
ಮಂಗಳೂರು, ಜ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತ ಗಮನಿಸಿದರೆ 1,000 ಗಂಡು ಮಕ್ಕಳಿಗೆ 947 ಹೆಣ್ಣು ಮಕ್ಕಳು ಇರುವ ಕಳವಳಕಾರಿ ಅಂಶ ಗೋಚರಿಸುತ್ತಿದೆ. ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆ ನಡೆ ಸುವ ಅಥವಾ ಭ್ರೂಣ ಹತ್ಯೆ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾಹಿತಿ ಸಂಗ್ರಹಿಸಬೇಕು. ಈ ವ್ಯತ್ಯಾಸವನ್ನು ಸರಿ ಪಡಿಸಲು ಆರೋಗ್ಯ ಇಲಾಖೆ ತೆಗೆದು ಕೊಂಡ ಕ್ರಮಗಳೇನು ಎಂಬ ವರದಿಯನ್ನು ಸಮಿತಿಗೆ ಮೂರು ತಿಂಗಳೊಳಗೆ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಚ್ಐವಿಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಅಂಕಿಅಂಶಗಳನ್ನು ಪರೀಕ್ಷಿಸಿದ ಉಗ್ರಪ್ಪ, ಹೆಚ್ಚಿನ ಕೇಸ್ಗಳು ಖುಲಾಸೆಯಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿನ ಸ್ಕ್ಯಾನಿಂಗ್ ಸೆಂಟರ್ಗಳ ಹಾವಳಿಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ ಎಂದು ಡಿವೈಎಫ್ಐನ ಮುನೀರ್ ಕಾಟಿಪಳ್ಳ ತಿಳಿಸಿದರು. ಸಮಿತಿಯ ಸದಸ್ಯರಾದ ಪ್ರಭಾ ಬೆಳಮಂಗಲ ಮಾತನಾಡಿ, ಜಿಲ್ಲೆಯಲ್ಲಿ 146 ಸ್ಕಾನಿಂಗ್ ಸೆಂಟರ್ಗಳಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಆಸ್ಪತ್ರೆಗಳಿಗಿಂತ ಅಧಿಕ ಸ್ಕ್ಯಾನಿಂಗ್ ಸೆಂಟರ್ಗಳಿರುವುದು ಭ್ರೂಣ ಹತ್ಯೆಯ ಬಗ್ಗೆ ಅನುಮಾನ ಮೂಡಿಸುತ್ತದೆ. ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಅನುಮತಿ ನೀಡಬಾರದು ಎಂದು ಸಲಹೆ ನೀಡಿದರು.
ಬೆಳ್ತಗಂಡಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಹೆಣ್ಮಕ್ಕಳು ಅಸಹಜವಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಬೆಳ್ತಂಗಡಿಯ ಶೇಖರ್ ಎಲ್. ಸಭೆಯ ಗಮನ ಸೆಳೆದರೆ, ಗಾಂಜಾ ಹಾಗೂ ಮಾದಕ ದ್ರವ್ಯಗಳ ಮಾರಾಟಕ್ಕೆ ಮೊದಲು ಕಡಿವಾಣ ಹಾಕಬೇಕು ಎಂದು ಅನಿತಾ ಎಸ್. ಭಂಡಾರ್ಕರ್ ಆಗ್ರಹಿಸಿದರು. ಕೊಲೆಗಡುಕರಿಗೆ ಶಿಕ್ಷೆಯೇ ಆಗುತ್ತಿಲ್ಲ ಎಂದು ಜಯಂತಿ ಶೆಟ್ಟಿ ಆಕ್ಷೇಪಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ತಜ್ಞರ ಸಮಿತಿಯ ಸದಸ್ಯರಾದ ಶಾಸಕಿ ಮೋಟಮ್ಮ, ಕೆ.ಎಸ್.ವಿಮಲಾ, ಡಾ.ಲೀಲಾ ಸಂಪಿಗೆ, ರೇಣುಕಾ, ಜ್ಯೋತಿ ಎ., ಶರಣಪ್ಪ ಮಟ್ಟೂರು, ಕೆ.ಬಿ.ಶಾಂತಪ್ಪ, ಚಂದ್ರಮೌಳಿ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಪೊಲೀಸ್ ಆಯುಕ್ತ ಚಂದ್ರಶೇಖರ್, ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲೇ ಕುಸಿದ ಅಧಿಕಾರಿ – ಆಸ್ಪತ್ರೆಗೆ ದಾಖಲು

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ ವಹಿಸಲಾಗುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಯವರನ್ನು ತರಾಟೆಗೈದರು. 14 ಪ್ರಕರಣಗಳಲ್ಲಿ ಕೇವಲ 1 ಪ್ರಕರಣಕ್ಕೆ ಮಾತ್ರ ಪರಿಹಾರ ನೀಡ ಲಾಗಿದೆ. ಉಳಿದ ಸಂತ್ರಸ್ತರಿಗೆ ಯಾಕೆ ಪರಿಹಾರ ನೀಡಿಲ್ಲ ಎಂದು ಉಗ್ರಪ್ಪರು ಪ್ರಶ್ನಿಸಿದಾಗ, ಅರ್ಜಿ ಹಾಕಿದ ಪ್ರಕರಣಗಳಿಗೆ ಪರಿಹಾರ ನೀಡ ಲಾಗುತ್ತಿದೆ ಎಂದು ಉತ್ತರಿಸಿದರು.
