ಕನ್ನಡ ವಾರ್ತೆಗಳು

ಜಿಲ್ಲಾ ಕಾರಾಗೃಹದ ಭದ್ರತಾ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಸೂಚನೆ

Pinterest LinkedIn Tumblr

Dgp_visit_subjail_1

ಮಂಗಳೂರು, ಫೆ.3 : ನಗರದ ಜಿಲ್ಲಾ ಕಾರಾಗೃಹದ ಭದ್ರತಾ ಕ್ರಮಗಳಲ್ಲಿ ಲೋಪಗಳು ಕಂಡು ಬಂದಿರುವುದರಿಂದ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಹಾಗೂ ನಿಗದಿ ಲೆಕ್ಕಕ್ಕಿಂತ ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳು ಈ ಜೈಲ್ಲಿನಲ್ಲಿರುವುದರಿಂದ ಜೈಲು ಸ್ಥಳಾಂತರವಾಗಬೇಕಿದೆ ಎಂದು ಭದ್ರತಾ ರಾಜ್ಯ ಬಂದಿಖಾನೆ ಇಲಾಖೆಯ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ತಿಳಿಸಿದ್ದಾರೆ .

ಅವರು ನಗರದ ಜಿಲ್ಲಾ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಂಧರ್ಭ ಸುದ್ದಿಗಾರರ ಜೊತೆ ಮಾತನಾಡಿದರು.

ಮುಡಿಪು ಸಮೀಪ 63.89 ಎಕರೆ ಜಾಗವನ್ನು ಬಂದಿಖಾನೆ ಇಲಾಖೆ ಕಾರಾಗೃಹ ನಿರ್ಮಾಣಕ್ಕೆ ಗುರುತಿಸಿದೆ. ಆ ಜಾಗವನ್ನು ವೀಕ್ಷಿಸಿ ಸ್ಥಳಾಂತರವಾಗಬೇಕಾದರೆ ಅಗತ್ಯ ಕಾನೂನು, ನಿಯಮಗಳ ಬಗ್ಗೆ ಪರಿಶೀಲನೆಗಾಗಿ ತಾನು ಭೇಟಿ ನೀಡಿರುವುದಾಗಿ ಅವರು ಹೇಳಿದರು.

Dgp_visit_subjail_2 Dgp_visit_subjail_3 Dgp_visit_subjail_4 Dgp_visit_subjail_5

ಸ್ಥಳಾಂತರದವರೆಗೆ ಈಗಿನ ವ್ಯವಸ್ಥೆಯಲ್ಲೇ ಮುಂದುವರಿಯಬೇಕಿದೆ. ಹಾಗಿದ್ದರೂ, ಭದ್ರತೆ ಬಗ್ಗೆ ಕಟ್ಟುನಿಟಿನ ಕ್ರಮ ವಹಿಸಲು ಸೂಚಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಜೈಲ್ ಒಳಗಡೆ ಮೊಬೈಲ್ ಜಾಮರ್ ಅಳವಡಿಸಲಾಗುವುದು. ಸದ್ಯ ಬೆಳಗಾವಿಯಲ್ಲಿ ಜಾಮರ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಅಲ್ಲಿನ ಕೆಲಸ ಮುಗಿದ ಬಳಿಕ ಇಲ್ಲಿ ಜಾಮರ್ ಅಳವಡಿಕೆ ಕಾರ್ಯ ನಡೆಯಲಿದೆ. ಜೈಲ್ ಒಳಗಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನಷ್ಟು ಕ್ಯಾಮರಾ ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಸೂಕ್ತ ಭದ್ರತೆ ಇದ್ದರೂ ಒಳಗಡೆ ಕೆಲವು ನಿಷೇಧಿತ ವಸ್ತುಗಳು ಹೇಗೆ ಹೋಗುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ಜೈಲ್‌ನ ಭದ್ರತೆ ಬಗ್ಗೆ ಸಾಕಷ್ಟು ಲೋಪಗಳು ಕಂಡು ಬಂದಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ವರದಿಗಳು ಬಂದಿವೆ. ಇವುಗಳಲ್ಲಿ ಒಂದಷ್ಟು ವಿಚಾರಗಳು ಸತ್ಯ ಇವೆ. ಇವೆಲ್ಲವನ್ನು ಗಮನಿಸಲು ಇಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೈಲ್ ಒಳಗಡೆ ಭೇಟಿ ನೀಡುವ ಪೊಲೀಸ್ ಅಧಿಕಾರಿ, ಜೈಲ್ ಸಿಬ್ಬಂದಿ, ವಕೀಲರು, ಸಂದರ್ಶನಕಾರರು ಸೇರಿದಂತೆ ಪ್ರತಿಯೊಬ್ಬರನ್ನೂ ಸೂಕ್ತ ತಪಾಸಣೆ ನಡೆಸಿಯೇ ಒಳಗಡೆ ಬಿಡಬೇಕೆಂದು ಸೂಚಿಸಿದ್ದೇನೆ. ಇದರಲ್ಲಿ ಲೋಪ ಆದರೆ ಇಲ್ಲಿನ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಜೈಲ್ ಒಳಗಡೆ ಇತ್ತೀಚೆಗೆ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿತ್ತು. ಈ ಸಂದರ್ಭ ಮೊಬೈಲ್, ಗಾಂಜಾಗಳು ಸಿಕ್ಕಿದೆ. ಭದ್ರತೆ ನಡುವೆಯೂ ಇಂತಹಾ ವಸ್ತುಗಳು ಒಳಗಡೆ ಹೋಗಿರುವುದು ಗಂಭೀರ ಭದ್ರತಾ ಲೋಪ. ಜೈಲ್ ಸಣ್ಣದಾದರೂ ಸಮಸ್ಯೆ ದೊಡ್ಡದಿದೆ. ಇಲ್ಲಿ ಇರುವವರೆಲ್ಲರೂ ವಿಚಾರಣಾಧೀನ ಕೈದಿಗಳಾಗಿರುವುದರಿಂದ ಅವರನ್ನು ಬೇರೆ ಜೈಲ್‌ಗೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಸ್ಥಳಾಂತರಿಸಿದರೆ ಮತ್ತೆ ಅವರನ್ನು ಇಲ್ಲಿಗೆ ವಿಚಾರಣೆಗೆ ಕರೆತರುವಾಗ ಭದ್ರತಾ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

ಜೈಲ್‌ನಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣದ ಆಂತರಿಕ ತನಿಖೆ ಪೂರ್ಣಗೊಂಡು ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ವರದಿ ಆಧಾರದ ಮೇಲೆ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

Write A Comment