ಕನ್ನಡ ವಾರ್ತೆಗಳು

ಮಲ್ಪೆಗೆ ಬರುವ ಪ್ರವಾಸಿಗರಿಗೆ ವೈಫೈ ಭಾಗ್ಯ: ಮಲ್ಪೆ ದೇಶದ ಮೊದಲ ವೈಫೈ ಬೀಚ್

Pinterest LinkedIn Tumblr

ಉಡುಪಿ: ದೇಶದ ಮೊಟ್ಟ ಮೊದಲ ವೈಫೈ ಬೀಚ್ ಆಗಿ ಜಿಲ್ಲೆಯ ಮಲ್ಪೆ ಬೀಚ್ ರೂಪುಗೊಂಡಿದ್ದು, ಬೀಚ್ ಗೆ ಆಗಮಿಸಿಸುವ ಪ್ರವಾಸಿಗರಿಗೆ, ಬಿ.ಎಸ್.ಎನ್.ಎನ್ ವತಿಯಿಂದ ದಿನದ 24 ಗಂಟೆಗಳ ಕಾಲ ವೈಫೈ ಸೌಲಭ್ಯ ಒದಗಿಸಲಾಗಿದ್ದು, ಬೀಚ್ ಗೆ ಆಗಮಿಸುವ ಸಾರ್ವಜನಿಕರು ಯಾವುದೇ ಮೊಬೈಲ್ ಸಂಖ್ಯೆಯಿಂದ ಅರ್ಧ ಗಂಟೆಗಳ 4 ಜಿ ವೇಗದ ವೈಫೈ ಸೌಲಭ್ಯವನ್ನು ಪಡೆಯಬಹುದಾಗಿದೆ.

Malpe_Beach_WiFi

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಭಾನುವಾರ ಮಲ್ಪೆ ಬೀಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಫೈ ಸೌಲಭ್ಯ ಉದ್ಘಾಟಿಸಿದ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಪೆ ಬೀಚ್ ದೇಶದ ಅತ್ಯಂತ ಸುಂದರ ಬೀಚ್ ಆಗಿದ್ದು, ಇಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 80 ಲಕ್ಷ ರೂ ವೆಚ್ಚದಲ್ಲಿ ಬೀಚ್ ನ ಸ್ವಚ್ಚತೆಗೆ ಗಮನ ಹರಿಸಿದ್ದು, ವಾಚ್ ಟವರ್ ನಿರ್ಮಾಣ, ಸ್ವಚ್ಛತಾ ಕೆಲಸಗಾರರ ನೇಮಕ, ಲೈಫ್ ಗಾರ್ಡ್‌ಗಳ ನೇಮಕ , ಟಾಯ್ಲೆಟ್ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಹಾಗೂ 4 ರಿಂದ 5 ಕೋಟಿ ರೂ ವೆಚ್ಚದಲ್ಲಿ ಬೀಚ್ ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗಿದೆ ಹಾಗೂ 70 ಲಕ್ಷ ರೂ ವೆಚ್ಚದಲ್ಲಿ ಬೀಚ್ ಕ್ಲೀನಿಂಗ್ ಯಂತ್ರವನ್ನು ಖರೀದಿಸಲಾಗಿದೆ ಎಂದು ಹೇಳಿದರು.

ಮಲ್ಪೆ ಬೀಚ್ ನಲ್ಲಿ ಅರ್ಧ ಗಂಟೆಯ ಬದಲು 24ಗಂಟೆಗಳ ಕಾಲ ವೈಫೈ ಸೌಲಭ್ಯವನ್ನು ಒದಗಿಸುವ ಕುರಿತಂತೆ ಸಂಬಂದಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಪೌರಾಯುಕ್ತ ಮಂಜುನಾಥಯ್ಯ, ಬಿ.ಎಸ್.ಎನ್.ಎಲ್. ನ ಅಧಿಕಾರಿ ವಿಷ್ಣುಮೂರ್ತಿ, ಬೀಚ್ ನಿರ್ವಹಣಾ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಸ್ವಾಗತಿಸಿದರು.

ವೈಫೈ ಬಳಕೆ ಮಾಡೋದು ಹೀಗೆ:
ಗ್ರಾಹಕರು ಸಂಪರ್ಕ ಕಲ್ಪಿಸಲು ವೈಪೈ ಆನ್ ಮಾಡಿ ಬಳಿಕ ಮೊಬೈಲ್‌ ಸಂಖ್ಯೆ ಮತ್ತು ಈಮೇಲ್‌ ಐಡಿ ನೀಡಬೇಕು. ಅನಂತರ ಮೊಬೈಲ್‌ಗೆ ಪಾಸ್‌ವರ್ಡ್‌ ಸಂದೇಶ ಬರುತ್ತದೆ. ಪಾಸವರ್ಡ್ ಅಪ್-ಡೇಟ್ ಮಾಡಿದ ಬಳಿಕ ವೈಫೈ ಸೇವೆ ಲಭ್ಯವಾಗಲಿದೆ. ಒಂದು ಮೊಬೈಲ್‌ ಸಂಖ್ಯೆಗೆ ದಿನಕ್ಕೆ ಅರ್ಧ ಗಂಟೆ ವೈಪೈ ಸೌಲಭ್ಯ ಸಿಗಲಿದೆ. ಗಾಂಧಿಕಟ್ಟೆ ಆಸುಪಾಸಿನ 200 ಮೀಟರ್‌ ವ್ಯಾಪ್ತಿಯಲ್ಲಿ ವೈಫೈ ಸಂಪರ್ಕ ದೊರಕುವುದು.

Write A Comment