ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : “ತುಳುವರು ಶ್ರಮಜೀವಿಗಳು, ಶಾಂತಿಪ್ರಿಯರು, ಸಂಸ್ಕೃತಿಯನ್ನು ಪಾಲಿಸುವವರು. ಉತ್ತಮ ಭವಿಷ್ಯವನ್ನರಸಿ ಮುಂಬಯಿಗೆ ಬಂದವರು. ನಾವು ನಮ್ಮ ಪ್ರಾಮಾಣಿಕತೆಯಿಂದ ಎಲ್ಲಿ ಹೋದರೂ ಅಲ್ಲಿನ ಜನರೊಂದಿಗೆ ಬೆರೆಯುತ್ತೇವೆ. ತುಳು ಬಾಷೆಗೆ ರಾಷ್ಟ್ರ ಮಟ್ಟದ ಗೌರವ ಸಿಗಲಿ” ಎಂದು ಬಂಟರ ಸಂಘ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ವಿಜಯ ಭಂಡಾರಿ ನುಡಿದರು.
ಜ. 30 ರಂದು ಸಂಜೆ ತುಳು ಸಂಘ, ಬೊರಿವಲಿ ಇದರ 5ನೇ ವಾರ್ಷಿಕೋತ್ಸವ ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, ಬೋರಿವಲಿ (ಪ.) ಇಲ್ಲಿ ಜರಗಿದ್ದು ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. “ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಬಾಷೆ, ಸಂಸ್ಕೃತಿಯ ಅರಿವನ್ನುಂಟುಮಾಡಲು ತುಳು ಸಂಘವು ಒಂದು ವೇದಿಕೆಯಂತೆ. ಮಕ್ಕಳು ಒಂದು ಬಿಳಿ ಕಾಗದದಂತೆ, ಕವಿ, ಚಿತ್ರಗಾರ ಯಾವರೀತಿಯಲ್ಲಿ ಅದನ್ನು ಉಪಯೋಗಿಸುತ್ತಿದ್ದಾರೋ ಅಂತೆಯೇ ಮಕ್ಕಳನ್ನು ನಾವು ತಿದ್ದುಪಡಿ ಮಾಡಲು ನಾವು ಮಕ್ಕಳಿಗೆ ನಮ್ಮ ಬಾಷೆಯನ್ನು ಕಲಿಸುವಂತಾಗಬೇಕು” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತುಳು ಸಂಘದ ಗೌರವ ಅಧ್ಯಕ್ಷ ವಿರಾರ್ ಶಂಕರ್ ಬಿ. ಶೆಟ್ಟಿ ಯವರು ಮಾತನಾಡುತ್ತಾ, ನನಗೆ ಬೊರಿವಲಿಯ ತುಳುವರೊಂದಿಗೆ ಸೇರುವ ಭಾಗ್ಯ ಈ ತುಳು ಸಂಘದ ಮೂಲಕ ದೊರಕಿದೆ. ಈ ಸಂಘದಲ್ಲಿ ಎಲ್ಲರಿಗೂ ಒಂದೆಡೆ ಸೇರುವ ಅವಕಾಶ ಸಿಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಅವರ ಸಮಸ್ಯೆಯ ಬಗ್ಗೆ ಸ್ಪಂದಿಸಲು ಈ ಸಂಘಟನೆ ಮೂಲಕ ಅವಕಾಶ ಸಿಗುತ್ತದೆ. ತುಳುವರಿಗೆ ನಾಯಕತ್ವದ ಶಕ್ತಿ ಇದೆ, ಅದಕ್ಕೆ ಅವಕಾಶ ಸಿಗಬೇಕಾಗಿದೆ. ಇಂದಿನ ಪೀಳಿಗೆಯ ಹೆತ್ತವರೂ ವಿದ್ಯಾವಂತರಾಗಿದ್ದು ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕೃತಿಯನ್ನು ನೀಡಲು ಸಮರ್ಥರು. ಪಸ್ಚಿಮ ಮುಂಬಯಿಯಿಂದ ಮಂಗಳೂರಿಗೆ ದಿನ ನಿತ್ಯ ರೈಲು ಪ್ರಯಾಣದ ಸೌಲಭ್ಯಕ್ಕಾಗಿ ಈಗಾಗಲೇ ರೈಲ್ವೇ ಯಾತ್ರಿಕ ಸಂಘದ ಮೂಲಕ ಸಂಸದ ಗೋಪಾಲ ಶೆಟ್ಟಿಯವರಿಗೆ ವಿನಂತಿ ಪತ್ರವನ್ನು ನೀಡಲಾಗಿದ್ದು ಕೆಲವೇ ದಿನಗಳ ನಂತರ ನಾವು ದೆಹಲಿಗೆ ತೆರಳಿ ರೈಲ್ವೇ ಸಚಿವರನ್ನು ಭೇಟಿಯಾಗಲಿದ್ದೇವೆ ಎಂದರು.
