ಕನ್ನಡ ವಾರ್ತೆಗಳು

ಹೆಲ್ಮೆಟ್ ಕಡ್ಡಾಯ : ಅಂಗಡಿಗಳಲ್ಲಿ ಮುಗಿಬಿದ್ದ ದ್ವಿಚಕ್ರ ಸವಾರರು

Pinterest LinkedIn Tumblr

helmet_shop_pic

ಮಂಗಳೂರು, ಜ.14: ರಾಜ್ಯ ಸರ್ಕಾರದ ಅಧಿಸೂಚನೆಯೊಂದರಂತೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದ್ದು, ನಗರದ ವಾಹನ ಬಿಡಿ ಭಾಗಗಳ ಮಾರಾಟದಂಗಡಿಗಳಲ್ಲಿ ಈಗ ಹೆಲ್ಮೆಟ್ ಮಾರಾಟ ಭರಾಟೆ ಆರಂಭಗೊಂಡಿದೆ.

ಐಎಸ್‍ಐ ಮಾರ್ಕಿನ ಹೆಲ್ಮೆಟ್‍ಗೆ 1,000 ರೂ ಹಾಗೂ 10 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರ ಹೆಲ್ಮೆಟ್‍ಗೆ 600 ರೂವರೆಗೆ ಇದೆ. ಆದರೆ ಇದುವರೆಗೂ ನಗರದಲ್ಲಿ ಮಕ್ಕಳು ಧರಿಸುವ ಐಎಸ್‍ಐ ಮಾರ್ಕಿನ ಹೆಲ್ಮೆಟ್ ಲಭ್ಯವಿಲ್ಲ ಎಂದು ನಗರದ ಡೀಲರರೊಬ್ಬರು ಹೇಳುತ್ತಾರೆ.

ಹೆಲ್ಮೆಟ್ ಧರಿಸುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ವಾಹನಿಗರು ಅಥವಾ ಸಾರಿಗೆ ಪ್ರಾಧಿಕಾರ, ಇಲ್ಲವೇ ಪೊಲೀಸರು ಈ ಬಗ್ಗೆ ನಿನ್ನೆ-ಮೊನ್ನೆಯವರೆಗೂ ಕ್ರಮಕ್ಕೆ ಮುಂದಾಗದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಆದರೆ, ಸುಪ್ರೀಂ ಆದೇಶದಂತೆ ರಾಜ್ಯ ಸರ್ಕಾರ 2015 ಡಿಸೆಂಬರ್ 31ರಂದು ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದ ಬಳಿಕ ಅಧಿಕಾರಿ ವರ್ಗ ಎಚ್ಚೆತ್ತುಕೊಂಡಿದೆ. ಅಧಿಸೂಚನೆಯಂತೆ ನಗರದಲ್ಲೂ ಮಂಗಳವಾರದಿಂದ ಹೆಲ್ಮೆಟ್ ಕಡ್ಡಾಯ ಜಾರಿಯಾಗಿದೆ. ಆದರೆ,…

ಹೆಲ್ಮೆಟ್ ಕಡ್ಡಾಯಗೊಂಡಿದ್ದರೂ ಈತನಕ ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನಿಗರ ಸಂಖ್ಯೆಯಲ್ಲಿ ಹೇಳಿಕೊಳ್ಳುವಂತಹ ಹೆಚ್ಚಳವಾಗಿಲ್ಲ ; ಬದಲಾಗಿ ಹೆಲ್ಮೆಟ್ ಖರೀದಿ ಒಂದಷ್ಟು ಹೆಚ್ಚಿದೆ. ವಾಹನಗಳ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಅಧಿಕಗೊಂಡಿದೆ. ಇದರಲ್ಲಿ ದ್ವಿಚಕ್ರ ವಾಹನಿಗರ ಪಾಲು ಜಾಸ್ತಿ ಇರುವುದರಿಂದ ಸರ್ಕಾರ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ತೀರ್ಮಾನಕ್ಕೆ ಬಂದಿದೆ.

ನಗರದಲ್ಲಿ ಮೊದಲ ಕೆಲವು ದಿನ ಪೊಲೀಸರು ಹೆಲ್ಮೆಟ್‍ರಹಿತ ವಾಹನಿಗರಿಗೆ ಎಚ್ಚರಿಕೆ ನೀಡಲಿದ್ದಾರೆ. ಒಂದು ವಾರ ನಡೆಯಲಿರುವ ಜಾಗೃತಿ ಕಾರ್ಯಕ್ರಮದ ಬಳಿಕ ಕಾಯ್ದೆ ಉಲ್ಲಂಘಿಸುವ ವಾಹನಿಗರ ಮೇಲೆ ಪೊಲೀಸರು ದಂಡ ಶುಲ್ಕ ಹೇರಲಿದ್ದಾರೆ.

ಹೆಲ್ಮೆಟ್ ಕಡ್ಡಾಯಗೊಳಿಸಲಾದ ಬಳಿಕ ಹೆಲ್ಮೆಟ್ ಲಾಕ್‍ಗಳಿಗೂ ಬೇಡಿಕೆ ಬಂದಿದೆ. ಈ ಕಾನೂನು ದೇಶಾದ್ಯಂತ ಜಾರಿಗೆ ಬಂದಿರುವುದರಿಂದ ಹೆಲ್ಮೆಟ್ ತಯಾರಕ ಕಂಪೆನಿಗಳಿಂದ ಬೇಡಿಕೆಗೆ ತಕ್ಕಷ್ಟು ಹೆಲ್ಮೆಟ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ನಗರದ ಮತ್ತೊಬ್ಬ ಡೀಲರ್ ಹೇಳುತ್ತಾರೆ.

ಅಪಘಾತಗಳ ಸಂದರ್ಭದಲ್ಲಿ ವಾಹನಿಗರ ಸಾವು-ನೋವಿನ ಮೇಲೆ ನಿಯಂತ್ರಣ ದೃಷ್ಟಿಯಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಉತ್ತಮ ಬೆಳವಣಿಗೆ ಎಂದು ಕೆಲವರು ಹೇಳಿದರೆ, “ಹೆಲ್ಮೆಟ್ ಕಳ್ಳರ ಹಾವಳಿ ಬಗ್ಗೆ ಒಂದಷ್ಟು ಮಂದಿ ಚಿಂತಾಕ್ರಾಂತರಾಗಿದ್ದಾರೆ.

Write A Comment