ಕನ್ನಡ ವಾರ್ತೆಗಳು

ಕದ್ರಿ ಪಾರ್ಕ್‌ನಲ್ಲಿ ಬೃಹತ್ ಫಲಪುಷ್ಪ ಪ್ರದರ್ಶನ : ಸಾರ್ವಜನಿಕರಿಗೆ ಕೈತೋಟ ಸ್ಪರ್ಧೆ

Pinterest LinkedIn Tumblr

kadri_palapuspa_meet

ಮ೦ಗಳೂರು ಡಿ,09: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಜನವರಿ 23 ರಿಂದ 26 ರವರೆಗೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಪುಷ್ಪ ಪ್ರದರ್ಶನವನ್ನು ಇಲಾಖೆಯ ಅನುದಾನ, ಇತರೆ ಸರಕಾರಿ ಇಲಾಖೆಗಳು, ಬ್ಯಾಂಕ್‌ಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ, ಅವರ ಸಹಕಾರದಿಂದ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ತೋಟಗಾರಿಕ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯನ್ನು ಸಾರ್ವಜನಿಕರಲ್ಲಿ ಉದ್ದೀಪನಗೊಳಿಸುವ ಮೂಲಕ ಜಿಲ್ಲೆಯ ತೋಟಗಾರಿಕೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಪರಿಸರ ಸಂರಕ್ಷಣೆ, ಸಾರ್ವಜನಿಕ ನೈರ್ಮಲ್ಯ, ಗ್ರಾಮ ನಗರಗಳನ್ನು ಸುಂದರಗೊಳಿಸುವುದು, ಆಧುನಿಕ ತಂತ್ರಜ್ಞಾನ ಬಳಕೆ ಇತ್ಯಾದಿ ಚಟುವಟಿಕೆಗಳ ಪಾಲನೆ ಮೂಲಕ ತೋಟಗಾರಿಕೆ ಉದ್ದಿಮೆಯನ್ನು ಮುಂದಕ್ಕೆ ಕೊಂಡ್ಯೊಯ್ಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಫಲಪುಷ್ಪ ಸ್ಪರ್ಧೆ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆ ಇರುವುದರಿಂದ ಕದ್ರಿ ಪಾರ್ಕ್ ಒಳಗೆ ಆಹಾರ ತಿನಿಸುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಪಾರ್ಕ್ ಹೊರಗಡೆ ತಿಂಡಿ ತಿನಿಸುಗಳ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ. ಯೋಗೇಶ್ ಎಚ್.ಆರ್. ಮಾತನಾಡಿ. ಜಿಲ್ಲಾ ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ನಗರವಾಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿರಿ ತೋಟಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೈತೋಟ ಸ್ಪರ್ಧೆಯ ವಿವರ:
1.ಭೂ ದೃಶ್ಯ ಹಾಗೂ ಉದ್ಯಾನವನ ಅಭಿವೃಧ್ಧಿ ಸ್ಪರ್ಧೆ:(Landscaping and Gardening) ಭೂ ದೃಶ್ಯ ಹಾಗೂ ಉದ್ಯಾನವನ ಅಭಿವೃಧ್ಧಿ ಸ್ಪರ್ಧೆಯನ್ನು ೩ ವಿಭಾಗಗಳಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ ಸಣ್ಣ ಪ್ರಮಾಣ 100 ಚ.ಮೀ., ಮಧ್ಯಮ ಪ್ರಮಾಣ 200 ಚ.ಮೀ., ದೊಡ್ಡ ಪ್ರಮಾಣ 200 ಚ.ಮೀ ಮೇಲ್ಪಟ್ಟು ಉದ್ಯಾನವನ್ನು ನಿರ್ಮಿಸಿದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
2.ಉತ್ತಮ ಕೈತೋಟ ಅಭಿವೃಧ್ಧಿ ಸ್ಪರ್ಧೆ: ಮನೆಯ ಅಂಗಳ ಮತ್ತು ಹಿತ್ತಲಿನಲ್ಲಿ ವಿವಿಧ ಜಾತಿಯ ತರಕಾರಿ ಹಾಗೂ ಹೂಗಳನ್ನು ಬೆಳೆದಿರುವವರಿಗೆ ಕೈತೋಟ ಅಭಿವೃಧ್ಧಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
3.ತಾರಸಿ ತೋಟ ಸ್ಪರ್ಧೆ: ಮನೆಯ ತಾರಸಿಯಲ್ಲಿ ವಿವಿಧ ಜಾತಿಯ ತರಕಾರಿ ಹಾಗೂ ಹೂಗಳನ್ನು ಅಭಿವೃಧ್ಧಿ ಪಡಿಸಿದವರಿಗೆ ತಾರಸಿ ತೋಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
4.ಸಂಸ್ಥೆಗಳಿಗೆ ಉತ್ತಮ ಉದ್ಯಾನವನ ಸ್ಪರ್ಧೆ: ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯಾನವನವನ್ನು ನಿರ್ಮಿಸಿ ಅಭಿವೃಧ್ಧಿ ಪಡಿಸಿದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

5.ಮಳಿಗೆಗಳಲ್ಲಿ ಉತ್ತಮ ಪ್ರದಶಿಕೆಗಳ ಸ್ಪರ್ಧೆ : ಮನೆಯಲ್ಲಿ ಬೆಳೆದಿರುವ ವಿವಿಧ ಜಾತಿಯ ಅಲಂಕಾರಿಕ ಹಾಗೂ ಹೂವಿನ ಗಿಡಗಳನ್ನು ಫಲಪುಷ್ಪ ಪ್ರದರ್ಶನ ನಡೆಯುವ ದಿನದಂದು (23 ರಿಂದ 26  ರವರೆಗೆ) ಮಳಿಗೆಗಳಲ್ಲಿ ಉತ್ತಮ ರೀತಿಯಲ್ಲಿ ಜೋಡಿಸುವ ಸ್ಪರ್ಧೆ. ಮೇಲೆ ಸೂಚಿಸಿರುವ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ದಿ: 10-01-2016  ರೊಳಗಾಗಿ ತೋಟಗಾರಿಕೆ ಇಲಾಖೆ/ಸಿರಿ ತೋಟಗಾರಿಕೆ ಸಂಘದಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ನೈಜ್ಯ ಪುಷ್ಪ ಜೋಡಣೆ: (Fresh Flower Decoration) ನೈಜ್ಯ ಪುಷ್ಪ ಜೋಡಣೆ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ ಆಯೋಜಿಸಲಾಗಿದ್ದು ಇದರಲ್ಲಿ 15  ವರ್ಷ ವಯೋಮಿತಿಯವರಿಗೆ ಮತ್ತು 15  ವರ್ಷ ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಪುಷ್ಪ ರಂಗೋಲಿ ಸ್ಪರ್ಧೆ:ವಿವಿಧ ಜಾತಿಯ ಪುಷ್ಪಗಳನ್ನು‌ಉಪಯೋಗಿಸಿ ರಂಗೋಳಿಯನ್ನು ಹಾಕುವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ತರಕಾರಿ ಕೆತ್ತನೆ ಸ್ಪರ್ಧೆ:ವಿವಿಧ ಜಾತಿಯ ತರಕಾರಿ ಹಾಗೂ ಹಣ್ಣುಗಳನ್ನು ಉಪಯೋಗಿಸಿ ತರಕಾರಿ ಕೆತ್ತನೆ ಮಾಡುವವರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮೇಲೆ ಸೂಚಿಸಿರುವ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಜನವರಿ 15 ರ ಒಳಗೆ ತೋಟಗಾರಿಕೆ ಇಲಾಖೆ/ಸಿರಿ ತೋಟಗಾರಿಕೆ ಸಂಘದಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ತರಕಾರಿ ಕೆತ್ತನೆ, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ವಿವಿಧ ಸರಕಾರಿ ಇಲಾಖೆಗಳಿಂದ ಸಾರ್ವಜನಿಕರಿಗೆ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಪ್ರದರ್ಶನ ಮಳಿಗೆಗಳನ್ನು ತೆರಯಲಾಗುವುದು.
ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರೋಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಗಳು ತಮ್ಮ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.

ಇಡೀ ಕದ್ರಿ ಉದ್ಯಾನವನವನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಿ ಆಕರ್ಷಣೆಗೊಳಿಸಲು ಉದ್ದೇಶಿಲಾಗಿದೆ. ಈ ಬಾರಿ ಪ್ರದರ್ಶನವನ್ನು ಕದ್ರಿ ಉದ್ಯಾನವನದಾದ್ಯಂತ ವಿಸ್ತರಿಸಲು ಉದ್ದೇಶಿಸಿದ್ದು, ಪ್ರದರ್ಶನದಲ್ಲಿ ಒಟ್ಟು ಸುಮಾರು ನೂರಕ್ಕಿಂತಲೂ ಹೆಚ್ಚು ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಳಿಗೆ ತೆರೆಯಲು ಆಸಕ್ತರು ಜನವರಿ 10 ರ ಒಳಗೆ ಮುಂಚಿತವಾಗಿ ನೊಂದಾಯಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಸಿರಿ ತೋಟಗಾರಿಕೆ ಸಂಘ (ರಿ), ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣ ಬೆಂದೂರು ,ಮಂಗಳೂರು ದೂರವಾಣಿಸಂ: 9845523944/ 0824-2412628/9448101283 ಸಂಪರ್ಕಿಸಬಹುದು.

Write A Comment