
ಮಂಗಳೂರು : ಕಾಶೀಮಠ ಸಂಸ್ಥಾನದ ಧರ್ಮಗುರು ಹಾಗೂ ಗೌಡ ಸಾರಸ್ವತ್ ಸಮುದಾಯದ ಆರಾಧ್ಯ ಪೀಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿ (90ವರ್ಷ) ಭಾನುವಾರ ಬೆಳಗಿನ ಜಾವ ವೃಂದಾವನಸ್ಥರಾಗಿರುವುದಾಗಿ ಕಾಶಿಮಠದ ಮೂಲಗಳು ತಿಳಿಸಿವೆ.
ಅನಾರೋಗ್ಯದ ಕಾರಣದಿಂದ ಸ್ವಾಮೀಜಿಗೆ ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರ ಅಂತಿಮ ಆಸೆಯಂತೆ ಅವರ ಶಿಷ್ಯಂದಿರು ಹರಿದ್ವಾರದಲ್ಲಿರುವ ಶ್ರೀ ವ್ಯಾಸ ಆಶ್ರಮಕ್ಕೆ ಶುಕ್ರವಾರ ಬೆಳಗ್ಗೆ ಕರೆತಂದಿದ್ದರು. ಏರ್ ಆಂಬ್ಯುಲೆನ್ಸ್ ನಲ್ಲಿ ಹರಿದ್ವಾರಕ್ಕೆ ಕರೆದೊಯ್ಯಲಾಗಿತ್ತು.


ಶ್ರೀ ಸಂಸ್ಥಾನ ಕಾಶೀಮಠಾಧೀಶರಾಗಿದ್ದ ಸುಧೀಂದ್ರ ತೀರ್ಥ ಸ್ವಾಮಿ ಕೇರಳದ ಎರ್ನಾಕುಳಂನಲ್ಲಿ ಜನಿಸಿದ್ದರು. ಸುಧೀಂದ್ರ ತೀರ್ಥರು ಕಾಶಿ ಮಠದ 20ನೇ ಯತಿಗಳಾಗಿದ್ದಾರೆ. ಕಾಶೀ ಮಠದಲ್ಲಿ ದೀರ್ಘಕಾಲದ ಸೇವೆ ನೀಡಿದ ಹೆಗ್ಗಳಿಕೆ ಸ್ವಾಮಿ ಸುಧೀಂದ್ರ ತೀರ್ಥ ಅವರದ್ದಾಗಿದೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂತಾಪ :
ಕಾಶಿಮಠಾಧೀಶರಾದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರು ವೃಂದಾವನಸ್ಥರಾದ ವಿಷಯ ದು:ಖವನ್ನು ತಂದಿದೆ. ಶ್ರೀಯುತರು ಗೌಡ ಸರಸ್ವತ ಬ್ರಾಹ್ಮಣರ ಸಮುದಾಯಕ್ಕೆ ಮಾತ್ರ ಸೀಮೀತರಾಗಿರದೆ ಸಮಸ್ಥ ಹಿಂದೂ ಬಾಂಧವರ ಯತಿಗಳೂ ಆಗಿದ್ದರು. ಅವರ ನಿಧನದಿಂದ ದೇಶ ಅಮೋಘ ರತ್ನವೊಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.
ಶ್ರೀಗಳ ಅಸಂಖ್ಯಾತ ಭಕ್ತ ವೃಂದದವರಿಗೂ ಹಾಗೂ ಅವರ ಶಿಷ್ಯಂದಿರಿಗೂ ಅವರ ನಿಧನದ ದು:ಖವನ್ನು ಪರಮಾತ್ಮ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಾ ಶ್ರೀಗಳ ದಿವ್ಯಾತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತೇನೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಆಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಸಂತಾಪ ಸೂಚಿಸಿದ್ದಾರೆ.
ಚಿತ್ರ ಕೃಪೆ : ಮಂಜು ನಿರೇಶ್ವಾಲ್ಯ