ಇದರಿಂದ ಸಿಟ್ಟುಗೊಂಡ ಉಗ್ರಪ್ಪ, ಇಂತಹ ಪ್ರಕರಣಗಳಲ್ಲಿ ಅರ್ಜಿ ಹಾಕಿ ಯಾರು ಪರಿಹಾರ ಪಡೆಯುತ್ತಾರೆ. ಮಾನವೀಯತೆ ನೆಲೆಯಲ್ಲಿ ಕೆಲಸ ಮಾಡಬೇಕು. ಕನಿಷ್ಠ ಜ್ಞಾನ ಇಲ್ಲದ ನಿಮ್ಮನ್ನು ನೇತ್ರಾವತಿ ನದಿಗೆ ಎಸೆಯಬೇಕು ಎಂದು ಹೇಳುತ್ತಾ, 2011ರ ಪರಿಹಾರ ಕಾಯ್ದೆ ಓದಿದ್ದೀರಾ? ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.
ಆಗ ಗಲಿಬಿಲಿಗೊಂಡ ಸುಂದರ ಪೂಜಾರಿ ಇಲ್ಲ ಎಂದು ಉತ್ತರಿಸಿದರು. ನನಗೆ ಅಧಿಕಾರ ಇಲ್ಲ. ನಿಮಗೆ ಅಧಿಕಾರ ಇದ್ದರೆ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಯನ್ನುದ್ದೇಶಿಸಿ ಹೇಳುತ್ತಾ, ನನಗೆ ಅಮಾನತು ಮಾಡುವ ಅಧಿಕಾರ ಇಲ್ಲದಿದ್ದರೂ ಈ ರೀತಿ ಉತ್ತರ ಕೊಡುವ ನಿಮ್ಮ ಕತೆ ಬರೆದು ಇಲಾಖೆಗೆ ಕಳುಹಿಸಲಾ? ಎಂದು ಉಗ್ರಪ್ಪರು ಹೇಳಿದಾಗ, ಆಘಾತಕ್ಕೊಳಗಾದ ಸುಂದರ ಪೂಜಾರಿ ಕುಸಿದು ಬಿದ್ದರು.
ತಕ್ಷಣ ನೀರು ನೀಡಿ ಉಪಚರಿಸಿದಾಗ ಸುಧಾರಿಸಿಕೊಂಡರು. ಮತ್ತೆ ಕೆಲ ಕ್ಷಣಗಳಲ್ಲೇ ಅವರು ಕುಳಿತಲ್ಲಿಂದಲೇ ವಿಚಲಿತರಾದಾಗ ತಕ್ಷಣ ಜಿಲ್ಲಾ ಎಸ್ಪಿ, ಪೊಲೀಸ್ ಆಯುಕ್ತರು, ವೆನ್ಲಾಕ್ ಅಧೀಕ್ಷಕಿ ಅವರ ಬಳಿ ಆಗಮಿಸಿ ಅವರನ್ನು ಎತ್ತಿಕೊಂಡು ವಾಹನದಲ್ಲಿ ಎಜೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲು ಪಡಿಸಿದರು..