ಕನ್ನಡ ವಾರ್ತೆಗಳು

ನಾದವೈಭವಂ ಉಡುಪಿ ವಾಸುದೇವ ಭಟ್ ಅವರಿಗೆ ಬೆಂಗಳೂರಿನ ಪ್ರತಿಷ್ಠಿತ ಸ್ವರ ಸುರಭಿ ಪ್ರಶಸ್ತಿ.

Pinterest LinkedIn Tumblr

nada_brahma_award_1

ಉಡುಪಿ,ಡಿ.23: ಬೆಂಗಳೂರಿನ ಪ್ರತಿಷ್ಠಿತ ಸ್ವರ ಸುರಭಿ ಟ್ರಸ್ಟ್ ಕೊಡ ಮಾಡುವ ಸ್ವರ ಸುರಭಿ ಪ್ರಶಸ್ತಿಗೆ ಉಡುಪಿಯ ನಾದವೈಭವಂ ವಾಸುದೇವ ಭಟ್ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಶ್ರೀಧರ ಅಯ್ಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್. ಜಾನಕಿ ಸೇರಿದಂತೆ ಸಂಗೀತ ಕ್ಷೇತ್ರದ ಸಾಧಕರಿಗೆ ಸಂದಿರುವ ಈ ಪ್ರಶಸ್ತಿಯನ್ನು ಈ ವರ್ಷ ಉಡುಪಿ ನಾದವೈಭವಂ ಸಂಗೀತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ, ಸಂಗೀತ ವಿದ್ವಾಂಸ, ಪತ್ರಕರ್ತ, ಸಿನಿಮಾ ನಿರ್ದೇಶಕ ವಾಸುದೇವ ಭಟ್ ಅವರಿಗೆ ಡಿಸೆಂಬರ್ 25 ರಂದು ಬೆಂಗಳೂರಿನ ಬಸವನಗುಡಿ ಪುತ್ತಿಗೆ ಗೋವರ್ಧನಾ ಕ್ಷೇತ್ರದ ಸಭಾಂಗಣದಲ್ಲಿ ನಡೆಯುವ ಸುಗಮ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.

nada_brahma_award_2

ತಮ್ಮ ಎಂಟನೇ ವರ್ಷದಲ್ಲಿಯೇ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ ಅವರು ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತು ಮದ್ರಾಸ್ ಸಂಗೀತ ಪರೀಕ್ಷೆಯಲ್ಲಿ ಪಾಸಾಗಿ ಸಂಗೀತ ವಿದ್ವಾನ್ ಆದರು.ಪ್ರಸಿದ್ಧ ಸಂಗೀತಜ್ಞ ಬಿಡಾರಂ ಕೃಷ್ಣಪ್ಪ ಅವರ ಶಿಷ್ಯ ಪಿಟೀಲು ಕೆ.ಮಂಜುನಾಥಯ್ಯ ಅವರ ಹೆಮ್ಮೆಯ ಶಿಷ್ಯ. ನಾಡಿನ ಪ್ರಸಿದ್ಧ ಐ‌ಎ‌ಎಸ್ ಅಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಶಿಷ್ಯರಿಗೆ ಸಂಗೀತ ಗುರುವಾದವರು.. 78 ರ ಹರೆಯದಲ್ಲೂ ಸಂಗೀತ ಕಲಿಕೆ ಮತ್ತು ಕಲಿಸುವಿಕೆ, ಪ್ರಯೋಗಗಳಲ್ಲಿ ನಿರತರಾಗಿರುವ ಅವರ ನೂರಾರು ಧ್ವನಿ ಸುರುಳಿಗಳು ಮತ್ತು ಧ್ವನಿ ತಟ್ಟೆಗಳು ಬಿಡುಗಡೆಯಾಗಿದ್ದು ಜನಪ್ರಿಯವಾಗಿವೆ. ಇಂದಿಗೂ ಅವರು ಪ್ರತಿದಿನ ಆಸಕ್ತ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.

