ಕನ್ನಡ ವಾರ್ತೆಗಳು

ಬಿ.ಸಿ.ರೋಡ್‌ : ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ 20 ಲಾರಿ ಪೊಲೀಸ್ ವಶ.

Pinterest LinkedIn Tumblr

Bc_road_sand_raid

ಬಂಟ್ವಾಳ, ಡಿ. 05 : ಬಿ.ಸಿ.ರೋಡ್ ಮತ್ತು ಪರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸುಮಾರು 20 ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಅಕಾರಿಗಳ ತಂಡ ಶುಕ್ರವಾರ ವಶಪಡಿಸಿದೆ. ಮರಳು ಸಹಿತ ಲಾರಿಗಳನ್ನು ನಗರ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಬಿ.ಸಿ.ರೋಡ್ ವೃತ್ತ ವಠಾರದಲ್ಲಿ ಕಾರ್ಯಾಚರಿಸಿದ ಅಧಿಕಾರಿಗಳ ತಂಡ, ಮಂಗಳೂರಿನಿಂದ ಪಾಣೆಮಂಗಳೂರು, ಬಂಟ್ವಾಳದ ಕಡೆಗೆ ಸಂಚರಿಸುತ್ತಿದ್ದ ಅಕ್ರಮ ಮರಳು ಲಾರಿಗಳನ್ನು ತಡೆಹಿಡಿದು ಪರಿಶೀಲನೆ ನಡೆಸಿದರು. ಬಿ.ಸಿ.ರೋಡ್ ಪ್ಲೈಓವರ್ ಕೆಳಗಿನ ಜಂಕ್ಷನ್‌ನಲ್ಲೂ ಮೊಕ್ಕಾಂ ಇದ್ದ ಅಧಿಕಾರಿಗಳು, ಲಾರಿಗಳನ್ನು ಕೈಕುಂಜೆ ರಸ್ತೆಯಲ್ಲಿ ನಿಲ್ಲಿಸಿದರು. ಗುರುವಾರ ರಾತ್ರಿಯೂ ಹೆದ್ದಾರಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಮರಳು ಸಾಗಾಟಕ್ಕೆ ಸಂಬಂಸಿದ ದಾಖಲೆಪತ್ರಗಳು ಇಲ್ಲದ ಲಾರಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಕೆಲವು ಲಾರಿಗಳಿಗೆ ಮರಳು ಸಾಗಾಟಕ್ಕೆ ಪೂರ್ವಾನುಮತಿ ಇರುವುದಾದರೂ ನಿಗದಿತ ಭಾರಕ್ಕಿಂತ ಹೆಚ್ಚು ಮರಳನ್ನು ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಮರಳಿನ ಹೆಚ್ಚುವರಿ ತೂಕವನ್ನು ಲೆಕ್ಕಹಾಕಿ ದಂಡವನ್ನು ವಸೂಲಿ ಮಾಡುವುದಾಗಿ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯಿಂದ ಅಕ್ರಮ ಮರಳನ್ನು ತೆಗೆಯುವುದನ್ನು ಈಗ ನಿಲ್ಲಿಸಲಾಗಿದ್ದು, ಪ್ರಸ್ತುತ ಸ್ಥಳೀಯವಾಗಿ ಅಕ್ರಮ ಮರಳು ಸಾಗಾಟದ ಸಮಸ್ಯೆ ಇಲ್ಲ. ಆದರೆ, ಮಂಗಳೂರು ಕಡೆಯಿಂದ ಬರುವ ಲಾರಿಗಳಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ಜಿಲ್ಲಾಧಿಕಾರಿಯ ಸೂಚನೆಯಂತೆ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದು ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಸಾಗಾಟ ಅಡ್ಡ ರಸ್ತೆ :
ಮುಟ್ಟುಗೋಲು ಹಾಕಲಾದ ಕೆಲವೊಂದು ಲಾರಿಗಳು ಕೈಕುಂಜೆ ರೈಲ್ವೆ ಸೇತುವೆಯ ಕೆಳಭಾಗದ ರಸ್ತೆಯಿಂದ ಸಾಗುತ್ತಿದ್ದವು. ರೈಲ್ವೆ ಸ್ಟೇಷನ್ ಸಮೀಪವೂ ಕೆಲವೊಂದು ಲಾರಿಗಳನ್ನು ಅಧಿಕಾರಿಗಳ ಕಣ್ತಪ್ಪಿಸಿ ನಿಲ್ಲಿಸಲಾಗಿದ್ದರೂ, ಅಧಿಕಾರಿಗಳು ಲಾರಿಗಳನ್ನು ವಶಪಡಿಸಿಕೊಂಡರು. ಮಿತಿಮೀರಿ ಅಕ್ರಮವಾಗಿ ಮರಳು ಸಾಗಾಟ ಲಾರಿಗಳ ಸಂಚಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತಾಲೂಕು ಕಚೇರಿಯ ರೆವಿನ್ಯೂ ಇನ್‌ಸ್ಪೆಕ್ಟರ್‌ಗಳಾದ ನಾರಾಯಣ ಪೂಜಾರಿ, ಆಶ್ರಫ್ ಇಕ್ಬಾಲ್, ದಿವಾಕರ್, ಗ್ರಾಮಲೆಕ್ಕಾಕಾರಿ ಬಸವರಾಜು ಸನದಿ, ಎ.ಪಿ.ಭಟ್, ಸಿಬ್ಬಂದಿಯಾದ ಸದಾಶಿವ ಕೈಕಂಬ, ಲಕ್ಷ್ಮಣ ನರಿಕೊಂಬು ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಮಾಣಿ: 16 ಮರಳು ಲಾರಿಗಳ ವಶ
ಅಕ್ರಮ ಹಾಗೂ ಅತಿ ಭಾರ ಹೊತ್ತು ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ವಿರುದ್ದ ಗುರುವಾರ ರಾತ್ರಿ ಮಾಣಿಯಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ನೇತೃತ್ವದ ಕಂದಾಯ ಅಕಾರಿಗಳ ತಂಡ 16 ಲಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗಣಿ ಇಲಾಖೆಯ ನಾಗೇಂದ್ರಪ್ಪ, ಕಂದಾಯ ಅಕಾರಿಗಳಾದ ಆಶ್ರಫ್ ಇಕ್ಬಾಲ್, ದಿವಾಕರ್, ಪುತ್ತೂರು ಎಎಸ್ಪಿ ರಿಷ್ಯಂಕ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ ಕೆ, ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಗ್ರಾಮಕರಣಿಕರಾದ ಮಂಜುನಾಥ, ರಂಜಿತ್, ರಾಜಶೇಖರ್, ರಾಜು, ಕರಿ ಬಸಪ್ಪ, ಪ್ರಶಾಂತ್, ಯೋಗಾನಂದ, ಶಿವಾನಂದ, ಬಸವರಾಜ್, ಗ್ರಾಮ ಸಹಾಯಕರಾದ ಸದಾಶಿವ, ಲಕ್ಷ್ಮಣ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment