ನವದೆಹಲಿ, ಡಿ.23 : ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಕೊಡಗು: ಕಾಫಿಯ ನಾಡು’ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ತಾಲೀಮು ನಡೆಸಲಾಗುತ್ತಿದೆ.
‘ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ವಾರ್ತಾ ಇಲಾಖೆಯು ಕಳೆದ ಏಳು ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಂದು ರಕ್ಷಣಾ ಸಚಿವಾಲಯದ ರಾಷ್ಟ್ರೀಯ ರಂಗಶಾಲ ಕ್ಯಾಂಪ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ತಿಳಿಸಿದರು.
2016ರಂದು ನಡೆಯುವ ಗಣರಾಜ್ಯೋತ್ಸವಕ್ಕಾಗಿ ಇಲಾಖೆಯು ಕೊಡುಗು; ಕಾಫಿಯ ನಾಡು, ಸಾವಿರ ಕಂಬದ ಬಸದಿ, 18ನೇ ಶತಮಾನದ ಮೈಸೂರು ದಸರಾ ಆಚರಣೆ, ಹಂಪಿ : ವಿಶ್ವದ ಅತೀ ದೊಡ್ಡ ಬಯಲು ವಸ್ತುಸಂಗ್ರಹಾಲಯ ಮತ್ತು ಕರ್ನಾಟಕದ ಜಾನಪದ ಕಲೆಗಳು ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಲಾಗಿತ್ತು. ಇದರಲ್ಲಿ ಆಯ್ಕೆಯಾಗಿದ್ದು ಕೊಡಗು ಕಾಫಿಯ ನಾಡು. ಇದಕ್ಕೂ ಮೊದಲು ಕಳೆದ ಐದು ವರ್ಷಗಳಿಂದಲೂ ಕೊಡಗು ; ಕಾಫಿಯ ಬೀಡು ಎನ್ನುವ ವಿಷಯವನ್ನು ಕಳುಹಿಸುತ್ತಿದ್ದೆವು. ಈ ಬಾರಿ ಕಾಫಿಯು ಆಯ್ಕೆಯಾಗಿದೆ ಎಂದರು.
ಹೆಸರಾಂತ ಬರಹಗಾರ ಡಾ. ಎಚ್. ಎಲ್. ನಾಗೇಗೌಡರ ಅವರ ‘ಬೆಟ್ಟದಿಂದ ಬಟ್ಟಲಿಗೆ’ ಕೃತಿಯಿಂದ ಪ್ರೇರಣೆ ಪಡೆದುಕೊಂಡು ಈ ಸ್ಥಬ್ತಚಿತ್ರಕ್ಕೆ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಈಗ ಅದು ವಾಸ್ತವಾಗಿ ಪ್ರದರ್ಶನಗೊಳ್ಳುತ್ತಿದೆ. ಬರಹಗಾರದ ಡಾ. ಎಚ್. ಎಲ್. ನಾಗೇಗೌಡರ ಜನ್ಮ ಶತಮಾನ ವರ್ಷವೂ ಆಗಿರುವ ಈ ವರ್ಷವೇ ‘ರಾಜಪಥ’ದಲ್ಲಿ ‘ಕಾಫಿ’ ಮೆರವಣಿಗೆ ಹೊರಟಿರುವ ಸಹಜವಾಗಿ ಸಂತಸ ತಂದಿದೆ ಎಂದು ಅವರು ಹೇಳಿದರು.
ವಿಷಯ ಆಯ್ಕೆ ಮೊದಲ ಹಂತ ದಾಟಿದ ಬಳಿಕ, ಸ್ತಬ್ಧಚಿತ್ರದ ಮಾದರಿ (ಕೀ ಮಾಡೆಲ್) ಮತ್ತು ಸಂಗೀತದ ಹಂತವನ್ನು ದಾಟಬೇಕಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಈ ಬಾರಿ ರಾಜ್ಯವು ಪ್ರಶಸ್ತಿಯನ್ನು ನಿರೀಕ್ಷಿಸುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದರು.
ಸ್ತಬ್ಥಚಿತ್ರದಲ್ಲಿ ಏನಿರಲಿದೆ: ಕಾಫಿ ಬೀಜ ಸಂಸ್ಕರಣೆಗೊಂಡು ಕಾಫಿ ಪುಡಿಯಾಗಿ ಕಾಫಿಯಾಗಿ ಬಟ್ಟಲಿಗೆ ಬರುವ ವಿವಿಧ ಹಂತಗಳನ್ನು ಈ ಟ್ಯಾಬ್ಲೋದಲ್ಲಿ ತೋರಿಸಲಾಗಿದೆ. ಪ್ರಧಾನ ಭಾಗದಲ್ಲಿ ಕಾಫಿ ತೋಟದಲ್ಲಿ ಕಾಫೀ ಹಣ್ಣು ಕೀಳುತ್ತಿರುವ ಮಹಿಳೆ ಇದ್ದಾರೆ. ಕಾಫಿ ಕಪ್‍ನಲ್ಲಿ ವಿಶ್ವಕ್ಕೇ ಕಾಫಿ ಸ್ವಾದವನ್ನು ಪಸರಿಸುವಂತೆ ಬಿಂಬಿಸಲಾಗಿದೆ. ಹಾಗೆಯೇ, ಕಾಫಿ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ಪ್ರತಿಬಿಂಬಿಸಲಾಗಿದೆ. ಕಾಫಿ ಹಣ್ಣುಗಳನ್ನು ಹಸನಗೊಳಿಸುತ್ತಿರುವ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹಂತಗಳನ್ನು ತೋರಿಸಲಾಗಿದೆ. ವಾಹನದ ಮುಂಭಾಗದಲ್ಲಿ ಫಿಲ್ಟರ್ ಕಾಫಿಯ ತಯಾರಿಸುವ ಪರಿಕರಗಳನ್ನು ಇಡಲಾಗಿದೆ. ಕಾಫಿ ಬೀಜಗಳ ರಾಶಿಯ ನಡುವೆ ಇರುವ ಲೋಟಕ್ಕೆ ಬಟ್ಟಲಿನಿಂದ ಕಾಫಿಯನ್ನು ಸುರಿಯಲಾಗುತ್ತಿದೆ. ಫೀಲ್ಟರ್ ಕಾಫಿ ತಯಾರಿಸುವ ಪಾತ್ರಗಳು ಸಕ್ಕರೆ ಬಟ್ಟಲುಗಳು ಸಹ ಪ್ರಧಾನವಾಗಿ ಕಂಡುಬರುತ್ತಿದೆ. ಸ್ತಬ್ಧಚಿತ್ರದ ಮೇಲು ಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿವಿಧ ಹಂತಗಳನ್ನು ಪರೀಶೀಲಿಸುವ ‘ಕಾಫಿ ತೋಟದ ಮಾಲೀಕರಾಗಿ’ ಕೊಡಗಿನ ಕುರಿಕಾದ ಗಣಪತಿ ಕವಿತಾ ಮತ್ತು ಸಿ.ಎಂ. ಸಚ್ಚಿ ಮತ್ತು ಕೆ. ಸೋಮಯ್ಯ ಹಾಗೂ ನೇವಿ ಚಾರ್ಲೇ ಅವರುಗಳು ‘ಮೇಲ್ವಿಚಾರಣೆ’ ನಡೆಸಲಿದ್ದಾರೆ.
ತೀವ್ರ ಪೈಪೋಟಿ : ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ಥಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯಗಳ ಸಂಖ್ಯೆಯನ್ನು 14ಕ್ಕೆ ಇಳಿಸಲಾಗಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ ಆರನೇ ಬಾರಿಗೆ ಆಯ್ಕೆಯಾಗಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ರಾಜ್ಯವು ಸತತವಾಗಿ ಆರನೇ ಬಾರಿ ಆಯ್ಕೆಗೊಂಡಿರುವುದು ಅಭಿಮಾನದ ಸಂಗತಿ.
ಪ್ರಶಸ್ತಿಗಳ ಸರಮಾಲೆ: 2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳನ್ನು ಪ್ರದರ್ಶಿಸಿತ್ತು. ಇದಕ್ಕೆ ತೃತ್ತೀಯ ಪ್ರಶಸ್ತಿ ದೊರೆತಿತ್ತು. 2014ರಲ್ಲಿ ’ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್’ ಸ್ತಬ್ಧಚಿತ್ರದೊಂದಿಗೆ ರಾಜ್ಯವು ಭಾಗವಹಿಸಿತ್ತು. 2013ರಲ್ಲಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ ಪ್ರದರ್ಶನಗೊಂಡಿತ್ತು. 2012ರ ಗಣರಾಜ್ಯೋತ್ಸವದಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಯ ಸ್ತಬ್ಧಚಿತ್ರಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2011ರಲ್ಲಿ ಬೀದರ್‌ನ ಪಾರಂಪರಿಕ ಕಲೆಯಾದ ‘ಬಿದರಿ’ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿತ್ತು. 2006ರಲ್ಲಿ ಕರ್ನಾಟಕದಲ್ಲಿ ನಡೆಯಲಿದ್ದ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧ ಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು. 2008ರಲ್ಲಿ ಹೊಯ್ಸಳ ಕಲೆಯ ಸ್ಥಬ್ತಚಿತ್ರವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅಲ್ಲದೆ, ಇದಕ್ಕಾಗಿ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‍ಗಾಗಿ ಪ್ರಶಸ್ತಿ ಪಡೆದುಕೊಂಡಿತ್ತು. ಒಂದೇ ಸ್ಥಬ್ತಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ.
ಗಮನಕ್ಕೆ: ಇದರೊಂದಿಗೆ ಇಂದು ನಡೆದ ಪತ್ರಿಕಾಗೋಷ್ಠಿಯ ಛಾಯಾಚಿತ್ರಗಳು ಮತ್ತು ತಾಲೀಮಿನಲ್ಲಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರ ಮತ್ತು ಸ್ತಬ್ಧಚಿತ್ರದ ವಾಹನದ ಮೇಲಿರುವ ಕೊಡವರ ಚಿತ್ರಗಳನ್ನು ಕಳುಹಿಸಲಾಗಿದೆ.
ಹೆಚ್ಚಿನ ಮತ್ತು ಪೂರಕ ಮಾಹಿತಿಗಾಗಿ:
· ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ (9900095332)
· ಅಂತರರಾಷ್ಟ್ರೀಯ ಕಲಾನಿರ್ದೇಶಕ ಶಶಿಧರ ಅಡಪ (ಪ್ರತಿರೂಪಿ ಸಂಸ್ಥೆ / 9448497073/ಸತೀಶ್ 9448497076)