ಕನ್ನಡ ವಾರ್ತೆಗಳು

ದೈವ ದೇವರುಗಳ ಸಾನಿಧ್ಯದಲ್ಲಿ ಸಿಗುವ ನೆಮ್ಮದಿ ಶಾಶ್ವತ : ಒಡಿಯೂರು ಶ್ರೀ

Pinterest LinkedIn Tumblr

Souterpete_brhammkalasa

ಮಂಗಳೂರು: ಇಂದು ಜಗತ್ತಿನಲ್ಲಿ ಅಹಂಭಾವವು ಅತಿಯಾದ ಕಾರಣ ಮನುಷ್ಯ ಮಾನವೀಯತೆಯನ್ನು ಮರೆತಿದ್ದಾರೆ. ಇದರಿಂದಾಗಿ ಇಡೀ ಸಮಾಜದಲ್ಲಿ ಗೊಂದಲಮಯ ವಾತಾವರಣ ಉಂಟಾಗಿ ನೆಮ್ಮದಿಯ ಅರಸುವಿಕೆ ಶುರುವಾಗಿದೆ. ಇತರ ತಾತ್ಕಾಲಿಕ ನೆಮ್ಮದಿಗಿಂತ ದೈವ ದೇವರುಗಳ ಸಾನಿಧ್ಯದಲ್ಲಿ ಸಿಗುವ ನೆಮ್ಮದಿ ಶಾಶ್ವತವಾದುದು ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಅವರು ಸೂಟರ್ ಪೇಟೆಯ ಶ್ರೀ ಕೋರ್‍ದಬ್ಬು ದೈವಸ್ಥಾನದ ಪುನಃ ಪ್ರತಿಷ್ಠಾಪನಾ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನವಿತ್ತರು.

ಇಂದು ಮನೆಗಳಲ್ಲಿ ಧರ್ಮ ಮತ್ತು ಧಾರ್ಮಿಕ ಜಾಗೃತಿ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆಗಳಲ್ಲಿ ಸುಖ, ನೆಮ್ಮದಿ ಕಡಿಮೆಯಾಗಿದೆ. ಹಾಗಾಗಿ, ಜನರು ಧಾರ್ಮಿಕ ಕೇಂದ್ರಗಳ ಮೂಲಕ ನೆಮ್ಮದಿಯನ್ನು ಕಾಣುತ್ತಾರೆ. ಧಾರ್ಮಿಕ ಕೇಂದ್ರಗಳೆಂದರೆ ಆತ್ಮವಿಶ್ವಾಸ, ಶಾಂತಿ, ನೆಮ್ಮದಿಯ ಬದುಕಿಗೆ ಬೆಳಕು ನೀಡುವ ಕೇಂದ್ರಗಳು. ಬದುಕಿಗೆ ಬೆಳಕು ನೀಡುವ ಧಾರ್ಮಿಕ ಕೇಂದ್ರಗಳ ಪುನಃ ಪ್ರತಿಷ್ಠೆಯ ಮೂಲಕ ಭಕ್ತರು ಬದುಕಿನಲ್ಲಿ ಸಂತೃಪ್ತಿ ಹೊಂದಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು. ಈ ಕ್ಷೇತ್ರದಲ್ಲಿ ಪುನರ್‌ನಿರ್ಮಾಣಗೊಂಡ ಶ್ರೀ ಕೋರ್‍ದಬ್ಬು ದೈವಸ್ಥಾನ ಸುಂದರವಾಗಿ ನಿರ್ಮಾಣಗೊಂಡು ಕ್ಷೇತ್ರದ ಮಹಿಮೆಯನ್ನು ಎಲ್ಲರೂ ಕೊಂಡಾಡುವಂತಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ರಮಾನಾಥ ರೈಯನ್ನು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರಾವಳಿ-ಘಟ್ಟ ಪ್ರದೇಶದಲ್ಲಿ ಶ್ರೀ ಬಬ್ಬುಸ್ವಾಮಿಯ ಆರಾಧನೆ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತದೆ. ಮುಂಡಾಲ ಸಮಾಜದವರ ಜತೆ ಸರ್ವಜನತೆ ಈ ಆರಾಧನೆ ನಡೆಸುತ್ತಿದ್ದಾರೆ.ನಗರದ ಹೃದಯಭಾಗದಲ್ಲಿರುವ ಈ ದೈವಸ್ಥಾನ ಅಪಾರ ಭಕ್ತರನ್ನು ಹೊಂದಿದೆ ಎಂದರು.

ಕೋರ್‍ದಬ್ಬು ದೈವಸ್ಥಾನದ ಗುರಿಕಾರ ಅಧ್ಯಕ್ಷ ಎಸ್.ರಾಘವೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಭಕ್ತರ ಸ್ಪಂದನದಿಂದ ನವೀಕರಣ, ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತೆಂದರು.

ಸ್ಥಳೀಯ ಕಾರ್ಪೋರೇಟರ್ ಕು.ಅಪ್ಪಿ ಎಸ್ ಅವರು ಕ್ಷೇತ್ರದ ಸರ್ವಕಾರ್‍ಯಗಳಿಗೆ ತಾನು ಸದಾ ಸಹಕರಿಸುವುದಾಗಿ ಹೇಳಿದರು. ಉದ್ಯಮಿ ಶ್ರೀ ಚಿರಾಗ್ ರಾಮಚಂದ್ರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಪಾಂಡುರಂಗ ಕೆ. ಅತಿಥಿಗಳಾಗಿದ್ದರು.

ಶ್ರೀ ಕ್ಷೇತ್ರ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಧಾನಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಕೋಡಿಕಲ್ ವಂದಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

Write A Comment