ಕನ್ನಡ ವಾರ್ತೆಗಳು

ದಿಲ್‌ವಾಲೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ : ಪೊಲೀಸರ ನಿಷ್ಕ್ರಿಯತೆ ಕಾರಣ : ಡಿವೈಎಫ್‌ಐ ಆರೋಪ

Pinterest LinkedIn Tumblr

Dyfi_Logo_dec2015

ಮಂಗಳೂರು: ಅಸಹಿಷ್ಣುತೆಯ ವಿರುದ್ಧ ಶಾರುಖ್ ಖಾನ್ ನೀಡಿರುವ ಹೇಳಿಕೆ ಮುಂದಿಟ್ಟುಕೊಂಡು ಜಿಲ್ಲೆಯಾದ್ಯಂತ ಶಾರುಖ್ ಖಾನ್ ಅಭಿನಯದ ದಿಲ್‌ವಾಲೆ ಚಿತ್ರ ಪ್ರದರ್ಶನಕ್ಕೆ ಬಜರಂಗದಳ ಅಡ್ಡಿಪಡಿಸುತ್ತಿರುವುದು ಅಸಹಿಷ್ಣುತೆಯ ಪರಾಕಷ್ಠೆ ಎಂದು ಹೇಳಿರುವ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ, ಈ ರೀತಿಯ ಅನೈತಿಕ ಗೂಂಡಾಗಿರಿಯನ್ನು ತಡೆಯದೆ ಮೌನವಹಿಸಿರುವ ಪೊಲೀಸ್ ಕಮಿಷನರ್ ಮುರುಗನ್ ಅವರ ನಿಷ್ಕ್ರಿಯತೆಯನ್ನು ಕಟುವಾಗಿ ಖಂಡಿಸಿದೆ.

ಮಂಗಳೂರಿನ ಮಲ್ಟಿಪ್ಲೆಕ್ಸ್ ಸೇರಿದಂತೆ ಯಾವುದೇ ಚಿತ್ರಮಂದಿರಗಳಲ್ಲಿ ದಿಲ್‌ವಾಲೆ ಚಿತ್ರ ಪ್ರದರ್ಶನ ನಡೆಸದಂತೆ ಬಜರಂಗದಳ ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ ಪ್ರದರ್ಶಿಸುತ್ತಿದ್ದರೂ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಮೌನಕ್ಕೆ ಶರಣಾರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಜರಂಗದಳದ ಅನೈತಿಕ ಪೊಲೀಸ್‌ಗಿರಿಯ ವಿರುದ್ಧ ದೂರು ನೀಡಿರುವ ವಿದ್ಯಾ ದಿನಕರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆಯನ್ನು ಬಜರಂಗದಳದ ಕಾರ್ಯಕರ್ತರು ಬಹಿರಂಗವಾಗಿ ಒಡ್ಡುತ್ತಿದ್ದಾರೆ. ಇದೆಲ್ಲವನ್ನು ಕಮಿಷನರ್ ಮೌನವಾಗಿ ವೀಕ್ಷಿಸುತ್ತಿರುವುದು ಮಂಗಳೂರಿನಲ್ಲಿ ಭೀತಿಯ ವಾತಾವರಣಕ್ಕೆ ಕಾರಣವಾಗಿದೆ.

ಈ ವಿಚಾರದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸುವುದಾಗಿ ತಿಳಿಸಿದ್ದು, ಭಜರಂಗದಳದ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸುತ್ತಿರುವುದಾಗಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರ ಪ್ರಕಟಣೆ ತಿಳಿಸಿದೆ.

ದಿಲ್‌ವಾಲೆ ಸಿನೆಮಾದ ಮುಕ್ತ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಡಿಸೆಂಬರ್ 24 ರಂದು ಸಂಜೆ 5.00ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸಮಾನ ಮನಸ್ಕರ ಸಹಯೋಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂತೋಷ್ ಬಜಾಲ್ ಅವರು ಈ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

Write A Comment