ಉಳ್ಳಾಲ : ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕಿಗೆ ದುಷ್ಕರ್ಮಿಗಳಿಂದ ಬೆಂಕಿ ಹಚ್ಚಿದ ಘಟನೆ ಸೋಮವಾರ ರಾತ್ರಿ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಮದಕ ಎಂಬಲ್ಲಿ ನಡೆದಿದೆ.
ಮದಕ ನಿವಾಸಿ ಜಬ್ಬಾರ್ (ಹೈದರ್) ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬೈಕ್ ಮತ್ತು ಇನೋವಾ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲೆ ಮನೆಗೂ ಆವರಿಸಿ ಗೋಡೆಯೂ ಬಿರುಕು ಬಿಟ್ಟಿದೆ. ಘಟನೆಯಿಂದ 10 ಲಕ್ಷ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.
ಸೋಮವಾರ ರಾತ್ರಿ ಮನೆಮಂದಿ ಮಲಗಿದ ಬಳಿಕ ಸುಮಾರು 1:30ರ ವೇಳೆ ಕೃತ್ಯ ನಡೆದಿದೆ. ಬೆಂಕಿ ಉರಿಯುತ್ತಿರುವುದನ್ನು ನೆರೆಮನೆಯ ಬಾಲಕನೋರ್ವ ಗಮನಿಸಿ ಬೊಬ್ಬೆ ಹಾಕಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ಹಾಗೂ ಸ್ಥಳೀಯರು ಸೇರಿ ಮನೆಗೂ ತಗಲುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಅಮಲು ಪದಾರ್ಥ ಸೇವಿಸುವ ಯುವಕರ ಕೃತ್ಯ:
ಪೆಟ್ರೋಲ್ ಕಳವು ನಡೆಸಲು ಬಂದವರಿಂದ ಈ ಕೃತ್ಯ ನಡೆದಿದೆ ಅನ್ನುವ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಭಾಗದಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳರ ಜಾಲ ಸಕ್ರಿಯವಾಗಿದೆ. ಅಮಲು ಪದಾರ್ಥ ಸೇವಿಸುವ ಯುವಕರ ತಂಡ ಮನೆ ಆವರಣದಲ್ಲಿ ನಿಲ್ಲಿಸುವ ವಾಹನಗಳಲ್ಲಿರುವ ಪೆಟ್ರೋಲ್ ಕಳವುಗೈಯ್ಯುತ್ತಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದೆ. ಜಬ್ಬಾರ್ ಅವರ ಮನೆಗೂ ಬೈಕಿನಿಂದ ಪೆಟ್ರೋಲ್ ಕಳವು ನಡೆಸಲು ಬಂದ ತಂಡ ಲೈಟರ್ ಅನ್ನು ಉರಿಸಿರುವುದರಿಂದ ವಾಹನಗಳಿಗೆ ಬೆಂಕಿ ತಗಲಿರುವ ಶಂಕೆ ಮನೆಮಂದಿ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಂಕೆಯ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.