
ಮ೦ಗಳೂರು,ಡಿ.24: ಅಪ್ರೆಂಟಿಸ್ ಆಕ್ಟ್ 1961ರ, ಅಪ್ರೆಂಟಿಸ್ ಪ್ರೋತ್ಸಾಹ ಯೋಜನೆಯಡಿಯಲ್ಲಿ ಉದ್ಯಮ ಸಂಸ್ಥೆಯ ಕನಿಷ್ಟ 6 ಮಂದಿ ಕೆಲಸಗಾರರನ್ನು ಹೊಂದಿದ್ದರೆ ತಮ್ಮ ಉದ್ಯಮ ಸಂಸ್ಥೆಯನ್ನು www.ncvtmis.gov.in/pages/Apprenticeship/ Establishment Registration ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಭರ್ತಿಮಾಡಿ ನೋಂದಣಿ ಮಾಡಬಹುದಾಗಿದೆ ಹಾಗೂ ಉದ್ಯಮ ಸಂಸ್ಥೆಯಲ್ಲಿ ಕೆಲಸಗಾರರ ಸಂಖ್ಯೆಗೆ ಅನುಗುಣವಾಗಿ ಶೇಕಡ 2.5 ರಿಂದ 10 ವರೆಗೆ ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳನ್ನು ಆನ್‌ಲೈನ್ ಮೂಲಕವೇ ನಿಗಧಿ ಪಡಿಸಲಾಗುತ್ತದೆ.
ಅಪ್ರೆಂಟಿಸ್ ಆಕ್ಟ್ 1961ರ, ಅಪ್ರೆಂಟಿಸ್ ಪ್ರೋತ್ಸಾಹ ಯೋಜನೆಯಡಿಯಲ್ಲಿ ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ತಮಗೆ ಬೇಕಾದ ಉದ್ಯಮ ಸಂಸ್ಥೆಗಳನ್ನು ಆಯ್ಕೆಗೊಳಿಸುವ ಹಾಗೂ ಉದ್ದಿಮೆದಾರರು ತಮಗೆ ಬೇಕಾದ ವೃತ್ತಿಗೆ ಅನುಗುಣವಾಗಿ ಶಿಶಿಕ್ಷು ತರಬೇತಿ ಅಭ್ಯರ್ಥಿಗಳು ಆಯ್ಕೆಗೊಳಿಸುವ ಸರಳ ವಿಧಾನವನ್ನು ಅಳವಡಿಸುವ ರೀತಿಯಲ್ಲಿ ಸಾಫ್ಟ್‌ವೇರನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಯೋಜನೆಯಡಿಯಲ್ಲಿ 50% ಸ್ಟೈಪೆಂಡನ್ನು ಕೇಂದ್ರ ಸರಕಾರವು ಪ್ರೋತ್ಸಾಹ ಧನದ ರೂಪದಲ್ಲಿ ನೀಡುತ್ತಿದ್ದು,
ಶಿಷ್ಯ ವೇತನವು ನೇರವಾಗಿ ಶಿಶಿಕ್ಷುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಈ ಯೋಜನೆಯು ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆ ಸಂಸ್ಥೆಗಳಿಗೆ ಬಹಳ ಉಪಯುಕ್ತವಾಗಿದ್ದು, ಉದ್ಯಮ ಸಂಸ್ಥೆಗಳು ಇದರ ಸದುಪಯೋಗ ಪಡೆಯಬೇಕು ಎಂದು ಪ್ರಾದೇಶಿಕ ಶಿಶಿಕ್ಷು ತರಬೇತಿ ನಿರ್ದೇಶನಾಲಯ ಅಧಿಕಾರಿ ರಾಮೇಶ್ವರ್ ರಾವ್‌ರವರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿಹಿಲ್ಸ್ ಮಂಗಳೂರು ಇಲ್ಲಿ ಮಂಗಳವಾರ ಜರುಗಿದ ಅಪ್ರೆಂಟಿಸ್ ಪ್ರೋತ್ಸಾಹ ಯೋಜನೆ ಯ ಶಿಶಿಕ್ಷು ಮಾಹಿತಿ ಕಾರ್‍ಯಾಗಾರದಲ್ಲಿ ಉದ್ದಿಮೆದಾರರನ್ನು ಉದ್ದೇಶಿಸಿ ತರಬೇತಿ ನೀಡಿದರು.