ಮಂಗಳೂರು,ಫೆ,16: ಮಂಗಳೂರು ಕಾಲೇಜು ವಿದ್ಯಾರ್ಥಿ ತನ್ನ ಊರು ಮಂಜೇಶ್ವರದ ಕಳಪೆ ರಸ್ತೆ ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ರಸ್ತೆ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಥಮ ಪದವಿ ತರಗತಿಯಲ್ಲಿ ಓದುತ್ತಿರುವ ಮಂಜೇಶ್ವರದ ಕೋಡಿಬೈಲ್ ನಿವಾಸಿ ಅಶ್ವಲ್ ಶೆಟ್ಟಿ ಡಾಂಬರೀಕರಣವಾಗದ ತನ್ನೂರಿನ ರಸ್ತೆಯಲ್ಲಿ ಸಂಭವಿಸುತ್ತಿರುವ ಅವಘಡದ ಬಗ್ಗೆ ಪತ್ರದಲ್ಲಿ ವಿವರಿಸಿದ್ದನು. ಈತನ ಉತ್ತಮ ಕಾರ್ಯವನ್ನು ಊರಿನ ಜನ ಶ್ಲಾಘಿಸಿದ್ದಾರೆ
ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸುತ್ತಾರೆ ಎಂಬ ಮಾಹಿತಿ ಪಡೆದ ಅಶ್ವಲ್ ಶೆಟ್ಟಿ ಜಾಲತಾಣದ ಮೂಲಕ ಪ್ರಧಾನಿ ಕಚೇರಿಯ ವಿಳಾಸ ಪಡೆದುಕೊಂಡು ತನ್ನ ಊರಿನ ಎಲ್ಲಾ ಸಮಸ್ಯೆಯನ್ನು ಸವಿವರವಾಗಿ ಪತ್ರದಲ್ಲಿ ಬರೆದು ಅಂಚೆ ಮೂಲಕ ಕಳುಹಿಸಿದ್ದನು. ಪ್ರಧಾನಿಗೆ ಬರೆದ ಪತ್ರದಲ್ಲಿ ಏನಿದೆ? ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕೋಡಿಬೈಲ್ ಹಳ್ಳಿಯ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆಯುವುದಕ್ಕೆ ಜನ ಬಹಳ ಕಷ್ಟಪಡಬೇಕು. ರಸ್ತೆ ರಿಪೇರಿ ಮಾಡುವಂತೆ ಸ್ಥಳೀಯ ಜನ ಪ್ರತಿ ನಿಧಿ ಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಪ್ರತಿಯೊಬ್ಬ ಅಧಿಕಾರಿಗಳು ಇವರ ಮನವಿಯನ್ನು ನಿರ್ಲಕ್ಷ್ಯಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಶ್ವಲ್ ಪ್ರಧಾನಿಗೆ ಪತ್ರ ಬರೆದಿದ್ದನು.
ಮಂಗಳೂರು ವಿದ್ಯಾರ್ಥಿ ಬರೆದ ಪತ್ರಕ್ಕೆ ಸ್ಪಂದನೆ ಏನು? ಪತ್ರ ತಲುಪಿದ ತಕ್ಷಣ ಪ್ರಧಾನಿ ಕಚೇರಿಯಿಂದ ಕೇರಳ ಸರ್ಕಾರಕ್ಕೆ ಆದೇಶ ಬಂದೇ ಬಿಟ್ಟಿತು. ತಕ್ಷಣ ಎಚ್ಚೆತ್ತ ಕೇರಳ ವಿಧಾನಸಭಾ ಕಾರ್ಯಾಲಯ ರಸ್ತೆ ಡಾಂಬರೀಕರಣದ ಕಾಮಗಾರಿ ಕೈಗೊಳ್ಳುವಂತೆ ಮಂಗಲ್ಪಾಡಿ ಪಂಚಾಯತ್ ಗೆ ಸೂಚಿಸಿದೆ. ಇದೀಗ ಕಾಮಗಾರಿಗೆ ಚಾಲನೆ ದೊರೆತಿದೆ.
ಸಂತಸಗೊಂಡ ಅಶ್ವಲ್ ಶೆಟ್ಟಿಯ ಪ್ರತಿಕ್ರಿಯೆ: ಅಶ್ವಲ್ ಕುಟುಂಬಕ್ಕೆ ಯಾವುದೇ ರಾಜಕೀಯ ಪಕ್ಷಗಳ ನಂಟಿಲ್ಲ. ಅವರ ತಂದೆ ಬಾಬು ಶೆಟ್ಟಿ ಹಣ್ಣಿನ ವ್ಯಾಪಾರಿ. ತಾಯಿ ಉದಯಶ್ರೀ ಗೃಹಿಣಿ. ಇದೀಗ ಪ್ರಧಾನಿ ಸ್ಪಂದನೆಯಿಂದ ಇಡೀ ಮಂಜೇಶ್ವರ ಗ್ರಾಮವೇ ಖುಷಿಪಟ್ಟಿದೆ. ನಾನು ಬರೆದ ಪತ್ರಕ್ಕೆ ಇಡೀ ನಮ್ಮ ಊರು ಸಂತಸದಿಂದ ನಲಿಯುತ್ತಿದ್ದೆ ಎಂದು ಅಶ್ವಲ್ ಶೆಟ್ಟಿ ಹೇಳಿದ್ದಾರೆ.