ಕುಂದಾಪುರ: ರಾಜ್ಯಾದ್ಯಂತ ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳು ಜಾಸ್ಥಿಯಾಗುತ್ತಿದ್ದು ಈ ಬಗ್ಗೆ ಸರಕಾರ ಹಾಗೂ ಇಲಾಖೆ ಸೂಕ್ತ ಕ್ರಮಕೈಗೊಂಡಿಲ್ಲ. ಬರ ಮೊದಲಾದ ಸಮಸ್ಯೆಗಳಿಂದ ಜನರು ಹೈರಾಣಾಗಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲ, ಸಂಪನ್ಮೂಲ ಕ್ರೋಡೀಕರಣದಲ್ಲಿ ಸರಕಾರ ವಿಫಲವಾಗಿದ್ದು ಯಾವುದೇ ಇಲಾಖೆಯಲ್ಲಿಯೂ ಅಭಿವ್ರದ್ಧಿ ಕಾರ್ಯಕ್ರಮಗಳು ಆಗುತ್ತಿಲ್ಲ. ವಿಧಾನಸೌಧದಲ್ಲಿ ಯಾರೂ ಸಿಗುತ್ತಿಲ್ಲ, ಅಧಿಕಾರಿಗಳ ವರ್ಗಾವಣೆಯಲ್ಲಿಯೇ ಸರಕಾರ ಕಾಲ ಕಳೆಯುತ್ತಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸರಕಾರ ಇದ್ದು ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ಅವರು ಸುದ್ದಿಗರರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರದ ಈ ಧೋರಣೆಗೆ ಜನರು ಈಗಾಗಲೇ ಬೇಸರಗೊಂಡಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲಕರವಾಗುವ ರೀತಿಯಲ್ಲಿಯೇ ವ್ಯವಸ್ಥೆಗಳಿರುತ್ತದೆ ಆದರೇ ಈ ಬಾರೀ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಬಹುತೇಕ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುದ್ದೆ ನೀಡುವುದು ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು, ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದು ಹಾಗೂ ಪಕ್ಷ ಸಂಘಟನೆ ನನ್ನ ಮೊದಲ ಗುರಿಯಾಗಿದ್ದು ಅದರತ್ತ ಗಮನ ಕೊಡುತ್ತಿದ್ದೇನೆ. ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಬೈಂದೂರು ಕ್ಷೇತ್ರದ ಕೆರಾಡಿಯನ್ನು ಆದರ್ಶ ಗ್ರಾಮವಾಗಿ ಸ್ವೀಕರಿಸಿ ಅದರ ಅಭಿವ್ರದ್ಧಿಗೆ ಈಗಾಗಲೇ ಕಾಯಕಲ್ಪ ರೂಪಿಸಿದ್ದು ೨ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ, ಅಲ್ಲದೇ ವಿಧಾನ ಪರಿಷತ್ ಸದಸ್ಯರಿಂದ ತಲಾ ೨೫ ಲಕ್ಷ ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ ಎಂದರು.
ಸ್ನೇಹಿತರಾದ ರಾಘವೇಂದ್ರ ರಾವ್ ಅವರು ಆನೆಗುಡ್ಡೆಯಲ್ಲಿ ನಡೆಸಿದ ೧೦೦೮ ಕಾಯಿ ಗಣಹೋಮದಲ್ಲಿ ಬೆಳಿಗ್ಗೆನಿಂದಲೂ ಪಾಲ್ಘೊಂಡ ಅವರು ಮಧ್ಯಾಹ್ನ ನಡೇದ ಪೂರ್ಣಾಹುತಿಯವರೆಗೂ ತನ್ನ ಕುಟುಂಬಿಕರೊಡನೆ ಉಪಸ್ಥಿತರಿದ್ದರು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಬಿ.ಎಸ್.ವೈ. ಕುಟುಂಬಿಕರನ್ನು ಬರಮಾಡಿಕೊಂಡು ದೇವಳದ ವತಿಯಿಂದ ಅಭಿನಂದಿಸಿದರು. ಕುಂಭಾಸಿ ಶ್ರೀ ಹರಿಹರ ದೇವಸ್ಥಾನಕ್ಕೂ ಬಿ.ಎಸ್.ವೈ. ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಕ್ಕಳಿಗೆ ಪೋಲಿಯೊ ಡ್ರಾಪ್: ಇದೇ ಸಂದರ್ಭ ಆನೆಗುಡ್ಡೆ ದೇವಳದ ಆವರಣದಲ್ಲಿ ಫಲ್ಸ್ ಪೊಲಿಯೋ ಲಸಿಕೆ ಹಾಕುವ ಕಾರ್ಯವಾಗುತ್ತಿದ್ದು ಅಲಿಗೆ ತೆರಳಿದ ಬಿ.ಎಸ್.ವೈ. ಮಕ್ಕಳಿಗೆ ಪೊಲಿಯೋ ಡ್ರಾಪ್ ಹಾಕಿ ಮಕ್ಕಳನ್ನು ಮುದ್ದು ಮಾಡಿದರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಸೊಸೆಯರಾದ ತೇಜಸ್ವಿನಿ ರಾಘವೇಂದ್ರ, ಪ್ರೇಮಾ ವಿಜಯೇಂದ್ರ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮೊದಲಾದವರು ಇದ್ದರು.
ಚಿತ್ರ,ವರದಿ- ಯೋಗೀಶ್ ಕುಂಭಾಸಿ