
ಮಂಗಳೂರು: ತಾನು ಏಸುವಿನ ಜನ್ಮದಿನಾಚರಣೆಯ ಮೇಲೆ ನಂಬಿಕೆ ಇಟ್ಟಿದ್ದು, ಮಾನವರು ಏಸುವಿನ ಸಂದೇಶದಂತೆ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ನಾವು ಪ್ರೀತಿಸಬೇಕು ಎಂದು ದಕ್ಷೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಹೇಳಿದರು.
ಅವರು ತಮ್ಮ ನೇತ್ರತ್ವದಲ್ಲಿ ನಗರದ ಶಕ್ತಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಸಾನಿಧ್ಯದಲ್ಲಿ ನಡೆದ ಕ್ರಿಸ್ಮಸ್ ಹಬ್ಬ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೇಕ್ ವಿತರಿಸಿ ಮಾತನಾಡಿದರು. ಭಿನ್ನ ಸಾಮರ್ಥ್ಯದ ಮಕ್ಕಳು ದೇವರ ಸಮಾನ. ಹಾಗಾಗಿ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ತಾನು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿರುವುದಾಗಿ ಅವರು ಹೇಳಿದರು.

ಕಡುಬಡವರ ಸೇವೆ, ಸಹಬಾಳ್ವೆ ಏಸುವಿನ ಸಂದೇಶವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ಸಾನಿಧ್ಯದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿರುವುದು ಸಂತಸದ ವಿಷಯ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಹಾಗೂ ಗಣೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹಾಬಲ ಮಾರ್ಲ, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸಾನಿದ್ಯ ಸಂಸ್ಥೆಯ ಮುಖ್ಯಸ್ಥ ವಸಂತ್ ಕುಮಾರ್,ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ.ಸುಧೀರ್ ಹಾಗೂ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರಾದ ಅರುಣ್ ಕುವೆಲ್ಲೋ, ರಾಮ್ ಭಟ್, ಸ್ಟೀವನ್, ವಿಶ್ವಾಸ್ ದಾಸ್, ಅಖಿಲ, ಗಣೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.