
ಮಂಗಳೂರು : ಎತ್ತಿನಹೊಳೆ ಯೋಜನೆ ವಿರುದ್ಧ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಬಂದ್ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಯಲುಸೀಮೆಯ ಜನತೆಯ ಬೇಡಿಕೆ ಪರ ಇರುವುದಾಗಿ ಬಿಂಬಿಸಲು ಯತ್ನಿಸಿ ಸರ್ಕಾರವೇ ಅಡ್ವೋಕೇಟ್ ಅವರನ್ನು ಹಸಿರುಪೀಠ ನ್ಯಾಯಾಲಯಕ್ಕೆ ಕಳುಹಿಸಿರುವುದಾಗಿ ನೀರಾವರಿ ತಜ್ಞ ಪ್ರೊ.ಎಸ್.ಜಿ. ಮಯ್ಯ ಆರೋಪಿಸಿದ್ದಾರೆ,
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟದ ತೀವ್ರತೆ ಅರಿತು ಬಯಲುಸೀಮೆಯ ಜನತೆಯ ಪರ ಅನುಕಂಪ ತೋರಿಸಲು ಸಲುವಾಗಿ ನಾಟಕವಾಡಲು ಸರ್ಕಾರವೇ ಆಡ್ವೋಕೇಟ್ ಜನರಲ್ ರನ್ನು ಇದೇ ಮೊದಲ ಸಲ ಹಸಿರು ಪೀಠದ ಮುಂದೆ ಹಾಜರಾಗಲು ಕಳುಹಿಸಿದೆ. ಈ ಮೂಲಕ ಸರ್ಕಾರ ಯೋಜನೆ ಮುಂದುವರಿಸುವುದಲ್ಲಿ ಸುಮ್ಮನೆ ಕುಳಿತಿಲ್ಲ ಎಂದು ಜನತೆಗೆ ಬಿಂಬಿಸಲು ಕಳುಹಿಸಿದೆ ಟೀಕಿಸಿದರು
ಮಹಾನಗರ ಪಾಲಿಕೆ ಉಪ ಮೇಯರ್ ಪುರುಷೋತ್ತಮ ಅವರು ಪರಿಸರ ಇಲಾಖೆಯ ಅನುಮತಿ ಪಡೆಯದೆ ಎತ್ತಿನಹೊಳೆಯಲ್ಲಿ ಕಾಮಗಾರಿ ನಡೆಸಿರುವುದರ ವಿರುದ್ಧ ನೀರಾವರಿ ನಿಗಮಕ್ಕೆ ಲಿಖಿತ ದೂರು ಸಲ್ಲಿಸಿದ್ದರು. ಇದೇ ಮೊದಲ ಬಾರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ದೂರಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಿರುವುದು ತಿಳಿದು ಬಂದಿದೆ.
ಡಿ.26 ರಂದು ಎತ್ತಿನಹೊಳೆಗೆ ಸ್ಥಳ ಪರಿಶೀಲನೆ ನಡೆಸಲು ಸಮಿತಿಯ ತಂಡ ಆಗಮಿಸುವ ಮಾಹಿತಿಯೂ ದೊರೆತಿದೆ. ಎತ್ತಿನಹೊಳೆ ಹೋರಾಟಗಾರ ಸಂಘಟನೆಗಳೂ ಅಂದು ಈ ಯೋಜನೆಯ ವೈಫಲ್ಯ ಕಾಣುವ ಬಗ್ಗೆ ತಂಡಕ್ಕೆ ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು.

ಬಯಲುಸೀಮೆಯಲ್ಲೂ ಈಗ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಬಲಗೊಂಡಿದೆ. ಈ ಯೋಜನೆ ಬದಲಾಗಿ ಪರಮಶಿವಯ್ಯ ಯೋಜನೆಯನ್ನು ಜಾರಿಗೊಳಿಸಲು ಸಾಕಷ್ಟು ಸಮಯವೂ ಬೇಕಲ್ಲದೇ ಅದು ಈ ಯೋಜನೆಗಿಂತಲೂ ಕಾರ್ಯಸಾಧುವಲ್ಲದ ಯೋಜನೆ. ಅಲ್ಲದೇ ಅದರ ಕಾರ್ಯಸಾಧ್ಯತಾ ವರದಿ ಕೂಡಾ ಇಲ್ಲ. ಅದನ್ನು ಇನ್ನಷ್ಟೇ ಸಿದ್ದಪಡಿಸಬೇಕಿದೆ. ಹೀಗಾಗಿ ಅದರಲ್ಲಿ ಎತ್ತಿನಹೊಳೆಯಷ್ಟು ಕೂಡಾ ನೀರು ಸಿಗಲಾರದು. ಇದನ್ನು ಜಾರಿ ತಂದರೆ ಇದರ ವಿರುದ್ಧ ಹೋರಾಟ ಮುಂದುವರಿಸಲಾಗುವುದು. ಒಂದು ವೇಳೆ ಎತ್ತಿನಹೊಳೆ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿದರೆ ಅದನ್ನು ಮುಂದೆ ಪ್ರಶ್ನಿಸಲಾಗುವುದು ಎಂದು ಮಯ್ಯ ಅವರು ತಿಳಿಸಿದರು.
ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಎತ್ತಿನಹೊಳೆ ಯೋಜನೆ ಕುರಿತು ಸಭೆಯನ್ನು ದಸರಾ ಕಾರಣಕ್ಕಾಗಿ ಮುಂದೂಡಿದ ಸರ್ಕಾರ ಈಗ ಮತ್ತೆರಡು ತಿಂಗಳಾದರೂ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯ ಹೋರಾಟ ಸಮಿತಿಯ ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ವಿವಿಧ ಸಂಘಟನೆಗಳ ಮುಖಂಡರಾದ ಶಶಿರಾಜ್ ಶೆಟ್ಟಿ ಕೊಳಂಬೆ, ವಕೀಲ ದಿನಕರ ಶೆಟ್ಟಿ, ಹುಸೇನ್ ಕಾಟಿಪಳ್ಳ, ಉತ್ತಮ್ ಆಳ್ವ ಹಾಗೂ ಸುಖ್‌ಪಾಲ್ ರಾವ್ ಮೊದಲಾದವರು ಉಪಸ್ಥಿತರಿದ್ದರು.