ಕನ್ನಡ ವಾರ್ತೆಗಳು

ಪುತ್ತೂರು: ಗುಂಡು ತಗುಲಿ ಸಾವು :ನಾಲ್ವರ ಬಂಧನ.

Pinterest LinkedIn Tumblr

vittal_fair_acused_arest

ವಿಟ್ಲ, ಡಿ.04: ಬೇಟೆಗೆಂದು ಪುಣಚ ಕಡೆಗೆ ತೆರಳಿದ್ದ ಸಂದರ್ಭ ದಂಬೆ ನಿವಾಸಿ ಜೀಪ್ ಚಾಲಕ ಬುದ್ದ ನಾಯ್ಕ್ ಯಾನೆ ಮುದ್ದಣ್ಣ (57) ಎನ್ನುವವರು ಸಹಚರನ ಬಂದೂಕಿನಿಂದ ಗುಂಡೇಟು ತಿಂದು ಸಾವನ್ನಪ್ಪಿದ ಪ್ರಕರಣದಲ್ಲಿ ನಾಲ್ವರನ್ನು ವಿಟ್ಲ ಪೊಲೀಸರು ನಿನ್ನೆ ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತರನ್ನು  ಆಜೇರುಮಜಲು ನಿವಾಸಿಗಳಾದ ಸತೀಶ್ ಗೌಡ (35), ಸುಂದರ ಗೌಡ (32), ಚಿದಾನಂದ ಗೌಡ (30) ಮತ್ತು ಬಂದೂಕಿನ ಮಾಲಕ ವೆಂಕಪ್ಪ ಗೌಡ (49) ಎನ್ನಲಾಗಿದೆ.

ಮಂಗಳವಾರ ರಾತ್ರಿ ಪುಣಚ-ತೋರಣಕಟ್ಟೆ ರಸ್ತೆಯ ನಟ್ಟಿ ಎಂಬಲ್ಲಿ ಬೇಟೆಗೆ ತೆರಳಿದ್ದ ಆರೋಪಿಗಳು ಮುದ್ದಣ್ಣರ ಮನೆಗೆ ಬಂದು ಅವರನ್ನೂ ತಮ್ಮೊಂದಿಗೆ ಕರೆದೊಯ್ದಿದ್ದರು. ಈ ಸಂದರ್ಭ ಸತೀಶ್ ಗೌಡನ ಕೈಯಲ್ಲಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಮುದ್ದಣ್ಣ ಗೌಡರ ಹಣೆಗೆ ತಗುಲಿ ಸಾವನ್ನಪ್ಪಿದ್ದರು. ಈ ಹತ್ಯೆಯನ್ನು ಮುಚ್ಚಿಡಲು ಆರೋಪಿಗಳು ವಿಫಲ ಯತ್ನವನ್ನು ನಡೆಸಿದ್ದರು.

ಮೃತ ಮುದ್ದಣ್ಣರ ಪುತ್ರ ಶಶಿಧರ ಅವರ ದೂರಿನ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಬಂದೂಕು ಮತ್ತು ಮಾರುತಿ ಓಮ್ನಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂದೂಕು ವೆಂಕಪ್ಪ ಗೌಡರದ್ದಾಗಿದ್ದು, ಜಮ್ಮು ಕಾಶ್ಮೀರದ ನೋಂದಣಿ ಹೊಂದಿದೆ ಎನ್ನಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment