
ಮಂಗಳೂರು, ಜ.14: ಎತ್ತಿನಹೊಳೆ ಯೋಜನೆ ವಿರೋಧಿಸಿ ಕೇವಲ ಹೋರಾಟ ನಡೆಸುವ ಸಂಸದರು ಜನರ ದಾರಿತಪ್ಪಿಸುತ್ತಿದ್ದಾರೆ. ಅಂತಹವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಗ್ರಹಿಸಿದರು.
ದ.ಕ. ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಚಿಕ್ಕಬಳ್ಳಾಪುರದಲ್ಲಿ ನೀಡಿದ ಹೇಳಿಕೆ ಮೂಲಕ ಬಿಜೆಪಿಯ ದ್ವಂದ್ವ ನೀತಿ ವ್ಯಕ್ತವಾಗಿದೆ ಎಂದು ಐವನ್ ಟೀಕಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಓಟಿಗಾಗಿ ಹೋರಾಟದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಆದರೆ ಅವರದೇ ಪಕ್ಷದ ಸಿ.ಟಿ. ರವಿ ಅವರು `ಯೋಜನೆಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದ್ದು, ಇದು ಬಿಜೆಪಿ ಹಾಕಿದ ಬೀಜವಾಗಿದೆ’ ಎಂದಿರುವುದು ಬಿಜೆಪಿಯ ಬಣ್ಣ ಬಯಲು ಮಾಡಿದೆ ಎಂದು ಲೇವಡಿ ಮಾಡಿದರು.

ಯೋಜನೆ ವಿರೋಧಿಸಿ ಹೋರಾಟ ಮಾಡಿದ ಬಿಜೆಪಿಯವರು ಅಧಿವೇಶನದಲ್ಲಿ ಎತ್ತಿನಹೊಳೆ ವಿಚಾರದಲ್ಲಿ ಯಾಕೆ ಮಾತನಾಡಿಲ್ಲ ಎಂದವರು ಪ್ರಶ್ನಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವಿರೋಧಿಸಿ ಕೇವಲ ಹೋರಾಟ ನಡೆಸುವ ಮೂಲಕ ಜನರನ್ನು ದಾರಿತಪ್ಪಿಸುತ್ತಿರುವ ಸಂಸದರು ಈಗಲಾದರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಾನು ಜನರ ಪರವಾಗಿದ್ದೇನೆ ಎಂಬುದನ್ನು ತಿಳಿಸಬೇಕು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರು ಎತ್ತಿನಹೊಳೆ ವಿಚಾರದಲ್ಲಿ ತಮ್ಮ ನಿಲುವು ವ್ಯಕ್ತಪಡಿಸಬೇಕು ಎಂದವರು ಆಗ್ರಹಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಜಿ.ಪಂ. ಸದಸ್ಯ ಮೆಲ್ವಿನ್ ಡಿ’ಸೋಜಾ, ತಾ.ಪಂ. ಸದಸ್ಯ ಕ್ಲೇರಾ ಕುವೆಲ್ಲೊ, ಕಾಂಗ್ರೆಸ್ ಮುಖಂಡರಾದ ಸಾಹುಲ್ ಹಮೀದ್, ಹೇಮಾ ಯು., ಪದ್ಮನಾಭ ನರಿಂಗಾನ, ನಾಗೇಂದ್ರ ಕುಮಾರ್, ಶೋಭಾ ಪಡೀಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.