ಮಂಗಳೂರು, ಜ.20: ಜಾನುವಾರುಗಳ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ತಂಡದ ಮೂವರನ್ನು ನಿನ್ನೆ ತಲಪಾಡಿ ಬಳಿ ಬಂಧಿಸಿರುವ ಉಳ್ಳಾಲ ಪೊಲೀಸರು ಟವೇರಾ ಕಾರು, ತಲವಾರು, ಮೆಣಸಿನ ಹುಡಿ, ಹಗ್ಗ ಮತ್ತು ನಕಲಿ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಕಾರ್ಯಾಚರಣೆ ವೇಳೆ ತಂಡದ ಇನ್ನಿಬ್ಬರು ಪರಾರಿಯಾಗಿದ್ದಾರೆ.
ಕಳ್ಳತನದ ಪ್ರಮುಖ ಆರೋಪಿ ಚೆಂಬುಗುಡ್ಡೆಯ ನಿವಾಸಿ ಇರ್ಷಾದ್ (30) ಮಂಜನಾಡಿಯ ಕಲ್ಕಟ್ಟ ನಿವಾಸಿಗಳಾದ ಇಮ್ರಾನ್ (24) ಮುತ್ತಲಿಬ್ (35) ಎಂದು ಗುರುತಿಸಲಾಗಿದೆ.
ನಿನ್ನೆ ನಸುಕಿನ ಮೂರು ಗಂಟೆಯ ಸುಮಾರಿಗೆ ಕಳ್ಳರ ತಂಡವೊಂದು ಟವೇರಾ ಕಾರಿನಲ್ಲಿ ತೊಕ್ಕೊಟ್ಟು ಕಡೆ ಬರುತ್ತಿರುವ ಮಾಹಿತಿ ಪಡೆದಿದ್ದ ಪೊಲೀಸರು ಅದನ್ನು ಬೆನ್ನಟ್ಟಿದ್ದಾಗ ಅದು ತಲಪಾಡಿಯತ್ತ ವೇಗವಾಗಿ ಚಲಿಸಿತ್ತು. ಮೇಲ್ ತಲಪಾಡಿಯಲ್ಲಿ ಕಾರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾದ ಪೊಲೀಸರು ಪರಾರಿಯಾಗಲು ಯತ್ನಿಸುತ್ತಿದ್ದ ಈ ತಂಡದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನಿಬ್ಬರು ಅವರ ಕೈಗೆ ಸಿಗದೇ ಪರಾರಿಯಾಗಿದ್ದಾರೆ.
ಆರೋಪಿಗಳು ಅಪರಾತ್ರಿಯಲ್ಲಿ ಹಟ್ಟಿಗಳಿಗೆ ನುಗ್ಗಿ, ಮನೆಯವರಿಗೆ ಜೀವ ಬೆದರಿಕೆಯೊಡ್ಡಿ ಜಾನುವಾರುಗಳ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.
ಇರ್ಷಾದ್ ವಿರುದ್ಧ ದ.ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಜಾನುವಾರು, ಸರ ಕಳವಿಗೆ ಸಂಬಂಧಿಸಿದಂತೆ 15ಕ್ಕೂ ಅಧಿಕ ಪ್ರಕರಣಗಳಿವೆ. ಉಳ್ಳಾಲ ಠಾಣೆಯಲ್ಲಿ ಆತನ ವಿರುದ್ಧ ವಾರಂಟ್ ಇದ್ದು, ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.