ಬೆಥನಿ ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳೂರು, ಮೂಲ್ಕಿ, ಬಜ್ಪೆ, ಕಿನ್ನಿಗೋಳಿ ಮೊದಲಾದೆಡೆ ಸಂಗೀತ ಗುರುಗಳಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಮದ್ರಾಸ್ ಮೇಲ್, ಸಂಯುಕ್ತ ಕರ್ನಾಟಕ, ನವಭಾರತ್, ಜನರಾಜ್, ಪ್ರಜಾಪ್ರಭುತ್ವ, ಪ್ರಜಾ ಮತ ಪತ್ರಿಕೆಗಳಲ್ಲಿ ಮೂರು ದಶಕಗಳ ತಮ್ಮ ಸೇವೆ ಸಲ್ಲಿಸಿದ್ದಾರೆ. ಆಧುನಿಕ ನಾಟ್ಯ ಸಂಘ, ವಾಸನ್ಸ್ ಪೇಟೆಮೆನ್ಸ್ ಟ್ರೂಫ್, ಶಾಸ್ತ್ರೀಯ ಸಂಗೀತ ಗಾನೋಲ್ಲಾಸ ಕೂಟ, ನಾಧವೈಭವಂ ಸಂಗೀತ ಶಿಕ್ಷಣ ಸಂಶೋಧನಾ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ.

ಅವರು ನಿರ್ಮಿಸಿ ನಿರ್ದೇಶಿಸಿದ ಭುವನಜ್ಯೋತಿ ಸಿನಿಮಾಕ್ಕಾಗಿ ಕ್ರೈಸ್ರರ ಪರಮೋಚ್ಚ ಗುರು ಪೋಪ್ ಅವರಿಂದ ನಗದು ಸಹಿತ ಪ್ರಶಸ್ತಿಗೆ ಪಾತ್ರರಾದವರು.”ದಾಸ ವಿಶಾರದ”, “ಕಲಾರತ್ನ”, “ಗಾನ ಕಲಾ ವಿಭೂಷಣ”, “ಶ್ರೀರಾಮ ವಿಠಲ ಪ್ರಶಸ್ತಿ”, “ಪುರಂದರ ಪ್ರಶಸ್ತಿ”, ಭರತ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್, ದೆಹಲಿ ಕನ್ನಡಿಗ ಪ್ರಶಸ್ತಿ, ಕರ್ನಾಟಕ ಕಲಾವಿದ ರತ್ನ, ಪತ್ರಿಕೋದ್ಯಮ ದಿನದ ಗೌರವ, ಉಡುಪಿ ಜಿಲ್ಲಾ ರಾಜ್ಯೋತ್ಸವ ಗೌರವ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ನವಭಾರತ ಪತ್ರಿಕೆಯ ಕೊನೆಯ ಎರಡು ತಿಂಗಳ ಕಾಲ ಅವರು ಶುಕ್ರವಾರದ ಸಿನಿಮಾ ಪುಟ ನಿರ್ವಹಣೆ ವತ್ತು ಸಂಪಾದಕೀಯ ಬರಹಗಳನ್ನು ಬರೆಯುತ್ತಿದ್ದರು.

ಪ್ರಧಾನಿ ಇಂದಿರಾ ಗಾಂಧಿ, ಮುಖ್ಯಮಂತ್ರಿ ನಿಜಲಿಂಗಪ್ಪ ಮೈಸೂರು ಮಹಾರಾಜರಂತಹ ಮಹತ್ವದ ವ್ಯಕ್ತಿಗಳ ಸಾಂದರ್ಭಿಕ ಸಂದರ್ಶನ ಮಾಡಿ ಆ ಕಾಲದಲ್ಲಿ ಪ್ರಕಟಿಸಿದ್ದರು.
“ಅಂಬಲಪಾಡಿ ದೇವಾಲಯದಲ್ಲಿ ದೇವಿ ದರ್ಶನ” ಸುದ್ದಿ ಆ ಕಾಲದಲ್ಲಿ ರಾಜ್ಯದ ಗಮನ ಸೆಳೆದಿತ್ತು. “ಆ ಕಾಲದಲ್ಲಿ ಪತ್ರಿಕೆಗಳು ಮತ್ತುಪತ್ರಕರ್ತರ ಸಂಖ್ಯೆ ವಿರಳವಾಗಿತ್ತು. ಪತ್ರಕರ್ತರಿಗೆ ಈಗಿನ ಕಾಲಕ್ಕಿಂತ ಹೆಚ್ಚಿನ ಗೌರವ ಸಿಗುತ್ತಿತ್ತು. ಸಿನಿಮಾ ಟಿಕೇಟ್ ತೆಗೆದು ಕೊಳ್ಳುವಾಗ, ರೇಶನ್ ಅಂಗಡಿಗಳ ಕ್ಯೂನಲ್ಲಿ ಜನ ತಾವಾಗಿ ಮುಂದೆ ಕಳುಹಿಸಿ ಗೌರವಿಸುತ್ತಿದ್ದರು” ಎಂದು ಅವರು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

Write A Comment