸ್ಥಾಪಿಸುವಲ್ಲಿ ಅಜಯ್ ಪ್ರಮುಖ ಪಾತ್ರ ವಹಿಸಿದ್ದಾರೆ. ಬಳಿಕ 2009ರಲ್ಲಿ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಶನ್ ಸೇರಿ ಉತ್ಕೃಷ್ಟ ಮಟ್ಟದ ಕಾರ್ಯಕ್ರಮಗಳನ್ನು ಸೃಜಿಸುತ್ತಿದ್ದಾರೆ.

6. ಶ್ರೀ ಟಿ.ವಿ.ಮೋಹನದಾಸ ಪೈ: ಅಕ್ಷಯಪಾತ್ರೆ, ಬಿಪ್ಯಾಕ್ ಮುಂತಾದ ಯೋಜನೆಗಳ ಮೂಲಕ ಶಿಕ್ಷಣ, ಸಾರ್ವಜನಿಕ ಸವಲತ್ತುಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಶ್ರೀ ಟಿ.ವಿ. ಮೋಹನದಾಸ್ ಪೈ ರವರು ಭಾರತದಲ್ಲಿ ಉದ್ಯಮಶೀಲತೆಯ ಉತ್ತೇಜನೆಯನ್ನು ಪ್ರತಿಪಾದಿಸುತ್ತಾರೆ. ಭಾರತವನ್ನು ಸ್ಟಾರ್ಟಪ್ ಕ್ಯಾಪಿಟಲ್ ಆಗಿ ರೂಪಿಸುವಲ್ಲಿ ಯುವಜನತೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಧೃಡವಾಗಿ ನಂಬುವ ಮೋಹನದಾಸ ಪೈ ಇದರಿಂದ ದೇಶದ ಅಭಿವೃದ್ಧಿಯ ಗತಿಯು ಹೆಚ್ಚಲಿದೆ ಎಂದು ಹೇಳುತ್ತಾರೆ.

Write A Comment