ಮಂಗಳೂರು,ಜ.26: ಕಾಲೇಜಿನ ಆಡಳಿತ ಮಂಡಳಿಯ ದೌರ್ಜನ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಇತ್ತೀಚಿಗೆ ಮಂಗಳೂರಿನ ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕೊಡಗು ಜಿಲ್ಲೆ ಮಡಿಕೇರಿಯ ಮಾದಾಪುರ ಶ್ರೀ ಡಿ. ಚೆನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸುದೇಶ್ ಅವರ ಕುಳಾಯಿ ನಿವಾಸಕ್ಕೆ ಸೋಮವಾರ ಕಾಂಗ್ರೆಸಿನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೃತರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜನಾರ್ದನ ಪೂಜಾರಿ ಅವರು, ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಘಟನೆ ಮಾಸುವ ಮುನ್ನವೇ ಕರಾವಳಿ ನಗರಿ ಮಂಗಳೂರಿನಲ್ಲಿ ದಲಿತ ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಆಡಳಿತ ಮಂಡಳಿಯ ದೌರ್ಜನ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸುದೇಶ್ ಸಾವಿನಿಂದ ಕುಟುಂಬ ಕಂಗಾಲಾಗಿದೆ.ಸುದೇಶ್ ಅವರು ಪತ್ನಿ ಸ್ನೇಹಲತಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ,
ಮಂಗಳೂರಿನ ತಲಪಾಡಿ ನಿವಾಸಿ ಸುದೇಶ್. ಕೊಡಗು ಜಿಲ್ಲೆ ಮಡಿಕೇರಿಯ ಮಾದಾಪುರ ಶ್ರೀ ಡಿ. ಚೆನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲರು. ಸುದೇಶ್ಗೆ ಕಳೆದ ಕೆಲವು ದಿನಗಳಿಂದ ಆಡಳಿತ ಮಂಡಳಿ ಸದಸ್ಯರು ಮತ್ತು ಸಹ ಶಿಕ್ಷಕರು ಹಿಂಸಾತ್ಮಕ ಮಾತುಗಳಿಂದ ತೇಜೋವಧೆ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು.ಇದರಿಂದಾಗಿ ಕಳೆದ ಕೆಲವು ವಾರಗಳಿಂದ ತೀವ್ರ ನೊಂದು ಮಾನಸಿಕ ಆಘಾತಕ್ಕೊಳಗಾದ ಸುದೇಶ್ ಮಡಿಕೇರಿಯ ಕಾಲೇಜಿಗೆ ಹೋಗದೆ ಮಂಗಳೂರಿನ ಬಿಜೈನ ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರಿಶಿಷ್ಟ ಜಾತಿಯ ಮುಗೇರಾ ಜಾತಿಗೆ ಸೇರಿದ ಸುದೇಶ್ ಅವರು ಮುಂಬಡ್ತಿ ಪಡೆದು ಪ್ರಾಂಶುಪಾಲರ ಹುದ್ದೆ ಅಲಂಕರಿಸಿದ್ದು ಚೆನ್ನಮ್ಮ ಕಾಲೇಜಿನ ಆಡಳಿತ ಮಂಡಳಿಗೂ ಬೇಕಿರಲಿಲ್ಲ. 19 ವರ್ಷದ ಸೇವಾವಧಿ ಹೊಂದಿರುವ ಸುದೇಶ್ ಸ್ಥಾನದ ಮೇಲೆ ಸ್ಥಳೀಯರಾದ ಮಂದಪ್ಪ ಕೂಡ ಕಣ್ಣಿಟ್ಟಿದ್ದರು. ತನ್ನ ಪತ್ನಿಯನ್ನು ಕಾಲೇಜಿಗೆ ಸೇರಿಸುವುದು ಸೇರಿದಂತೆ ಕಾಲೇಜಿನ ಎಲ್ಲ ಅವ್ಯವಹಾರಕ್ಕೆ ಸುದೇಶ್ ಅಡ್ಡಿಯಾಗಿದ್ದರು.
ಈ ಕಾರಣಕ್ಕಾಗಿ ಆಡಳಿತ ಮಂಡಳಿ ವಿನಾ ಕಾರಣ ತೇಜೋವಧೆ ಹಾಗೂ ಮಾನಸಿಕ ಹಿಂಸೆ ಮೂಲಕ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಪತ್ನಿ ಸ್ನೇಹಲತಾ ದೂರಿದ್ದಾರೆ. ಸಾಯುವುದಕ್ಕೆ ಮುನ್ನ ಕಳುಹಿಸಿರುವ ಡೆತ್ನೋಟ್ ಸೇರಿದಂತೆ ಹಲವಾರು ದಾಖಲೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದು ಅವರು ಕಣ್ಣೀರು ಹಾಕಿಕೊಂಡಿದ್ದಾರೆ.
ಸುದೇಶ್ ಸಾವಿನಿಂದ ಅವರ ಕುಟುಂಬ ಕಂಗಾಲಾಗಿದೆ. ತಂದೆಗೆ ಮಾನಸಿಕ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ತಂದೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮೃತರ ಪುತ್ರಿ ಚೇತನ ಆಗ್ರಹಿಸಿದ್ದಾರೆ.ಈ ಬಗ್ಗೆ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ನೀಡಿದ ದೂರಿನಂತೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಮತ್ತು ಮಂದಪ್ಪ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