ಗೌರವ ಅತಿಥಿ ಉತ್ತರ ಮುಂಬಯಿಯ ಸಂಸದ ಗೋಪಾಲ್ ಸಿ. ಶೆಟ್ಟಿ ಕಳೆದ ಐದು ವರ್ಷಗಳಿಂದ ಈ ತುಳು ಸಂಘವು ಕ್ರೀಯಾಶೀಲವಾಗಿರುವುದು ಎಲ್ಲರಿಗೂ ಅಭಿನಂದನೆಗಳು. ಯುವ ಜನಾಂಗವನ್ನು ಇಂದು ತುಳು ಸಂಘವು ಸತ್ಕರುತ್ತಿದ್ದು ಮುಂದೆ ಅದು ಸಂಘಕ್ಕೆ ಪ್ರಯೋಜನಕಾರಿಯಾಗುವುದು. ಸಮಾಜ ಸೇವೆಯಲ್ಲಿ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಯಾಶೀಲರಾಗಬೇಕು. ನಮ್ಮವರ ಜಾತೀಯ ಸಂಘಟನೆಗಳು ಇಂದು ಬಹಳ ಅಭಿವೃದ್ದಿಯಾಗುತ್ತಿದೆ. ನಾವೆಲ್ಲಾ ಒಂದಾಗಿರಲು ಇಂತಹ ಸಂಘಟನೆ ಬೇಕು. ಅಮೇರಿಕಾದಂತ ದೇಶದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ದುಡಿಯುತ್ತಿದ್ದು, ನಮ್ಮ ದೇಶದಲ್ಲೂ ಇಂತಹ ಬದಲಾವಣೆಯಾಗಬೇಕಾಗಿದೆ. ಅದು ಇಂತಹ ಸಂಘಟನೆಯಿದ ಸಾದ್ಯ. ಪ್ರಗತಿಯೊಂದಿಗೆ ಬದಲಾಗುತ್ತಿರುವ ಮುಂದಿನ ಸಮಯದಲ್ಲಿ ಮಕ್ಕಳು ತಮ್ಮ ಮಾತೃಬಾಷೆಯೊಂದಿಗೆ ಇಂಗ್ಲೀಷ್ ಬಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ನಾವೆಲ್ಲರೂ ಈ ರೀತಿ ಒಂದಾದಲ್ಲಿ ನಮ್ಮ ಸಮಾಜ ಎಷ್ಟು ದೊಡ್ಡದಿದೆ ಎಂದು ನಮ್ಮ ಮಕ್ಕಳಿಗೆ ಗೊತ್ತಾಗುತ್ತದೆ.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮೊಗವೀರ ಬ್ಯಾಂಕ್ ನ ಉಪ ಕಾರ್ಯಧ್ಯಕ್ಷ ಸುರೇಶ್ ಆರ್. ಕಾಂಚನ್ ಸಂಸದ ಗೋಪಾಲ ಶೆಟ್ಟಿಯವರಿಂದ ಗೌರವ ಸ್ವೀಕರಿಸಿ ಮಾತನಾಡುತ್ತಾ, ಮೊಗವೀರ ಸಮಾಜಕ್ಕೆ ಗೋಪಾಲ ಶೆಟ್ಟಿಯವರ ಕೊಡುಗೆ ಅಪಾರ. ವಿರಾರ್ ಶಂಕರ್ ಬಿ. ಶೆಟ್ಟಿಯವರ ನೇತೃತ್ವದಲ್ಲಿ, ಪೇಟೆಮನೆ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಈ ತುಳು ಸಂಘ ಇನ್ನಷ್ಟು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಗೌರವ ಅತಿಥಿ ಖ್ಯಾತ ಸಾಹಿತಿ ಬಾಬು ಶಿವ ಪೂಜಾರಿ ಯವರು ತುಳು ನಾಡಿನ ರಾಜಧಾನಿಯಂತಿರುವ ಬಾರ್ಕೂರಿನಿಂದ ಬಂದವನು ನಾನು. ತುಳು ಪ್ರದೇಶದಲ್ಲಿ ತುಳು ಬಾಷೆ ಸಂಸ್ಕೃತಿ ಇದೆ ಆದರೆ ಬಾರ್ಕೂರು ಮತ್ತು ಬಸರೂರು ತುಳುವ ದೇವರು ಇರುವ ಸ್ಥಳ, ಬಸರೂರಿನಲ್ಲಿ ಪ್ರಾಚೀನ ದೇವಸ್ಥಾನವಿದ್ದು ಅದನ್ನು ಉಳಿಸಬೇಕಾಗಿದೆ ಎನ್ನುತ್ತಾ ತುಳು ನಾಡಿನ ಶ್ರೀಮಂತ ಸಂಸ್ಕೃತಿಯ ಭೂತಾರಾದನೆ ಬಗ್ಗೆ ಮಾತನಾಡಿದರು.
