ಮಂಗಳೂರು,ಜ.20: ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಕಳೆದ ಒಂದು ವಾರದಿಂದ ಆಯೋಜಿಸಲಾದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಹಿನ್ನೆಲೆಯಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ಸಮಾರೋಪ ಸಮಾರಂಭವು ಮಂಗಳವಾರ ನಡೆಯಿತು.
ಬಸ್‌ಗಳಲ್ಲಿರುವ ಕರ್ಕಶ ಶಬ್ದಗಳಿಗೆ ಕಡಿವಾಣ ಹಾಕಲಾಗಿದ್ದು, ಕೆಲವೇ ದಿನಗಳಲ್ಲಿ ಇದನ್ನು ಪರಿಣಾಮಕಾರಿ ರೀತಿಯಲ್ಲಿ ಎಲ್ಲ ಬಸ್‌ಗಳಿಗೂ ಅನ್ವಯಿಸಿ ಕ್ರಮ ಕೈಗೊಳ್ಳಲಾಗುವುದು. ಪಂಪ್‌ವೆಲ್‌ನಿಂದ ತಲಪಾಡಿ, ಬಿ.ಸಿ. ರೋಡ್ ಹಾಗೂ ಸುರತ್ಕಲ್ ಹೆದ್ದಾರಿಯಲ್ಲಿ ಬಸ್ ನಿಲುಗಡೆಗೆ ಬಸ್ ಬೇ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವ ಚಾಲಕರ ಲೈಸನ್ಸನ್ನು 30ದಿನಗಳವರೆಗೆ ರದ್ದುಗೊಳಿಸಿವಂತೆ ನ್ಯಾಯಾಲಯವು ಅದೇಶಿಸಿದೆ ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಸಾರಿಗೆ ಪ್ರಾದೇಶಿಕ ಆಯುಕ್ತ (ಪ್ರಭಾರ)ಜಿ.ಎಸ್. ಹೆಗಡೆ ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಮಾತನಾಡಿ, ಸಂಚಾರಿ ನಿಯಮಗಳನ್ನು ಎಲ್ಲ ಸಾರ್ವಜನಿಕರು ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು. ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸರನ್ನು ಪುರಸ್ಕರಿಸಿದಂತೆ ಪೊಲೀಸರೊಂದಿಗೆ ಸಂಚಾರಿ ವ್ಯವಸ್ಥೆ ಸುಧಾರಿಸಲು ಪ್ರಯತ್ನಿಸುತ್ತಿರುವ ಸಾರ್ವಜನಿಕರನ್ನು ಕೂಡ ಗೌರವಿಸಿ ಅವರ ಕರ್ತವ್ಯ ಪ್ರಜ್ಞೆ ಗುರುತಿಸಬೇಕು ಎಂದು ಸಲಹೆ ನೀಡಿದರು.
ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ನಗರದ ವಿವಿಧ ಶಾಲೆಗಳಲ್ಲಿ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಚಾರಿ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಸಿಬಂದಿಗಳಾದ ನೀಲಪ್ಪ, ಸ್ಪೂರ್ತಿ ಹೆಗ್ಡೆ, ಬಾಬು ಶೆಟ್ಟಿ, ಯಶವಂತ್, ದಿನೇಶ್ ಪಿ. ಸನಿಲ್, ಉದಯ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಸ್.ಡಿ. ಶರಣಪ್ಪ, ಹೆಚ್ಚುವರಿ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ನೆಲ್ಸನ್ ಪಿರೇರಾ, ಸಂಚಾರಿ ಮುಖ್ಯ ಟ್ರಾಫಿಕ್ ವಾರ್ಡನ್ ಜೋ ಗೋನ್ಸಾಲ್ವಿಸ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.