ಕುಂದಾಪುರ: ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಜತೆಯಲ್ಲಿ ಇರುವವರು ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿಯೇ ಬಿಜೆಪಿ ಯನ್ನು ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ. ಹಾಲಾಡಿಯವರ ಆತ್ಮೀಯವರಾಗಿರುವ ಕಿರಣ್ ಕೊಡ್ಗಿಯವರು ಪ್ರಸ್ತುತ ಬಿಜೆಪಿಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿರುವುದರಿಂದ, ಹಾಲಾಡಿಯವರ ಬೆಂಬಲಿಗರು ಈ ಬಾರಿಯೂ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು. ಸದ್ಯ ಬಿಜೆಪಿಯಲ್ಲಿ ಯಾವುದೇ ಬಣದ ಗೊಂದಲವಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ಕುಂದಾಪುರದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕಾರಣ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಸಿದ್ದವಾಗಿದೆ ಎಂದು ಆರೋಪಿಸಿದ ತಿಂಗಳೆ ಅವರು, ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಭದ್ರವಾಗಿದೆ, 155 ಪಂಚಾಯತ್ಗಳಲ್ಲಿ 102 ಪಂಚಾಯತ್ ನಾವು ಗೆದ್ದಿದ್ದೇವೆ, ಕಳೆದ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯವನ್ನು ಪ್ರಬಲಗೊಳಿಸಿದೆ.ಯಾವುದೇ ಮೀಸಲಾತಿ ಇದ್ದರೂ ಕೂಡ ಬಿಜೆಪಿ ಪಕ್ಷ ಜಿಲ್ಲಾ ಪಂಚಾಯತ್ ಹಾಗೂ ಮೂರು ತಾಲೂಕು ಪಂಚಾಯತ್ ಕ್ಷೇತ್ರವನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.