ಕನ್ನಡ ವಾರ್ತೆಗಳು

ರಬ್ಬರ್‌ ಬೆಳೆಗಾರರಿಗೆ ಕೇರಳ ಮಾದರಿ ಪರಿಹಾರ ಪ್ಯಾಕೇಜ್‌ : ಪ್ರಕಾಶ್ ಕಮ್ಮರಡಿ

Pinterest LinkedIn Tumblr

Dc_meet_photo_1

ಮಂಗಳೂರು,ಜ.19:  ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಬ್ಬರ್‌ ಮಂಡಳಿಯ ಪುನಶ್ಚೇತನ ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮತ್ತು ಪರಿಹಾರ ಪ್ಯಾಕೇಜ್‌‌ನ್ನು ರಬ್ಬರ್ ಬೇಲೆಗಾರರಿಗೆ ನೀಡುವುದರ ಬಗ್ಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಬ್ಬರ್‌ ಮಂಡಳಿ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರಬ್ಬರ್‌ ಬೆಳೆಗಾರರ ಜೊತೆ ಸಭೆ ನಡೆಸಲಾಯಿತು.

ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಬ್ಬರ್‌ ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಪ್ಯಾಕೇಜ್‌ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್ ಕಮ್ಮರಡಿ ಈ ಸಂಧರ್ಭದಲ್ಲಿ ತಿಳಿಸಿದರು.

Dc_meet_photo_2 Dc_meet_photo_3

ರಬ್ಬರ್‌ ಬೆಳೆಯು ಕೃಷಿ ಬೆಲೆ ಆಯೋಗದ ವ್ಯಾಪ್ತಿಯಲ್ಲಿಲ್ಲ. ಆದರೂ, ರಾಜ್ಯದ ಆರು ಜಿಲ್ಲೆಗಳಲ್ಲಿ ರಬ್ಬರ್‌ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಲೆ ಕುಸಿತದಿಂದ ಆರ್ಥಿಕ ನಷ್ಟಕ್ಕೆ ಸಿಲುಕಿರುವ ಅವರನ್ನು ಪಾರು ಮಾಡಲು ದಾರಿಗಳಿವೆಯೇ ಎಂಬುದನ್ನು ಹುಡುಕಲು ಆಯೋಗ ಮುಂದಾಗಿದೆ. ರಬ್ಬರ್‌ ಉತ್ಪಾದನಾ ವೆಚ್ಚ ಕಡಿತಗೊಳಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಬೇಕಿದೆ. ಮಿಶ್ರ ಬೆಳೆಗಳ ಮೂಲಕ ರೈತರ ವರಮಾನ ಹೆಚ್ಚಳದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ವರ್ಷ ಪ್ರತಿ ಕೆ.ಜಿ. ರಬ್ಬರ್‌ ಉತ್ಪಾದನೆಗೆ ಕನಿಷ್ಠ 127 ವೆಚ್ಚವಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 84 ದರವಿದೆ. ಇದರಿಂದ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೇರಳದಲ್ಲಿ ಪ್ರತಿ ಕೆ.ಜಿ. ರಬ್ಬರ್‌ಗೆ 150 ಬೆಂಬಲ ಬೆಲೆ ಘೋಷಿಸಿದ್ದು, ಮಾರುಕಟ್ಟೆ ದರ ಕುಸಿದಾಗ 150ಕ್ಕೆ ಹೊಂದಿಕೆಯಾಗುವಂತೆ ಸಹಾಯಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪರಿಹಾರ ಪ್ಯಾಕೇಜ್‌ ರೂಪಿಸಬೇಕು ಎಂದು ರಾಜ್ಯ ರಬ್ಬರ್‌ ಬೆಳೆಗಾರರ ಸಂಘದ ಪ್ರತಿನಿಧಿಗಳು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆಂಪೇ ಗೌಡ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

Write A Comment