
ಕಾರ್ಕಳ, ಡಿ.22: ಮಂಗಳೂರು ಮತ್ತು ಸುರತ್ಕಲ್ನ ಸಿನೆಮಾ ಮಂದಿರದಲ್ಲಿ ಶಾರುಖ್ಖಾನ್ ಅಭಿನಯದ ದಿಲ್ವಾಲೆ ಹಿಂದಿ ಚಲನಚಿತ್ರ ಪ್ರದರ್ಶನ ನಡೆಯ ದಂತೆ ಬಜರಂಗದಳದ ಕಾರ್ಯಕರ್ತರು ರವಿವಾರ ಪ್ರತಿಭಟನೆ ನಡೆಸಿದ ಬೆನ್ನಲೇ ಸೋಮವಾರ ಕಾರ್ಕಳದಲ್ಲೂ ಬಜರಂಗದಳದ ಕಾರ್ಯಕರ್ತರು ಸ್ಥಳೀಯ ಸಿನೆಮಾ ಮಂದಿರದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಘಟನೆ ನಡೆದಿದೆ.ನಗರ ಬಜರಂಗದಳದ ಸಂಚಾಲಕ ಅನಿಲ್ ಪ್ರಭು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಜರಂಗದಳದ ಕಾರ್ಯಕರ್ತರು ಸಿನೆಮಾ ಪ್ರದರ್ಶಿಸದಂತೆ ತಾಕೀತು ಮಾಡಿ, ಪೋಸ್ಟರ್ ಹಾಗೂ ಬ್ಯಾನರ್ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚಲನಚಿತ್ರ ಪ್ರದರ್ಶಿಸಬಾರದು. ಮಾಲಕರು ಚಲನಚಿತ್ರ ಪ್ರದರ್ಶಿಸಲು ಮುಂದಾದರೆ ಚಿತ್ರಮಂದಿರವನ್ನು ಧ್ವಂಸ ಮಾಡುವುದಾಗಿ ಅಲ್ಲಿದ್ದ ಪೊಲೀಸರ ಸಮ್ಮುಖದಲ್ಲೇ ನಗರ ಸಂಚಾಲಕ ಅನಿಲ್ ಪ್ರಭು ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲೂ ದಿಲ್ವಾಲೇಗೆ ಅಡ್ಡಿ:
ದೇಶದಲ್ಲಿನ ಅಸಹಿಷ್ಣುತೆಯ ಬಗ್ಗೆ ಮಾತನಾಡಿದ್ದ ನಟ ಶಾರೂಖ್ ಖಾನ್ ಅಭಿನಯದ ದಿಲ್ವಾಲೆ ಸಿನಿಮಾ ಪ್ರದರ್ಶನವನ್ನು ಸೋಮವಾರ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಪ್ರದರ್ಶನ ಮೊಟಕುಗೊಳಿಸಲಾಯಿತು.
ಮಧ್ಯಾಹ್ನ ಬಜರಂಗದಳ, ವಿಹಿಂಪ ಕಾರ್ಯಕರ್ತರು ಚಿತ್ರಮಂದಿರಕ್ಕೆ ತೆರಳಿ, ಸಿನೆಮಾದ ಬ್ಯಾನರ್ ತೆರವುಗೊಳಿಸಿದರು. ಚಿತ್ರಮಂದಿರದ ಮ್ಯಾನೇಜರ್ ಜೊತೆ ಮಾತುಕತೆ ನಡೆಸಿ ಸಿನೆಮಾ ಪ್ರದರ್ಶನ ನಿಲ್ಲಿಸುವಂತೆ ತಿಳಿಸಿದರು. ಆದರೆ ಅಷ್ಟರಲ್ಲೇ ಸಿನೆಮಾ ಪ್ರದರ್ಶನ ಆರಂಭವಾದ ಕಾರಣ ನಿಲ್ಲಿಸಲು ಸಾಧ್ಯವಿಲ್ಲ ಎಂದು ಚಿತ್ರಮಂದಿರದವರು ತಿಳಿಸಿದ್ದರು. ಆದರೆ ಮುಂದಿನ ಪ್ರದರ್ಶನ ನಡೆಸಬಾರದು ಎಂದು ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಳಿಕದ ಪ್ರದರ್ಶನವನ್ನು ನಿಲುಗಡೆಗೊಳಿಸಲಾಯಿತು.