ಗೌರವ ಅತಿಥಿ ಮೀರಾ – ಭಾಯಂಧರ್ ಬಿ.ಜೆ.ಪಿ. ಉಪಾಧ್ಯಕ್ಷ ಅರವಿಂದ ಎ. ಶೆಟ್ಟಿ ಯವರು ಮಕ್ಕಳಿಗೆ ವಿಧ್ಯಾಭ್ಯಾಸ ನೀಡುದರೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವು ಅಗತ್ಯ. ಪುರುಷರು ಹೆಚ್ಚಿನ ಕಾಲ ಮನೆಯಿಂದ ದೂರವಿರುವ ಕಾರಣ ಇದು ಮಹಿಳೆಯರಿಂದ ಮಾತ್ರ ಸಾಧ್ಯ. ಮಕ್ಕಳಿಗೆ ಸಂಸ್ಕೃತಿಯನ್ನು ಕೊಡುವವರು ಮಹಿಳೆಯರು ಎನ್ನುತ್ತಾ ಬೊರಿವಲಿ ಪರಿಸರದಲ್ಲಿನ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
ಜಯರಾಜ ನಗರದ ಶ್ರೀ ಮಹಿಷ ಮರ್ಧಿನಿ ದೇವಸ್ಥಾನ ಆಡಳಿತ ಟ್ರಸ್ಟಿ ಪ್ರದೀಪ್ ಸಿ. ಶೆಟ್ಟಿ ದಂಪತಿಯನ್ನು ತುಳು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತುಳು ಸಂಘಕ್ಕೆ ಶ್ರೀ ಮಹಿಷ ಮರ್ಧಿನಿ ದೇವರು ಆಶೀರ್ವದಿಸಲಿ, ಸತ್ಯ, ಧರ್ಮ ವನ್ನು ಬಿಡಬಾರದು. ಅದನ್ನು ನಾವು ಮಾಡುತ್ತಿದ್ದೇವೆ, ಎಂದರು. ಪೇಟೆಮನೆ ಪ್ರಕಾಶ್ ಶೆಟ್ಟಿ ಯವರು ಸನ್ಮಾನಿತರನ್ನು ಪರಿಚಯಿಸಿದರು.
ತುಳು ಸಂಘ, ಬೊರಿವಲಿ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ ಎಲ್ಲರನ್ನು ಸ್ವಾಗತಿಸುತ್ತಾ ತುಳು ಬಾಷೆ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುವುದು ನಮ್ಮ ಉದ್ದೇಶವಾಗಿದೆ. ಸಂಸದ ಗೋಪಾಲ ಶೆಟ್ಟಿಯವರು “ಬೊರಿವಲಿಯ ಬೊಲ್ಪು” (ಬೊರಿವಲಿಯ ಬೆಳಕು) ಎಂದು ವರ್ಣಿಸಿದ ಅವರು ಮುಂಬಯಿ ಪಸ್ಷಿಮದ ಮುಂಬೈ ಸೆಂಟ್ರಲಿನಿಂದ ಮಂಗಳೂರಿಗೆ ತಾತ್ಕಾಲಿಕವಾಗಿ ಪ್ರಾರಂಭಿಸಿದ ರೈಲು ಖಾಯಂ ಆಗಲಿ ಎಂದು ತುಳು ಸಂಘದ ಪರವಾಗಿ ವಿನಂತಿಸಿದರು. ಜೊತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ತುಳು ಸಂಘ ಬೊರಿವಲಿ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಕೋಶಾಧಿಕಾರಿ ರಜಿತ್ ಸುವರ್ಣ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಹರಿಣ ಶೆಟ್ಟಿ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕರುಣಾಕರ್ ಎಂ. ಶೆಟ್ಟಿ ವಂದನಾರ್ಪಣೆ ಮಾಡಿದರು.
ನಗರದ ಖ್ಯಾತ ಸಂಗೀತಗಾರ ಗಣೇಶ್ ಎರ್ಮಾಳ್ ಅವರ ಪ್ರಾರ್ಥನೆಯೊಂದಿಗೆ ಗಣ್ಯರು ದೀಪ ಬೆಳಗಿಸುದರ ಮೂಲಕ ಸಭಾಕಾರ್ಯಕ್ರಮವು ಆರಂಭಗೊಂಡಿತು. ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನೋರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸತೀಷ್ ಮತ್ತು ಬಳಗದವರಿಂದ “ನಮ್ಮ ತುಳುನಾಡು” ವಿಶೇಷ ಕಾರ್ಯಕ್ರಮ ನಡೆಯಿತು.