ಕುಂದಾಪುರ:ರಬ್ಬರ್ ಕೃಷಿಗಾಗಿ ಸ್ಥಳೀಯ ಸಹಕಾರಿ ಬ್ಯಾಂಕಿನಲ್ಲಿ ಮಾಡಲಾದ ಸಾಲವನ್ನು ತೀರಿಸಲಾಗದೆ, ಕೀಟನಾಶಕವನ್ನು ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕುಂದಾಪುರ ತಾಲೂಕಿನ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಗ್ರಾಮದ ಬೀಸಿನಪಾರೆಯ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಾಲಬಾಧೆಯಿಂದಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ರೈತನನ್ನು ಸಿ.ಸಿ ಜೋಸೆಫ್ (62) ಎಂದು ಗುರುತಿಸಲಾಗಿದೆ.
ಸಾಲಕ್ಕೆ ಸೋತರು ಜೋಸೆಫ್:
ಸುಮಾರು 1.30 ಎಕ್ರೆ ಕೃಷಿ ಭೂಮಿಯನ್ನು ಹೊಂದಿದ್ದ ಅವರು ಅದರಲ್ಲಿ ರಬ್ಬರ್ ಬೆಳೆಯನ್ನು ಬೆಳೆಸಿದ್ದರು. ಇದಕ್ಕಾಗಿ ಸ್ಥಳೀಯ ಸಹಕಾರಿ ಬ್ಯಾಂಕಿನಿಂದ 1 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಅಸಲು ಹಾಗೂ ಬಡ್ಡಿಯನ್ನು ಕಟ್ಟುತ್ತಾ ಬಂದಿದ್ದ ಅವರ ಸಾಲದ ಖಾತೆಯಲ್ಲಿ ಇನ್ನೂ 78000 ಸಾಲ ಮರುಪಾವತಿಗಾಗಿ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
ಪುತ್ರಿಯ ಮದುವೆಗಾಗಿಯೂ ಸಾಲ ಮಾಡಿಕೊಂಡಿದ್ದರಲ್ಲದೇ ನೂತನ ಮನೆ ಕಟ್ಟಲು ಮುಂದಾಗಿದ್ದರೂ, ಆರ್ಥಿಕ ಅಡಚಣೆಯಿಂದಾಗಿ ಮನೆ ಕಟ್ಟುವ ಕಾರ್ಯವೂ ಅರ್ಧಕ್ಕೆ ನಿಂತಿದೆ. ಈ ನಡುವೆ ರಬ್ಬರ್ ಧಾರಣೆ ಕುಸಿದಿರುವುದರಿಂದಾಗಿ ಕಂಗಾಲಾಗಿದ್ದ ಅವರು ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದರು ಎಂದು ಕುಟುಂಬದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ರಾತ್ರಿ 8.30 ರ ವೇಳೆಯಲ್ಲಿ ಅವರು ವಿಷ ಪದಾರ್ಥ ಸೇವನೆ ಮಾಡಿರುವುದು ತಿಳಿಯುತ್ತಿದ್ದಂತೆ ಅವರನ್ನು ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆಂದು ತಿಳಿದುಬಂದಿದೆ.
ಸಚಿವ ಸೊರಕೆ, ಮೊಯ್ಲಿ ಭೇಟಿ: ರೈತನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯಕ್ರಮದ ಸಲುವಾಗಿ ಕುಂದಾಪುರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಚಿವ ವಿನಯಕುಮಾರ ಸೊರಕೆ, ವಿಧಾನಪರಿಷತ್ ಸದಸ್ಯರುಗಳಾದ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಜಯಮಾಲ, ಮಾಜಿ ಶಾಸಕ ಯು.ಆರ್ ಸಭಾಪತಿ ಅವರು ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭ ಕಂದಾಯ ಉಪವಿಭಾಗಾಧಿಕಾರಿ ಎಸ್.ಅಶ್ವಥಿ, ತಹಸೀಲ್ದಾರ್ ಗಾಯತ್ರಿ ನಾಯಕ್ ಹಾಗೂ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಇದ್ದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ರಬ್ಬರ್ ಮಾರುಕಟ್ಟೆ ಕುಸಿದಿರುವುದರಿಂದಾಗಿ ರಾಜ್ಯದಲ್ಲಿ ರಬ್ಬರ್ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದೇಶದಿಂದ ಅಮದಾಗುತ್ತಿರುವ ರಬ್ಬರ್‌ಗಳಿಗೆ ಕಡಿವಾಣ ಬೀಳ ಬೇಕಾದರೆ ಅಮದು ಸುಂಕವನ್ನು ಹೆಚ್ಚಿಸಬೇಕು. ಅಮದು ಸುಂಕವನ್ನು ಹೆಚ್ಚಿಸಬೇಕಾದ ಕೆಲಸವನ್ನು ಮಾಡಬೇಕಾದ ಹೊಣೆ ಕೇಂದ್ರ ಸರ್ಕಾರದ್ದು. ಹಿಂದೆ ಯುಪಿಐ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ಅಡಿಗೆ ಹಾಗೂ ರಬ್ಬರ್ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾಗ ಅಮದು ಸುಂಕವನ್ನು ಹೆಚ್ಚಳ ಮಾಡಿ ಕೃಷಿಕರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ನಡೆಸಿತ್ತು ಎಂದು ಹೇಳಿದ ಅವರು ಮಾರುಕಟ್ಟೆಯ ಕುಸಿತದಿಂದ ಕಂಗೆಟ್ಟಿರುವ ರಬ್ಬರ ಕೃಷಿಕರಿಗೆ ಕೇಂದ್ರ ಸರ್ಕಾರ ಕೂಡಲೇ ಮಧ್ಯಂತರ ಪರಿಹಾರ ನೀಡಬೇಕು, ಅಮದು ಸುಂಕವನ್ನು ಹೆಚ್ಚಿಸಬೇಕು ಹಾಗೂ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆಯವರು ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಸಹಾಯವನ್ನು ನೀಡಲಾಗುವುದು. ರಬ್ಬರ್ ಬೆಲೆ ಕುಸಿತದಿಂದ ದೇಶದಲ್ಲಿನ ಕೃಷಿಕರಿಗೆ ಮಾತ್ರ ತೊಂದರೆಗಳು ಕಾಣಿಸುತ್ತಿದೆ. ರಬ್ಬರ್ ಬೆಲೆ ಕುಸಿದಿದ್ದರೂ, ಟಯರ್ ಹಾಗೂ ಇತರ ರಬ್ಬರ್ ಉತ್ಪನ್ನಗಳ ಮಾರುಕಟ್ಟೆ ಬೆಲೆ ಕಡಿಮೆಯಾಗಿಲ್ಲ ಎಂದು ಬೊಟ್ಟು ಮಾಡಿದ ಅವರು ಕೇಂದ್ರ ಸರ್ಕಾರ ಕೂಡಲೇ ರಬ್ಬರ್ ಬೆಳೆಗಾರರ ನೆರವಿಗೆ ಮುಂದಾಗಬೇಕು ಎಂದರು.