ಬೆಳ್ತಂಗಡಿ,ಫೆ.15 : ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಸಮೀಪ ಕೆದ್ದು ಎಂಬಲ್ಲಿ ನಡೆದಿದೆ.ಸಂಭವಿಸಿದೆ. ಮೃತ ಪಟ್ಟ ಯುವಕನನ್ನು ಬೆಳ್ತಂಗಡಿ ಸರಕಾರಿ ಪದವಿ ಕಾಲೇಜಿನ ವಿಧ್ಯಾರ್ಥಿ ಹಿತೇಶ್ (21) ಎಂದು ಗುರುತಿಸಲಾಗಿದೆ.
ಘಟನೆಯ ವಿವರ :
ಹಿತೇಶ್ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕೆದ್ದು ಸಮೀಪ ಕಾರೊಂದು ಎದುರಿನಿಂದ ಬಂದು ಬೈಕಿಗೆ ಢಿಕ್ಕಿಹೊಡೆದಿದೆ. ಹೊಡೆತದ ತೀವ್ರತೆಗೆ ಹಿತೇಶ್ ಹಾಗೂ ಸಹ ಸವಾರ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಆವೇಳೆಗೆ ಆತ ಮೃತಪಟ್ಟಿದ್ದ.
ಮೃತ ಹಿತೇಶ್ ಬೆಳ್ತಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾನೆ. ಅಳದಂಗಡಿ ಸಮೀಪ ಉಂಗಿಲಬೈಲು ನಿವಾಸಿ ರಾಕೇಶ್ ಶೆಟ್ಟಿ ಎಂಬವರ ಪುತ್ರ. ಅಳದಂಗಡಿಯಿಂದ ಗೆಳೆಯನೊಂದಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಹೊಡೆತದ ತೀವ್ರತೆಗೆ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಾಗರಿಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಎದುರು ಸೇರಿದ್ದರು. ಸಹಪಾಠಿಗಳ ರೋಧನ ಮುಗಿಲು ಮುಟ್ಟುವಂತಿತ್ತು.
ಈತನ ತಂಗಿಯು ಅಪಘಾತದಲ್ಲಿ ಮೃತಪಟ್ಟಿದ್ದಳು:
ರಾಕೇಶ್ ಶೆಟ್ಟಿ ಅವರಿಗೆ ಇಬ್ಬರು ಮಕ್ಕಳು ಕಿರಿಯ ಮಗಳು ಕೆಲ ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ವಾಹನ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದಳು. ಇದೀಗ ಹಿರಿಯ ಮಗನೂ ಅಪಘಾತಕ್ಕೆ ಬಲುಯಾಗಿದ್ದು ಇಡೀ ಕುಟುಂಬವೇ ಸುದ್ದಿ ಕೇಳಿ ಕುಸಿದು ಹೋಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.