
(ಸಾಂದರ್ಭಿಕ ಚಿತ್ರ)
ಉಡುಪಿ: ಖಾತೆ ಬದಲಾವಣೆಗೆ ವ್ಯಕ್ತಿಯಿಂದ ಲಂಚ ಪಡೆದ ಸಮಯ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗೆ ನ್ಯಾಯಾಲಯವು ಒಂದು ವರ್ಷ ಸಜೆ ಹಾಗೂ ಐದು ಸಾವಿರ ದಂಡ ವಿಧಿಸಿದೆ.
ಅಜೆಕಾರು-ಮರ್ಣೆ ನಾಡಕಚೇರಿಯ ಕಂದಾಯ ನಿರೀಕ್ಷಕ ತ್ರಿವಿಕ್ರಮ ಅಡಿಗ ಶಿಕ್ಷೆಗೊಳಗಾದವರು.
ಘಟನೆ ವಿವರ: ಉಡುಪಿ ಲೋಕಾಯುಕ್ತ ಠಾಣೆಯಲ್ಲಿ 2012 ರ ಮಾರ್ಚ್ 5 ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮ, ರೆಂಜ ಮನೆಯ ನಿವಾಸಿ ಚಂದ್ರ ಶೇಖರ್ ನಾಯಕ್ ಅವರ ದೂರಿನ ಮೇರೆಗೆ ಅ.ಕ್ರ 2/2012 ಕಲಂ: 7,13(1)(ಡಿ) ಜೊತೆಗೆ 13(2) ಲಂಚ ನಿರೋಧ ಕಾಯ್ದೆ 1988 ರಂತೆ ಪ್ರಕರಣ ದಾಖಲಾಗಿತ್ತು. ಚಂದ್ರಶೇಖರ್ ನಾಯಕ್ ರವರು ಕಾರ್ಕಳ ತಾಲೂಕು, ಹೆರ್ಮುಂಡೆ ಗ್ರಾಮದ ಸರ್ವೆ ನಂಬ್ರ 9 ಹಾಗೂ 127 ರಲ್ಲಿನ 8.45 ಎಕ್ರೆ ಜಗವನ್ನು ಮಾನ್ಯ ಸಿವಿಲ್ ನ್ಯಾಯಾಲಯವು ಫಿರ್ಯಾದುದಾರರ ಹೆಸರಿಗೆ ಆದೇಶಿಸಿದ್ದು, ಸದರಿ ಜಾಗದ ಖಾತೆ ಬದಲಾವಣೆ ಬಗ್ಗೆ ಅಜೆಕಾರು/ ಮರ್ಣೆ ನಾಡಕಚೇರಿಯ ಕಂದಾಯ ನಿರೀಕ್ಷಕರಾದ ತ್ರಿವಿಕ್ರಮ ಅಡಿಗ ರವರು ತನಗೆ ರೂ.2000 ಹಾಗೂ ಗ್ರಾಮಕರಣಿಕರಿಗೆ ರೂ.1000 ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು.
ಕರ್ನಾಟಕ ಲೋಕಾಯುಕ್ತ ಉಡುಪಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಪಿ.ದಿನೇಶ್‌ಕುಮಾರ್‌ರವರು ದೂರನ್ನು ದಾಖಲಿಸಿಕೊಂಡು ಆರೋಪಿಯು ಹಣ ಸ್ವೀಕರಿಸಿದ ಸಮಯ ಬಲೆ ಬೀಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಹಾಗೂ ತನಿಖೆಯನ್ನು ಪೂರೈಸಿ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಕ್ಕೆ ಸಲ್ಲಿಸಿದ್ದರು.
ಈ ಪ್ರಕರಣವು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿಯಲ್ಲಿ ವಿಚಾರಣೆಗೆ ಒಳಪಟ್ಟು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್.ಬಿ.ಅಮರಣ್ಣನವರ್ ರವರು ಆರೋಪಿಗೆ ಕಲಂ: 7 ಲಂಚ ನಿರೋಧ ಕಾಯ್ದೆ 1988 ರಲ್ಲಿ 1 ವರ್ಷ ಶಿಕ್ಷೆ ಹಾಗೂ 5000/- ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚಿನ 1 ತಿಂಗಳು ಸಾದಾ ಸಜೆಯನ್ನು ವಿಧಿಸಿರುತ್ತಾರೆ. ಎರಡೂ ಶಿಕ್ಷೆಗಳನ್ನು Concurrently ಎಂದು ತೀರ್ಪು ನೀಡಿರುತ್ತಾರೆ.
ಉಡುಪಿ ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ರವರಾದ ವಿಜಯಕುಮಾರ್ ಶೆಟ್ಟಿ ರವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದರು.