ಮಂಗಳೂರು: ತುಳುವರು ಭಾಷಾಭಿಮಾನ ಬೆಳೆಸಿ ಕೊಳ್ಳಬೇಕು. ತುಳುಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಬಿಡುಗಡೆಗೊಳ್ಳಬೇಕು. ಸೀಮಿತ ಮಾರುಕಟ್ಟೆಯಿದ್ದರೂ ತುಳುಭಾಷೆಯ ಸಿನಿಮಾಗಳು ಇಂದು ಸುದ್ದಿ ಮಾಡುತ್ತಿರುವುದು ಸಂತಸದ ಸಂಗತಿ. ಉತ್ತಮ ಸಂದೇಶ, ಅಭಿರುಚಿ ಹೊಂದಿರುವ ಸಿನಿಮಾಗಳನ್ನು ತುಳುವರು ಮುಕ್ತ ಮನಸ್ಸಿನಿಂದ ಖಂಡಿತಾ ಸ್ವೀಕರಿಸುತ್ತಾರೆ ಎಂದು ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ ರೈ ಅವರು ಅಭಿಮತ ವ್ಯಕ್ತಪಡಿಸಿದರು.
ನಗರದ ಪಿವಿಆರ್ ಸಿನಿಮಾ ಥಿಯೇಟರ್‌ನಲ್ಲಿ ‘ಜೈ ತುಳುನಾಡು’ ಚಿತ್ರದ ಪ್ರೀಮಿಯರ್ ಶೋ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗದಲ್ಲಿ ತುಳು ಸಿನಿಮಾ ಮಾಡಿ ಜನರ ವಿಶ್ವಾಸಗಳಿಸಿ ಯಶಸ್ಸು ಸಾಧಿಸುವುದು ಬಹು ದೊಡ್ಡ ಸಾಧನೆ ಎಂದು ರಮಾನಾಥ ರೈ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು, ‘ಜೈ ತುಳುನಾಡು ಚಿತ್ರ ನಿರ್ಮಾಪಕ ಫ್ರ್ಯಾಂಕ್ ಫೆರ್ನಾಂಡಿಸ್ ಅವರು ಈಗಾಗಲೇ ಕೊಂಕಣಿ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ತುಳು ಭಾಷೆಯಲ್ಲೂ ಚಿತ್ರ ನಿರ್ಮಿಸಿ ತುಳುನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ತುಳುಭಾಷೆಯಲ್ಲಿ ಹೆಚ್ಚಿನ ಸಿನಿಮಾಗಳು ಬಂದು ಭಾಷೆ ಮತ್ತು ತುಳುನಾಡಿಗೆ ಹೆಚ್ಚಿನ ಸ್ಥಾನಮಾನ ಸಿಗುವಂತಾಗಲಿ’ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಗಾಯಕ ಹರೀಶ್ ಶೇರಿಗಾರ್, ಜಗದೀಶ್ ಅಧಿಕಾರಿ, ಡಾ.ರಿಚರ್ಡ್ ಕ್ಯಾಸ್ತಲಿನೋ, ನಿರ್ಮಾಪಕ ಫ್ರ್ಯಾಂಕ್ ಫೆರ್ನಾಂಡಿಸ್, ಸಹನಿರ್ಮಾಪಕ ಶಿವಣ್ಣ, ನಿರ್ದೇಶಕ ಪ್ರವೀಣ್ ತೊಕ್ಕೊಟ್ಟು, ನಾಯಕ ನಟ ಅವಿನಾಶ್ ಶೆಟ್ಟಿ, ನಟಿ ಸೋನಲ್ ಮೊಂತೇರೋ, ವಿಜಯ್ ಕುಮಾರ್ ಶೆಟ್ಟಿ ಮುಂಬೈ, ನವೀನ್ ಡಿ.ಪಡೀಲ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಂತೋಷ್ ಶೆಟ್ಟಿ, ಸರೋಜಿನಿ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರ್ವಹಿಸಿದರು. ಅವಿನಾಶ್ ಶೆಟ್ಟಿ ವಂದಿಸಿದರು.
11 ಥಿಯೇಟರ್‌ಗಳಲ್ಲಿ ಜೈ ತುಳುನಾಡು ಏಕಕಾಲದಲ್ಲಿ ಬಿಡುಗಡೆ:
ಫರ್‌ನ್ಸ್ ಮೂವಿ ಇಂಟರ್‌ನ್ಯಾಶನಲ್ ಅರ್ಪಿಸುವ ‘ಜೈತುಳುನಾಡು’ ತುಳು ಚಲನ ಚಿತ್ರ ಕರಾವಳಿ ಜಿಲ್ಲೆ ಯಾದ್ಯಂತ ಏಕ ಕಾಲದಲ್ಲಿ ೧೧ ಟಾಕೀಸ್‌ಗಳಲ್ಲಿ ಬಿಡುಗಡೆಗೊಂಡಿದೆ ಎಂದು ಚಿತ್ರದ ನಿರ್ಮಾಪಕ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಉಡು ಪಿಯಲ್ಲಿ ಕಲ್ಪನಾ, ಮೂಡಬಿದ್ರೆ ಯಲ್ಲಿ ಅಮರಶ್ರೀ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ರಾಧಿಕಾ, ಸುರತ್ಕಲ್‌ನಲ್ಲಿ ನಟರಾಜ ಹಾಗೂ ಮಣಿಪಾಲದಲ್ಲಿ ಐನಾಕ್ಸ್ ಚಿತ್ರ ಮಂದಿರದಲ್ಲಿ ಜೈತುಳುನಾಡು ತೆರೆ ಕಂಡಿದೆ.
ಪ್ರವೀಣ್ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾದಲ್ಲಿ ಒಟ್ಟು ೭ ಹಾಡುಗಳಿವೆ. ಸಿನಿಮಾದಲ್ಲಿ ಅವಿನಾಶ್ ಶೆಟ್ಟಿ ನಾಯಕ ನಟ ನಾಗಿಯೂ ಸೋನಾಲ್ ಮೊಂತೆರೊ ನಾಯಕಿ ಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್, ಅರವಿಂದ್‌ಬೋಳಾರ್,ಮನಮೋಹನ್ ರೈ, ಸಂತೋಷ್ ಶೆಟ್ಟಿ, ಫ್ರಾಂಕ್ ಫೆರ್ನಾಂಡಿಸ್, ಪ್ರವೀಣ್, ಭವ್ಯ, ಸರೋಜಿನಿ ಶೆಟ್ಟಿ, ನಯನ, ಶ್ರೇಯಾ ಅಂಚನ್ ಅಭಿನಯಿಸಿದ್ದಾರೆ.
ದೇವಿ ಪುತ್ತೂರು ಕಥೆ, ಎಸ್. ಎಸ್.ಡೇವಿಡ್ ಮತ್ತು ಪ್ರವೀಣ್ ಸಂಭಾಷಣೆ ಗೌರಿವೆಂಕಟೇಶ್ ಛಾಯಾಗ್ರಹಣ, ಶಿವರಾಜು ಮೇಹು ಸಂಕಲನ, ಕೌರವ ವೆಂಕಟೇಶ್ ಸಾಹಸ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತದಲ್ಲಿ ಸಹಕರಿಸಿದ್ದಾರೆ. ಎನ್.ಜಿ.ಶಿವಣ್ಣ ರಾಜ ಸುಲೋಚನ ನಂದಿಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ.
ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದ ವ್ಯಕ್ತಿಯೊಬ್ಬ ತನಗೆ ಅದು ಸಾಧ್ಯವಾಗದೇ ಇದ್ದಾಗ ತನ್ನ ಮಗನಲ್ಲಿ ಆ ಕನಸು ತುಂಬಿ ಮಗನನ್ನು ದಕ್ಷ ಪೊಲೀಸ್ ಅಧಿಕಾರಿ ಯನ್ನಾಗಿ ಮಾಡುವುದರ ಸುತ್ತ ಚಿತ್ರದ ಕತೆ ಸಾಗುತ್ತದೆ. ಸಿನಿಮಾದಲ್ಲಿ ಹಾಡು, ಫೈಟ್, ಹಾಸ್ಯ ಹಾಗೂ ಸಮಾಜಕ್ಕೂ ಒಳ್ಳೆಯ ಸಂದೇಶವೂ ಇದೆ ಎಂದು ನಿರ್ದೇಶಕ ಪ್ರವೀಣ್ ತಿಳಿಸಿದ್ದಾರೆ.