ಕುಂದಾಪುರ: ಬಟ್ಟೆ ಅಂಗಡಿಯ ಮಾಲಕರೋರ್ವರು ತನ್ನದೇ ಅಂಗಡಿಗೆ ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಲ್ಲೂರು ಗರಡಿ ಸಮೀಪದ ನಿವಾಸಿ ಕೋಟಿ ಪೂಜಾರಿ(74) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

ಘಟನೆ ವಿವರ: ತಲ್ಲೂರು ಬಸ್ಸು ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಳೆದ 25 ವರ್ಷಗಳಿಂದ ‘ಶ್ರೀ ಗಣೇಶ್ ಡ್ರೆಸ್ ಸೆಂಟರ್’ಎನ್ನುವ ಬಟ್ಟೆ ಮಳಿಗೆಯನ್ನು ಕೋಟಿ ಪೂಜಾರಿ ನಡೆಸುತ್ತಿದ್ದರು. ನಿತ್ಯ ಬೆಳಿಗ್ಗೆ ವಾಕಿಂಗ್ ಹೋಗುವ ಪರಿಪಾಠವನ್ನು ಹೊಂದಿದ್ದ ಕೋಟಿ ಪೂಜಾರಿ ಶುಕ್ರವಾರ ಮುಂಜಾನೆಯೂ ತನ್ನ ಮನೆಯಿಂದ ತಲ್ಲೂರು ಪೇಟೆಯತ್ತ ಬಂದಿದ್ದಾರೆ, ಬಳಿಕ ತನ್ನ ಅಂಗಡಿಯ ಶಟರ್ ಎತ್ತಿ ಒಳಗಡೆ ತೆರಳಿ ಬಳಿಕ ಶಟರ್ ಮುಚ್ಚಿ ಪೆಟ್ರೋಲ್ ಸುರಿದು ಬೆಂಕಿ ಹಾಕಿಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಕಿ ಪರಿಣಾಮ ಅಂಗಡಿಯೊಳಗಿದ್ದ ಬಟ್ಟೆಗಳು, ಪೀಠೋಪಕರಣಗಳು ಸುಟ್ಟು ಕರಕಲಾಗಿದೆ. ಬೆಳಿಗ್ಗೆ 6.15ರ ವೇಳೆ ವ್ಯಕ್ತಿಯೋರ್ವರು ಸಮೀಪದ ಹೋಟೆಲಿಗೆ ಚಾ ಕುಡಿಯಲೆಂದು ಬಂದಾಗ ಬಟ್ಟೆ ಅಂಗಡಿಯೊಳಗಿನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಪರಿಶೀಲನೆ ನಡೇಸುವಾಗ ಕೋಟಿ ಪೂಜಾರಿ ಅವರು ಬಟ್ಟೆ ಮಳಿಗೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಅಂಗಡಿಯೊಳಕ್ಕೆ ಪೆಟ್ರೋಲ್ ಬಾಟಲಿ ಹಾಗೂ ಬೆಂಕಿಪೊಟ್ಟಣಗಳು ಬಿದ್ದಿರುವುದು ಇದೊಂದು ಆತ್ಮಹತ್ಯೆಯೆಂದು ಮೇಲ್ನೋಟಕ್ಕೆ ಸಾಕ್ಷೀಕರಿಸಿದೆ.
ಕೋಟಿ ಪೂಜಾರಿ ಅವರು ಮೊದಲು ಮುಂಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು 25 ವರ್ಷಗಳಿಂದ ತಲ್ಲೂರಿನಲ್ಲಿ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ. ಕೋಟಿ ಅವರು ಹೆಮ್ಮಾಡಿ ಪಂಚಗಂಗಾ ಸೊಸೈಟಿಯ ಮಾಜಿ ನಿರ್ದೇಶಕರೂ ಆಗಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.