
ಮಂಗಳೂರು : ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯರು ಕೇರಳದಲ್ಲಿ ಪತ್ತೆಯಾಗಿದ್ದಾರೆ. ಈ ಇಬ್ಬರು ಅಪ್ರಾಪ್ತ ಯುವತಿಯರನ್ನು ಕೇರಳದ ಶರನೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ಚಿಲಿಂಬಿ ನಿವಾಸಿ ಜಾನ್ ಡೇಸಾ ಎಂಬವರ ಪುತ್ರಿ ಜಾಕ್ಲಿನ್ (17) ಸುರತ್ಕಲ್ ಸಮೀಪದ ನಿವಾಸಿ ಲಕ್ಮೀಧರ ಎಂಬವರ ಪುತ್ರಿ ಸ್ಮತಿ (17) ಎಂಬವರು ನಾಲ್ಕು ದಿನಗಳ ಹಿಂದೆ ಗೂಢ ರೀತಿಯಲ್ಲಿ ಕಾಣೆಯಾಗಿದ್ದರು. ಇಬ್ಬರೂ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಾಣೀಜ್ಯ ವಿಭಾಗದ ವಿದ್ಯಾರ್ಥಿನಿಯರಾಗಿದ್ದು, ಒಂದೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಬಂದಿದ್ದ ಈ ವಿದ್ಯಾರ್ಥಿನಿಯರು ಸಂಜೆಯಾದರೂ ತಮ್ಮ ಮನೆಗಳಿಗೆ ವಾಪಾಸಾಗದೇ ನಾಪತ್ತೆಯಾಗಿದ್ದಾರೆ.ಇವರನ್ನು ಯೊರೋ ಅಪಹರಿಸಿರಬೇಕು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿತ್ತು.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾದ ವಿದ್ಯಾರ್ಥಿನಿಯರ ಪತ್ತೆಗಾಗಿ ಬಂದರು ಠಾಣಾ ವೃತ್ತ ನಿರೀಕ್ಷಕ ಶಾಂತಾರಾಮ್ ಮತ್ತು ಅವರ ತಂಡ ಶೋಧ ನಡೆಸಿತ್ತು.
ಕೇರಳಕ್ಕೆ ರೈಲಿನಲ್ಲಿ ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿಯೊಂದು ಸಿಕ್ಕಿದ್ದು, ತಕ್ಷಣ ಈ ಜಾಡನ್ನು ಹಿಡಿದು ಕಾರ್ಯ ಪ್ರವೃತ್ತರಾದ ಪೊಲೀಸ್ ತಂಡ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿ ಕಾರ್ಯಾಚರಣೆ ನಡೆಸಿದಾಗ ಕೇರಳದ ಶರನೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯುವತಿಯರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇದೀಗ ಕಾಣೆಯಾಗಿದ್ದ ಯುವತಿಯರು ರೈಲ್ವೆ ಪೊಲೀಸರ ವಶದಲ್ಲಿದ್ದಾರೆ. ಯುವತಿಯರನ್ನು ಕರೆತರಲು ಬಂದರು ಪೊಲೀಸರು ಕೇರಳಕ್ಕೆ ತೆರಳಿದ್ದಾರೆ. ಇವರನ್ನು ಮಂಗಳೂರಿಗೆ ಕರೆತಂದ ಬಳಿಕವಷ್ಟೇ ವಿಚಾರಣೆಯಿಂದ ಈ ಇಬ್ಬರು ಯುವತಿಯರ ನಾಪತ್ತೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಬೇಕಿದೆ.