ಕನ್ನಡ ವಾರ್ತೆಗಳು

ಸ್ಕ್ಯಾನಿಂಗ್ ಕೇಂದ್ರಗಳ ಪರಿಶೀಲನೆಗೆ ಅಧಿಕಾರಿಗಳ 16 ತಂಡ ರಚನೆ.

Pinterest LinkedIn Tumblr

mri_scanning1

ಮ೦ಗಳೂರು ಫೆ.04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ (ಪಿಸಿ & ಪಿ‌ಎನ್‌ಡಿಟಿ) ಅನುಷ್ಠಾನದ ಮೇಲೆ ನಿಗಾ ವಹಿಸಲು ಮತ್ತು ಈ ಬಗ್ಗೆ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳ ಸಮಗ್ರ ಪರಿಶೀಲನೆಗಾಗಿ ಅಧಿಕಾರಿಗಳ 16 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಅವರು ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳ ತಂಡ ತಿಂಗಳಲ್ಲಿ ೨ ಬಾರಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆಯೇ? ದಾಖಲೆಗಳ ಸಮಗ್ರ ನಿರ್ವಹಣೆ ಮಾಡುಲಾಗುತ್ತದೆಯೇ? ಗರ್ಭಪಾತ ಆಗುವ ಪೂರ್ವದಲ್ಲಿ ಸ್ಕ್ಯಾನಿಂಗ್ ಮಾಡಿಸಿರುವ ಬಗ್ಗೆ ಸಮಗ್ರವಾದ ಪರಿಶೀಲನೆ ನಡೆಸಿ ಗರ್ಭಪಾತ ಮಾಡಿಸಿರುವ ಸಂಸ್ಥೆಗಳ ಕುರಿತು ವಿಶೇಷವಾಗಿ ಪರಿಶೀಲನೆ ನಡೆಸುವುದು, ಅತೀ ಹೆಚ್ಚು ಗರ್ಭಪಾತ ನಡೆಯುತ್ತಿರುವ ತಾಲೂಕಿನಲ್ಲಿ ಸಮಗ್ರ ಪರಿಶೀಲನೆ ನಡೆಸುವುದು, ಅನುಮತಿ ಪಡೆಯದೇ ನಡೆಯುತ್ತಿರುವ ಸ್ಕ್ಯಾನಿಂಗ್ ಕೇಂದ್ರಗಳ ಹಾಗೂ ಅನಧಿಕೃತವಾಗಿ ಪೋರ್ಟೆಬಲ್ ಸ್ಕ್ಯಾನಿಂಗ್ ಉಪಕರಣಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ವರದಿ ನೀಡಲು ಈ ತಂಡಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ 16 ತಂಡಗಳಲ್ಲಿ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಮಕ್ಕಳ ತಜ್ಞರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ವಾರ್ತಾಧಿಕಾರಿ, ತಹಶೀಲ್ದಾರ್ ಹಾಗೂ ಸಮಾಜ ಸೇವಾ ಕಾರ್ಯಕರ್ತರು ಇದ್ದಾರೆ. ಸರಕಾರದ ಮಾರ್ಗಸೂಚಿಯಂತೆ ಕಾಯಿದೆಯ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸಿ ವರದಿ ನೀಡಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಈ ತಂಡ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

Write A Comment