ಮಂಗಳೂರು,ಜ.20: ಜಿಲ್ಲೆಯ ಮಲೆಕುಡಿಯ ಜನಾಂಗದವರಲ್ಲಿ ರಕ್ತಹೀನತೆಯಂತಹ ವಂಶವಾಹಿ ಕಾಯಿಲೆಗಳನ್ನು ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಕಾರ್ಯಕ್ರಮಕ್ಕೆ ಜ. 26 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ಅವರು ಮಂಗಳವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಪಂಗಡದ ಸೋಲಿಗ, ಜೇನುಕುರುಬ, ಕಾಡುಕುರುಬ, ಯರವ ಮತ್ತು ಮಲೆಕುಡಿಯ ಜನಾಂಗದವರಲ್ಲಿ ರಕ್ತಹೀನತೆಯಂತಹ ಕಾಯಿಲೆಗಳು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಈ ಜನಾಂಗದವರು ವಾಸಿಸುವ ಜಿಲ್ಲೆಗಳಲ್ಲಿ ಅವರ ಸಮಗ್ರ ಪಾಲನೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣ ನೀಡಲು ರಾಜ್ಯ ಸರಕಾರ ಯೋಜನೆ ರೂಪಿಸಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆಕುಡಿಯ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಜಿಲ್ಲೆಯಲ್ಲೂ ಈ ಬಗ್ಗೆ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ನಿಟ್ಟಿನಲ್ಲಿ ಸುಮಾರು 1.5 ಲಕ್ಷ ರೂ. ಬೆಲೆಯುಳ್ಳ ಎಲೆಕ್ಟ್ರೋಫೋರೆಟಿಕ್ ಯಂತ್ರ ಖರೀದಿಸಿ, ಆರೋಗ್ಯ ಇಲಾಖೆ ವಾಹನದ ಮೂಲಕ ಮಲೆಕುಡಿಯರ ಕಾಲನಿಗಳಿಗೆ ತೆರಳಿ, ಚಿಕಿತ್ಸೆ ನೀಡಲಾಗುವುದು. ಆರೋಗ್ಯ ಇಲಾಖೆ ಸಿಬಂದಿಗಳು ಇದರಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು.
ಮಲೆಕುಡಿಯ ಸಂಘಟನೆಗಳ ಮುಖಂಡರನ್ನೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದ.ಕ. ಜಿಲ್ಲೆಯಲ್ಲಿ 1,604 ಮಲೆಕುಡಿಯ ಕುಟುಂಬಗಳಿದ್ದು, ಸುಮಾರು 74 ಗ್ರಾಮ ಪಂಚಾಯತ್ಗಳಲ್ಲಿ ಮಲೆಕುಡಿಯ ಜನಾಂಗದವರು ವಾಸಿಸುತ್ತಿದ್ದಾರೆ.
ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ, ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಐ.ಟಿ.ಡಿ.ಪಿ. ಇಲಾಖೆ ಅಧಿಕಾರಿ ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು.